ಶಾಲೆಯ ಮೇಲ್ಛಾವಣಿ ದಿಢೀರ್ ಕುಸಿದು ಬಿದ್ದಿದ್ದು, ಸ್ವಲ್ಪದರಲ್ಲೇ ಮಕ್ಕಳು ಪಾರಾಗಿರುವ ಘಟನೆ ದಾವಣಗೆರೆ ನಗರದ ಹೊರವಲಯದ ಜಿಲ್ಲಾಧಿಕಾರಿಗಳ ಕಚೇರಿ ಹತ್ತಿರದ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠ ಶಾಲೆ ಕರೂರಿನಲ್ಲಿ ನಡೆದಿದೆ.
ಈ ಶಾಲೆ ದಾವಣಗೆರೆ ಜಿಲ್ಲಾಧಿಕಾರಿಗಳ ಕಚೇರಿಯಿಂದ ಕೂಗಳತೆಯ ಹೊರವಲಯದ ಕರೂರು ಗ್ರಾಮದಲ್ಲಿದೆ. ಒಂದರಿಂದ ಐದನೇ ತರಗತಿವರೆಗೆ ಇರುವ ಕನ್ನಡ -ಉರ್ದು ಕಿರಿಯ ಪ್ರಾಥಮಿಕ ಶಾಲೆಯಾಗಿದ್ದು, ದಾವಣಗೆರೆಯ ಅತ್ಯಂತ ಹಳೆಯ ಶಾಲೆ ಎಂಬ ಹೆಗ್ಗಳಿಕೆಯೂ ಇದಕ್ಕಿದೆ.
ಇತ್ತೀಚಿಗೆ ನಿರಂತರವಾಗಿ ಸುರಿದ ಭಾರೀ ಮಳೆಗೆ ಸೋರುತ್ತಿರುವ ಹೆಂಚುಗಳ ಮಧ್ಯೆ ಇರುವ ಮರದ ತುಂಡುಗಳು ಬಹುತೇಕವಾಗಿ ಶಿಥಿಲಗೊಂಡಿದ್ದು, ಮಧ್ಯಾಹ್ನ 1.30ರ ಸಮಯಕ್ಕೆ ಏಕಾಏಕಿ ಛಾವಣಿ ಕುಸಿದು ಬಿದ್ದಿದ್ದು ಮಕ್ಕಳು ಮಧ್ಯಾಹ್ನದ ಸಮಯದಲ್ಲಿ ಹೊರಗಿದ್ದ ಕಾರಣ ಪ್ರಾಣಪಾಯದಿಂದ ಪಾರಾಗಿದ್ದಾರೆ.
ಈ ಕೊಠಡಿಯನ್ನು ಕೆಲ ವರ್ಷಗಳಿಂದ ಮಕ್ಕಳ ಬೋಧನೆಗೆ ಬಳಸುತ್ತಿರಲಿಲ್ಲ ಎಂದು ಮಾಹಿತಿ ತಿಳಿದು ಬಂದಿದ್ದು, ಆದರೆ ಬೇರೆ ಕೊಠಡಿಗಳಿಗೆ ಹೊಂದಿಕೊಂಡಿದೆ. ಜೊತೆಗೆ ಅನ್ಯ ಉದ್ದೇಶಕ್ಕೆ ಬಳಕೆ ಮಾಡುತ್ತಿದ್ದರು, ಹಾಗೂ ಅಲ್ಲಿಗೆ ಮಕ್ಕಳು ಕೂಡ ಓಡಾಡುತ್ತಿದ್ದರು ಎಂದು ತಿಳಿದು ಬಂದಿದೆ.
ಸರ್ಕಾರಿ ಶಾಲೆಗಳ ದುರವಸ್ಥೆಗೆ ಇದೊಂದು ಕನ್ನಡಿ ಆಗಿದ್ದು. ಸರ್ಕಾರ ಶಾಲೆಗಳು ದುರಸ್ತಿ ಕಾಣದೆ ಅಭಿವೃದ್ಧಿ ಮರೀಚಿಕೆಯಾಗಿದೆ. ಶಾಲೆಯ ಜಾಗದ ವಿವಾದವು ಶಾಲೆಯಲ್ಲಿ ಮೂಲ ಸೌಕರ್ಯ ನಿರ್ಮಾಣಕ್ಕೆ ಅಡ್ಡಿಯಾಗಿದೆ ಎನ್ನಲಾಗಿದೆ. ಈ ಶಾಲೆಯ ಜಾಗವನ್ನು ಯಶೋಧಮ್ಮ ಎಂಬುವವರು ಬೇರೊಬ್ಬರಿಂದ ಖರೀದಿಸಿದ್ದೇವೆ ಎಂದು ಶಾಲೆಯ ಅಭಿವೃದ್ಧಿಗೆ ಅಡ್ಡಿಪಡಿಸುತ್ತಿದ್ದಾರೆ ಎನ್ನುವ ಮಾತು ಕೇಳಿ ಬಂದಿದೆ. ಜಾಗದ ವಿವಾದವನ್ನು ಬಗೆಹರಿಸಲು ಇದುವರೆಗೂ ಯಾರೊಬ್ಬರೂ ಆಸಕ್ತಿ ವಹಿಸಿಲ್ಲ ಎಂದು ಸ್ಥಳೀಯ ಪೋಷಕರು ಮಾಹಿತಿ ನೀಡಿದ್ದಾರೆ.
ಜಾಗ ಮಾರಾಟ ಮಾಡಿರುವವರು ಹೇಳುವಂತೆ ಅವರು ಶಾಲೆಯ ಜಾಗ ಬಿಟ್ಟು ಮಾರಾಟ ಮಾಡಿದ್ದು ಶಾಲೆಯ ಜಾಗಕ್ಕೂ ಅವರಿಗೂ ಸಂಬಂಧವಿಲ್ಲ ಎಂದು ಹೇಳಿದ್ದಾರೆ. ಆದರೆ ಖರೀದಿಸಿದವರು ಇವರು ಸ್ಥಳೀಯ ರಾಜಕಾರಣಿಗಳ ಪ್ರಭಾವ ನನಗೆ ಇದೆ. ಶಾಲೆಯ ಜಾಗ ನಮ್ಮದು ಎಂದು ಶಾಲೆಯ ಜಾಗವನ್ನು ಅಭಿವೃದ್ದಿ ಪಡಿಸಲು ಬಿಡುತ್ತಿಲ್ಲ ಎಂದು ಸ್ಥಳೀಯರು ಆರೋಪಿಸಿದ್ದಾರೆ.
ಸರ್ಕಾರಿ ಶಾಲೆಯ ಈ ಪರಿಸ್ಥಿತಿಯ ಮಧ್ಯೆ ಮಕ್ಕಳು ಅತಂತ್ರ ಸ್ಥಿತಿಯನ್ನು ಎದುರಿಸುತ್ತಿದ್ದು, ಮಕ್ಕಳು ಆಗಬಹುದಾಗಿದ್ದ ಅಪಾಯದಿಂದ ಸ್ವಲ್ಪದರಲ್ಲೇ ಪಾರಾಗಿದ್ದಾರೆ. ಮುಂದಾದರೂ ತಕ್ಷಣ ಜಿಲ್ಲಾಡಳಿತ ಸ್ಥಳೀಯ ರಾಜಕಾರಣಿಗಳು ಮತ್ತು ಸಚಿವರು ಶಾಸಕರು ಈ ಬಗ್ಗೆ ಗಮನಹರಿಸಿ ಶಾಲೆಯ ಅಭಿವೃದ್ಧಿಯನ್ನು ಕೈಗೊಂಡು ಮಕ್ಕಳನ್ನು ಅನಾಹುತದಿಂದ ಪಾರು ಮಾಡಬೇಕು ಎಂದು ಪ್ರಜಾಪರಿವರ್ತನಾ ವೇದಿಕೆ ಮುಖಂಡ ಲಿಂಗರಾಜ್ ಮತ್ತು ಸ್ಥಳೀಯರು, ಮಕ್ಕಳ ಪೋಷಕರು ಒತ್ತಾಯಿಸಿದ್ದಾರೆ.
ವರದಿ: ವಿನಾಯಕ್ ದಾವಣಗೆರೆ
