ಜಾತಿಗಣತಿ ಅವೈಜ್ಞಾನಿಕವಾಗಿದೆ ಎನ್ನುವ ಆರೋಪ ಕೇಳಿ ಬಂದಿದೆ. ಸರ್ಕಾರ ಮನೆ ಮನೆ ತೆರಳಿ ವೈಜ್ಞಾನಿಕವಾಗಿ ಸರ್ವೇ ಮಾಡಿಸಲು ಮುಂದಾಗಬೇಕು ಎಂದು ವೀರಶೈವ ಪಂಚಮಸಾಲಿ ಪೀಠದ ವಚನಾನಂದ ಸ್ವಾಮೀಜಿ ಸರ್ಕಾರಕ್ಕೆ ಸಲಹೆ ನೀಡಿದರು.
ವೀರಶೈವ ಲಿಂಗಾಯತ ಪಂಚಮಸಾಲಿ ಪೀಠದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಮಾಜದ ಯಾವ ಜಾತಿಗೂ ಅನ್ಯಾಯವಾಗದ ರೀತಿಯಲ್ಲಿ ಎಲ್ಲರನ್ನೂ ಪರಿಗಣನೆಗೆ ತೆಗೆದುಕೊಂಡು ಜಾತಿಗಣತಿ ನಡೆಸಿದಾಗ ಮಾತ್ರ ಸರ್ವರಿಗೂ ನ್ಯಾಯ ಕೊಡಲು ಸಾಧ್ಯವಾಗುತ್ತದೆ ಇದು ಪೀಠದ ಆಶಯವೂ ಆಗಿದೆ ಎಂದರು.
ಕಳೆದ 20 ವರ್ಷಗಳಿಂದಲೂ ಕೇಂದ್ರದ ಒಬಿಸಿ ಪಟ್ಟಿಯಲ್ಲಿ ಎಲ್ಲಾ ವೀರಶೈವ ಒಳ ಪಂಗಡಗಳನ್ನು ಸೇರಿಸಬೇಕೆಂದು ಪಂಚಮಸಾಲಿ ಪೀಠ ನಿರಂತರ ಹೋರಾಟ ಮಾಡುತ್ತಿದೆ ಅಲ್ಲದೆ ಕೇಂದ್ರಕ್ಕೆ ಮನವಿಯನ್ನು ಸಲ್ಲಿಸಿದ್ದರು. ಮನವಿಗೆ ಸ್ಪಂದಿಸಿದ ಕೇಂದ್ರ ಸರ್ಕಾರ ರಾಜ್ಯ ಸರ್ಕಾರಕ್ಕೆ ಮಾಹಿತಿ ಕೇಳಿ ಪತ್ರ ಬಂದಿದ್ದು ರಾಜ್ಯ ಸರ್ಕಾರ ಕೂಡಲೇ ಪರೀಶಿಲಿಸಿ ಕೇಂದ್ರಕ್ಕೆ ಶಿಫಾರಸ್ಸು ಮಾಡಲಿ ಎಂದು ಒತ್ತಾಯಿಸಿದರು.
ಡಿ.23 ಮತ್ತು 24ರಂದು ದಾವಣಗೆರೆಯಲ್ಲಿ ನಡೆಯುವ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ 24ನೇ ಮಹಾಅಧಿವೇಶನದಲ್ಲಿ ಪಂಚಮಸಾಲಿ ಸೇರಿದಂತೆ ಎಲ್ಲಾ ಒಳ ಪಂಗಡಗಳ ಸಮಾಜ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಕರೆ ನೀಡಿದರು. ದಾವಣಗೆರೆಯಲ್ಲಿ ನಡೆಯುತ್ತಿರುವ ಮಹಾ ಅಧಿವೇಶನವು ವೀರಶೈವ ಸಮಾಜದ ಬೇಕು ಬೇಡಗಳ ಬಗ್ಗೆ ಚರ್ಚೆಯ ವೇದಿಕೆಯಾಗಲಿದ್ದು ಉತ್ತಮ ಪಲಿತಾಂಶ ಬರುವ ನಿರೀಕ್ಷೆಯಿದೆ ಎಂದರು.
ಪೀಠದ ಆಡಳಿತಾಧಿಕಾರಿ ಡಾ. ರಾಜಕುಮಾರ್ ಮಾತನಾಡಿ, 24ನೇ ಮಹಾ ಅಧಿವೇಶನದಲ್ಲಿ ವೀರಶೈವ ಲಿಂಗಾಯತರ ಶಕ್ತಿಯ ಅನಾವರಣವಾಗಲಿದೆ ಎಂದ ಅವರು ಸಂಘಟನೆ, ಸಹಕಾರ, ಕೃಷಿ ಸೇರಿದಂತೆ ಇತರೆ ವಿಚಾರಗಳ ಬಗ್ಗೆ ಹಲವಾರು ಗೋಷ್ಠಿಗಳು ಹಾಗೂ ಚಿಂತನೆಗಳು ನಡೆಯಲಿದೆ ಎಂದರು. ಹರಿಹರ ಪೀಠದಲ್ಲಿ ಮಹಾ ಅಧಿವೇಶನಕ್ಕೆ ಬರುವವರಿಗೆ ವಸತಿ ಹಾಗೂ ಪ್ರಸಾದ ವ್ಯವಸ್ಥೆ ಮಾಡಲಾಗಿದೆ ಎಂದು ಮಾಹಿತಿ ನೀಡಿದ ಅವರು ಪೀಠದಲ್ಲಿ ನಿರಂತರ ದಾಸೋಹ ವ್ಯವಸ್ಥೆ ಇರುತ್ತದೆ ಎಂದರು.
ಪ್ರಧಾನ ಧರ್ಮದರ್ಶಿ ಬಿ.ಸಿ.ಉಮಾಪತಿ ಮಾತನಾಡಿ, ದಾವಣಗೆರೆಯಲ್ಲಿ ನಡೆಯುವ 24ನೇ ಮಹಾ ಅಧಿವೇಶನ ವೀರಶೈವ ಲಿಂಗಾಯತ ಸಮಾಜದ ಎಲ್ಲಾ ಒಳಪಂಗಡಗಳು ಒಂದಾಗಲು ವೇದಿಕೆಯಾಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಸುದ್ದಿಗೋಷ್ಠಿಯಲ್ಲಿ ಪೀಠದ ಧರ್ಮದರ್ಶಿಗಳಾದ ಎಚ್.ಪಿ. ಬಾಬಣ್ಣ, ಚಂದ್ರಶೇಖರ ಪೂಜಾರ್ ಹಾಗೂ ಇತರರು ಹಾಜರಿದ್ದರು.