ದಾವಣಗೆರೆ ವೆಂಕಾ ಭೋವಿ ಕಾಲೋನಿಯಲ್ಲಿ ಗುರುವಾರ ರಾತ್ರಿ ಗಣೇಶ ವಿಸರ್ಜನೆ ವೇಳೆ ಕಲ್ಲು ತೂರಾಟ ನಡೆದಿದ್ದು, ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿತ್ತು. ಈ ಘಟನೆಯಲ್ಲಿ ಪೊಲೀಸ್ ಇನ್ಸ್ ಪೆಕ್ಟರ್ ಮತ್ತು ಸಬ್ ಇನ್ಸ್ ಪೆಕ್ಟರ್ ಸೇರಿದಂತೆ ಮೂವರು ಪೊಲೀಸ್ ಸಿಬ್ಬಂದಿಗೆ ಗಾಯಗಳಾಗಿದ್ದು, ಹಲವಾರು ಮನೆಗಳು ಮತ್ತು ವಾಹನಗಳ ಕಿಟಕಿ ಗಾಜುಗಳು ಹಾನಿಗೊಳಗಾಗಿವೆ.
ಘಟನೆಯ ಸಂಬಂಧ ಈಗಾಗಲೇ 30 ಜನ ಆರೋಪಿಗಳನ್ನು ಬಂಧಿಸಲಾಗಿದೆ. ಸದ್ಯ ಪರಿಸ್ಥಿತಿ ಹತೋಟಿಯಲ್ಲಿದ್ದು, ಜನರು ಸಹಕಾರ ನೀಡಿದ್ದರಿಂದ ಶಾಂತಿಯುವ ವಾತಾವರಣವಿದೆ ಎಂದು ಪೂರ್ವ ವಲಯ ಐಜಿಪಿ ರಮೇಶ್ ಬಾನೋತ್ ಮಾಹಿತಿ ನೀಡಿದ್ದಾರೆ.
ದಾವಣಗೆರೆಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, “ಗುರುವಾರ ಸಂಜೆ 6.30ರ ವೇಳೆಗೆ ಗಣೇಶ ವಿಸರ್ಜನೆಯ ಮೆರವಣಿಗೆ ನಡೆಯುತ್ತಿರುವಾಗ ಕಲ್ಲು ತೂರಾಟ ನಡೆಸಲಾಗಿದೆ. ಪೊಲೀಸರು ಸ್ಥಳದಲ್ಲೇ ಇದ್ದಿದ್ದರಿಂದ 8 ಗಂಟೆಯೊಳಗೆ ಪರಿಸ್ಥಿತಿಯನ್ನು ನಿಯಂತ್ರಿಸಿದ್ದೇವೆ. ಯಾವುದೇ ಅಮಾಯಕರನ್ನೂ ಬಂಧಿಸಿಲ್ಲ. ಬಂಧಿಸಲ್ಪಟ್ಟಿರುವ ಆರೋಪಿಗಳ ಪೈಕಿ 10 ಮಂದಿ ಆರೋಪಿಗಳು ಬಿಯರ್ ಬಾಟಲ್ ಹಿಡಿದುಕೊಂಡಿದ್ದು, ಪೊಲೀಸರ ಕೈಗೆ ರೆಡ್‌ಹ್ಯಾಂಡಾಗಿ ಸಿಕ್ಕಿಬಿದ್ದಿದ್ದಾರೆ” ಎಂದು ತಿಳಿಸಿದರು.
“ಇತ್ತೀಚೆಗೆ ಮಂಡ್ಯ ಜಿಲ್ಲೆಯ ನಾಗಮಂಗಲದಲ್ಲಿ ನಡೆದ ಗಲಾಟೆಯ ವಿರೋಧಿಸಿ ನಡೆಸಲಾಗಿದ್ದ ಪ್ರತಿಭಟನೆಯ ವೇಳೆ ಸತೀಶ್ ಪೂಜಾರಿ ಎಂಬಾತ ನೀಡಿದ ಪ್ರಚೋದನಕಾರಿ ಹೇಳಿಕೆಯಿಂದ ಈ ಅಶಾಂತಿ ಪರಿಸ್ಥಿತಿ ನಿರ್ಮಾಣವಾಗಿರುವುದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ. ದಾವಣಗೆರೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಉಮಾ ಪ್ರಶಾಂತ್ ಅವರ ನೇತೃತ್ವದಲ್ಲಿ ಗುರುವಾರ ತಡರಾತ್ರಿಯೇ ಕಾರ್ಯಾಚರಣೆ ನಡೆಸಿದ್ದು, ಈವರೆಗೆ ಎರಡೂ ಗುಂಪಿನ 30 ಜನರನ್ನು ಬಂಧಿಸಲಾಗಿದೆ” ಎಂದು ಐಜಿಪಿ ರಮೇಶ್ ಬಾನೋತ್ ತಿಳಿಸಿದ್ದಾರೆ.
ಇದನ್ನು ಓದಿದ್ದೀರಾ? ವಿಜಯಪುರ | ಲೆಕ್ಕಾಚಾರದ ವಿಚಾರ: ಗ್ರಾ.ಪಂ. ಸಿಬ್ಬಂದಿಗೆ ಚಪ್ಪಲಿಯಿಂದ ಹಲ್ಲೆ ನಡೆಸಿದ ಉಪಾಧ್ಯಕ್ಷೆ!
ಕಲ್ಲು ತೂರಾಟ ಘಟನೆಯಿಂದ ಬಂದೋಬಸ್‌ಗೆ ನಿಯುಕ್ತರಾಗಿದ್ದ ಪೊಲೀಸ್ ಕಾನ್‌ಸ್ಟೆಬಲ್‌ಗಳಾದ ಅನ್ನಪೂರ್ಣ, ರಘು ಅವರಿಗೆ ಕಲ್ಲು ಬಡಿದು ಗಾಯವಾಗಿದ್ದು, ಜಿಲ್ಲಾಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಾಗಿದ್ದಾರೆ. ಗಲಭೆ ಆರಂಭವಾಗುತ್ತಿದ್ದಂತೆಯೇ ಅಂಗಡಿ ಮುಂಗಟ್ಟುಗಳನ್ನು ಬಂದ್ ಮಾಡಿಸಲಾಗಿತ್ತು. ನಗರದಲ್ಲಿ ಹೆಚ್ಚುವರಿಯಾಗಿ ಪೊಲೀಸ್ ಸಿಬ್ಬಂದಿಯನ್ನು ಭದ್ರತೆಗಾಗಿ ನಿಯೋಜಿಸಲಾಗಿದ್ದು, ಸದ್ಯ ವಾತಾವರಣ ಸಹಜ ಸ್ಥಿತಿಗೆ ಬಂದಿದೆ. ಅಂಗಡಿಮುಂಗಟ್ಟುಗಳು ಎಂದಿನಂತೆ ತೆರೆದಿವೆ. ಹಾಗಾಗಿ, 144 ಸೆಕ್ಷನ್ ಅಳವಡಿಸಿಲ್ಲ. ಶಾಂತಿ ಕಾಪಾಡಲು ಸಹಕರಿಸಿದ ಎಲ್ಲ ಸಾರ್ವಜನಿಕರಿಗೆ ಧನ್ಯವಾದ ಸಲ್ಲಿಸುತ್ತೇನೆ” ಎಂದು ಪೂರ್ವ ವಲಯ ಐಜಿಪಿ ತಿಳಿಸಿದ್ದಾರೆ.
ಸೋಷಿಯಲ್ ಮೀಡಿಯಾಗಳಲ್ಲಿ ಪ್ರಚೋದನಾಕಾರಿ ಹೇಳಿಕೆಗಳನ್ನು ನೀಡುವವರ ವಿರುದ್ಧ ಕಠಿಣ ಕ್ರಮಗಳನ್ನು ಕೈಗೊಳ್ಳುತ್ತೇವೆ. ಕಲ್ಲು ತೂರಾಟ ಪ್ರಕರಣ ಸಂಬಂಧ ಎರಡೂ ಗುಂಪಿನವರ ವಿರುದ್ಧವೂ ಕೇಸು ದಾಖಲಾಗಿದೆ. ಪ್ರಚೋದನಕಾರಿ ಭಾಷಣ ಮಾಡಿದ್ದ ಬಗ್ಗೆ ಕೇಸು ದಾಖಲಿಸಿದ್ದು, ತನಿಖೆ ನಡೆಯುತ್ತಿದೆ ಎಂದು ಇದೇ ವೇಳೆ ಪೂರ್ವ ವಲಯ ಐಜಿಪಿ ರಮೇಶ್ ಬಾನೋತ್ ಮಾಹಿತಿ ನೀಡಿದ್ದಾರೆ.
