ಈ ಊರಿಗೆ ಕಾಲಿಟ್ಟರೆ ಕಾಣುವುದು ಬರೀ ಕಸದ ರಾಶಿ. ರಸ್ತೆಗಳ ಅಕ್ಕಪಕ್ಕ ಅಷ್ಟೇ ಅಲ್ಲ ರಸ್ತೆಯ ಮೇಲೆಲ್ಲಾ ಕಸ, ಕಸದಿಂದ ತುಂಬಿತುಳುಕುತ್ತಿರುವ ಚರಂಡಿಗಳು, ಇದು ರಸ್ತೆಯೋ ಕಸ ಡಂಪಿಂಗ್ ಪ್ರದೇಶವೋ ಎಂದು ಅನುಮಾನ ನಿಮ್ಮನ್ನು ಕಾಡದೇ ಇರುವುದಿಲ್ಲ.
ಇದು ದಾವಣಗೆರೆ ಜಿಲ್ಲೆ ಜಗಳೂರು ತಾಲೂಕಿನ ದಿದ್ದಿಗೆ ಎನ್ನುವ ಗ್ರಾಮ. ಈ ಸ್ಥಿತಿ ಇಲ್ಲಿನ ಜನರಿಗೆ ಎರಡು ವರ್ಷಗಳಿಂದ ಸರ್ವೇಸಾಮಾನ್ಯವಾಗಿದೆ. ಇಡೀ ಊರಿನಲ್ಲಿ ಚರಂಡಿಗಳು ತುಂಬಿತುಳುಕುತ್ತಿದ್ದು ರಸ್ತೆ ಮೇಲೆಲ್ಲ ಚರಂಡಿಯ ನೀರು ಹರಿವ ಸ್ಥಿತಿಇದೆ. ಇನ್ನೂ ಕೆಲವು ಕಡೆಗಳಲ್ಲಿ ಮನೆ ಅಂಗಳಕ್ಕೆ ಮನೆ ಬಾಗಿಲಲ್ಲಿ ಹರಿಯುತ್ತವೆ.
ಹೀಗೆ ಹರಿಯುವ ಚರಂದಿ ನೀರು ಅಲ್ಲಲ್ಲಿ ನಿಂತು ಸೊಳ್ಳೆ, ನೊಣಗಳು ಹೆಚ್ಚಾಗಿದ್ದು, ಸಾಂಕ್ರಾಮಿಕ ರೋಗಗಳು ಹರಡುವ ಭೀತಿ ಗ್ರಾಮಸ್ಥರನ್ನು ಕಾಡುತ್ತಿದೆ. ಈಗಾಗಲೇ ಮಕ್ಕಳು, ಮಹಿಳೆಯರು ಸೇರಿ ವೃದ್ಧ ಸೊಳ್ಳೆಗಳಿಂದ ತೊಂದರೆ ಅನುಭವಿಸುತ್ತಿದ್ದಾರೆ. ಗ್ರಾಮದ ಜನರಲ್ಲಿ ಸಣ್ಣದಾಗಿ ಜ್ವರ ಕಾಣಿಸಿಕೊಳ್ಳುತ್ತಿದ್ದು, ಚರಂಡಿಗಳ ಹೂಳು ತೆಗೆದು ಸ್ವಚ್ಛತೆ ಕಾಪಾಡಬೇಕು ಎನ್ನುವುದು ಗ್ರಾಮಸ್ಥರ ಮನವಿ.
ಗ್ರಾಮದಲ್ಲಿ ಎರಡು ಮೂರು ತಿಂಗಳಿಂದ ಪಿಡಿಒ ಕೂಡ ಕರ್ತವ್ಯಕ್ಕೆ ಹಾಜರಾಗದೆ ಗೈರು ಹಾಜರಾಗಿದ್ದು, ಗ್ರಾಮ ಪಂಚಾಯತಿಯಲ್ಲಿ ಅರಾಜಕತೆಯ ತಲೆದೂರಿದೆ. ಗ್ರಾಮಸ್ಥರು ಯಾರಿಗೆ ದೂರು ನೀಡಬೇಕು ಎನ್ನುವುದೇ ತಿಳಿಯುತ್ತಿಲ್ಲ ಎನ್ನುತ್ತಾರೆ ಗ್ರಾಮಸ್ಥರು.
ಕಳೆದ ಏಳು ತಿಂಗಳಗಳಿಂದ ಮನವಿ ಮಾಡಿ ಪ್ರತಿಭಟಿಸಿದರೂ, ಮೇಲಾಧಿಕಾರಿಗಳಿಗೆ ದೂರು ನೀಡಿದರೂ ಪ್ರಯೋಜನವಾಗಿಲ್ಲ. ಚರಂಡಿಗಳು ಯಾವುದೇ ಸ್ವಚ್ಛತೆ ಕಂಡಿಲ್ಲ. ರಸ್ತೆಯಲ್ಲಿ ಮಕ್ಕಳು ಚರಂಡಿಯ ನೀರು ಕೊಳಚೆಯ ಮೇಲೆ ಆಟವಾಡುವ ಹಾಗೂ ಅದರ ಮೇಲೆ ಎಲ್ಲರೂ ನಡೆದುಕೊಂಡು ಓಡಾಡುವ ಪರಿಸ್ಥಿತಿ ಇದ್ದು, ತಕ್ಷಣವೇ ಹೂಳು ತೆಗೆಸಿ ಚರಂಡಿಯ ಸ್ವಚ್ಛತೆ ಕಾಪಾಡಿ, ಜನರ ಆರೋಗ್ಯ ಕಾಪಾಡಬೇಕು ಎಂದು ಗ್ರಾಮಸ್ಥರು ಆಗ್ರಹಿಸುತ್ತಿದ್ದಾರೆ.
ಕಳೆದ ಎರಡು ವರ್ಷಗಳಿಂದ ಚರಂಡಿಯ ಹೂಳನ್ನು ಸರಿಯಾಗಿ ತೆಗೆದಿಲ್ಲ. ಕೆಲವೆಡೆ ರಸ್ತೆ ಮೇಲೆಲ್ಲಾ ಕೊಳಚೆ ಹರಿದು ಅಸಹ್ಯಕರ ಪರಿಸ್ಥಿತಿ ಇದ್ದು ಗ್ರಾಮ ಪಂಚಾಯಿತಿಯ ಯಾರೊಬ್ಬರೂ ಅದರ ಬಗ್ಗೆ ಗಮನ ಹರಿಸಿಲ್ಲ. ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿಗೆ ಏಳು ತಿಂಗಳಿಂದ ಮನವಿ ಮಾಡಿದರೂ ಹೂಳು ತೆಗೆಸದೆ ಪರಿಸ್ಥಿತಿ ಬದಲಾಗಿಲ್ಲ. ಊರಲ್ಲಿ ಹಬ್ಬ, ಹರಿದಿನಗಳು ಜಾತ್ರೆಗಳು ಪ್ರಾರಂಭವಾಗುತ್ತಿದ್ದು ಕೊಳಚೆ ತುಳಿದುಕೊಂಡೆ ಊರಿನಲ್ಲಿ ಹಬ್ಬ ಹರಿದಿನಗಳನ್ನು ಆಚರಿಸಬೇಕಾದ ಪರಿಸ್ಥಿತಿ ಇದೆ ಎಂದು ಅಸಮಾಧಾನ ವ್ಯಕ್ತಪಡಿಸುತ್ತಾರೆ ದಿದ್ದಿಗೆ ಗ್ರಾಮದ ನಿವಾಸಿ ನಾಗರಾಜ.
ಈ ಮಧ್ಯೆ ಬೀದಿ ದೀಪಗಳ ಸಮಸ್ಯೆ ಕೂಡ ಅಲ್ಲಲ್ಲಿ ಹೆಚ್ಚಾಗಿದ್ದು, ರಾತ್ರಿಯಲ್ಲಿ ಕೆಲವು ರಸ್ತೆಗಳಲ್ಲಿ ನಡೆದು ಹೋಗಲು ದೀಪಗಳ ಬೆಳಕು ಇಲ್ಲದಂತಾಗಿದೆ ಮತ್ತು ಅದರೊಂದಿಗೆ ಗ್ರಾಮ ಪಂಚಾಯಿತಿನಲ್ಲಿ ಅವ್ಯವಹಾರದ ಆರೋಪ ಕೂಡ ಜನರಿಂದ ಕೇಳಿ ಬಂದಿದೆ.
ಈ ಬಗ್ಗೆ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಅವರನ್ನು ಸಂಪರ್ಕಿಸಲು ಪ್ರಯತ್ನಿಸಿದಾಗ ಅವರು ಸಂಪರ್ಕಕ್ಕೆ ದೊರೆಯಲಿಲ್ಲ, ಅವರನ್ನು ಅಮಾನತು ಮಾಡಿರುವ ಮಾಹಿತಿ ಕೇಳಿಬಂದಿದೆ.
ಈ ಬಗ್ಗೆ ಗ್ರಾಮ ಪಂಚಾಯಿತ್ ಕಾರ್ಯದರ್ಶಿ ಅವರನ್ನು ಮಾತನಾಡಿಸಿದಾಗ ಈ ಬಗ್ಗೆ ಗ್ರಾಮ ಪಂಚಾಯತಿಯ ಕಾರ್ಯದರ್ಶಿ ಅವರನ್ನು ಮಾತನಾಡಿಸಿದಾಗ ಅವರು ಊರಿನಲ್ಲಿ ಸ್ವಚ್ಛತೆ ಕಾರ್ಯದಿಂದಾಗಿ ಆಗಿಂದಾಗ್ಗೆ ನಡೆಯುತ್ತಿದ್ದು, ಕೆಲವು ಭಾಗಗಳಲ್ಲಿ ಜಾಡಮಾಲಿಗಳ ಕೊರತೆಯಿಂದ ಸ್ವಚ್ಛತೆ ಕಾರ್ಯ ಸಾಧ್ಯವಾಗಿಲ್ಲ. ಸ್ವಚ್ಛತೆ ಕಾರ್ಯ ಕೈಗೊಳ್ಳಲು ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ ಕರ್ತವ್ಯಕ್ಕೆ ಬರಬೇಕಿದ್ದು ಅವರು ಕರ್ತವ್ಯಕ್ಕೆ ಬಂದ ತಕ್ಷಣ ಸ್ವಚ್ಛತೆ ಕಾರ್ಯ ಪ್ರಾರಂಭಿಸುವುದಾಗಿ ಮಾಹಿತಿ ನೀಡಿದರು.
ಈಗಲಾದರೂ ಸ್ಥಳೀಯ ಆಡಳಿತ ಮತ್ತು ಜಿಲ್ಲಾಡಳಿತ ಎಚ್ಚೆತ್ತುಕೊಂಡು ಗ್ರಾಮಗಳ ಚರಂಡಿಯ ಸ್ವಚ್ಛತೆಯನ್ನು ಸಮರೋಪಾದಿಯಲ್ಲಿ ಕೈಗೊಳ್ಳಬೇಕಾದ ಅನಿವಾರ್ಯತೆ ಇದ್ದು, ಆದಷ್ಟುಬೇಗ ಕ್ರಮಕೈಗೊಳ್ಳಲಿ ಎನ್ನುವುದು ಸಾರ್ವಜನಿಕರ ಆಗ್ರಹ.