ಕಾಳಗಿ ತಾಲೂಕನ್ನು ತಕ್ಷಣ ಬರಪೀಡಿತ ಪ್ರದೇಶವೆಂದು ಘೋಷಿಸಬೇಕು, ರೈತರ ಸಂಪೂರ್ಣ ಕೃಷಿ ಸಾಲವನ್ನು ಮನ್ನಾ ಮಾಡಬೇಕು ಹಾಗೂ ಜಾನುವಾರುಗಳಿಗಾಗಿ ಗೋಶಾಲೆಗಳನ್ನು ಆರಂಭಿಸಬೇಕು ಎಂದು ಆಗ್ರಹಿಸಿ ಕರ್ನಾಟಕ ಪ್ರಾಂತ ರೈತ ಸಂಘ (ಕೆಪಿಆರ್‌ಎಸ್) ಕಾರ್ಯಕರ್ತರು ಶುಕ್ರವಾರ ಪಟ್ಟಣದ ಡಾ. ಬಿ.ಆರ್. ಅಂಬೇಡ್ಕರ್ ವೃತ್ತದಲ್ಲಿ ರಸ್ತೆ ತಡೆ ನಡೆಸಿ ಪ್ರತಿಭಟನೆ ನಡೆಸಿದರು.
ಬಳಿಕ ತಹಶೀಲ್ದಾರರ ಮೂಲಕ ಜಿಲ್ಲಾಧಿಕಾರಿ ಹಾಗೂ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಗೆ ಮನವಿ ಸಲ್ಲಿಸಿದ ಪ್ರತಿಭಟನಾಕಾರರು, ಜೂನ್ ತಿಂಗಳಲ್ಲಿ ವಾಡಿಕೆಯಷ್ಟು ಮಳೆಯಾಗದ ಹಿನ್ನೆಲೆಯಲ್ಲಿ ಎಲ್ ನಿನೋ ಪರಿಣಾಮದಿಂದ ತಾಲೂಕಿನಲ್ಲಿ ಬರದ ವಾತಾವರಣ ನಿರ್ಮಾಣವಾಗಿದೆ. ಇದರಿಂದ ಮುಂಗಾರು ಬಿತ್ತನೆ ಕುಂಠಿತಗೊಂಡಿದ್ದು, ಈಗಾಗಲೇ ಬಿತ್ತಿರುವ ಹೆಸರು, ಉದ್ದು, ತೊಗರಿ ಹಾಗೂ ಸೋಯಾಬೀನ್ ಬೆಳೆಗಳು ತೇವಾಂಶದ ಕೊರತೆಯಿಂದ ಒಣಗುತ್ತಿವೆ ಎಂದು ದೂರಿದರು.
ಪ್ರತಿಭಟನೆ ಉದ್ದೇಶಿಸಿ ಕರ್ನಾಟಕ ಪ್ರಾಂತ ರೈತ ಸಂಘ ಜಿಲ್ಲಾಧ್ಯಕ್ಷ ಶರಣಬಸಪ್ಪ ಮಮಶೆಟ್ಟಿ ಮಾತನಾಡಿ, ‘ರೈತರು ಸಾಲ ಮಾಡಿ ಬೀಜ ಹಾಗೂ ರಸಗೊಬ್ಬರ ಖರೀದಿಸಿ ಬಿತ್ತನೆ ನಡೆಸಿದರೂ ಮಳೆ ಕೊರತೆಯಿಂದ ಬೆಳೆಗಳು ಹಾನಿಯಾಗಿದ್ದು, ತೀವ್ರ ಆರ್ಥಿಕ ಸಂಕಷ್ಟ ಎದುರಿಸುತ್ತಿದ್ದಾರೆ. ಮತ್ತೊಂದೆಡೆ, ಜಾನುವಾರುಗಳಿಗೆ ಮೇವು ಮತ್ತು ಕುಡಿಯುವ ನೀರಿನ ಕೊರತೆಯೂ ಗಂಭೀರವಾಗಿದ್ದು, ಬೋರ್‌ವೆಲ್‌ಗಳ ನೀರಿನ ಮಟ್ಟವೂ ಕುಸಿಯುತ್ತಿದೆ’ ಎಂದು ಸಂಘ ತಿಳಿಸಿದೆ.

‘ಈ ಹಿನ್ನೆಲೆಯಲ್ಲಿ ಕಾಳಗಿ ತಾಲೂಕನ್ನು ಬರಪೀಡಿತ ಪ್ರದೇಶವೆಂದು ಘೋಷಿಸಬೇಕು, ಜಾನುವಾರುಗಳ ರಕ್ಷಣೆಗಾಗಿ ತಕ್ಷಣ ಗೋಶಾಲೆಗಳನ್ನು ಆರಂಭಿಸಬೇಕು ಹಾಗೂ ರೈತರ ಸಂಪೂರ್ಣ ಕೃಷಿ ಸಾಲವನ್ನು ಮನ್ನಾ ಮಾಡಬೇಕು’ ಎಂದು ಒತ್ತಾಯಿಸಲಾಗಿದೆ.
ಇದಲ್ಲದೆ, ‘ನಾಲ್ಕು ತಿಂಗಳಿಂದ ಬಾಕಿ ಉಳಿದಿರುವ ವಯೋವೃದ್ಧ, ವಿಧವಾ ಹಾಗೂ ಅಂಗವಿಕಲರ ಮಾಸಾಶನವನ್ನು ತಕ್ಷಣ ಬಿಡುಗಡೆ ಮಾಡಬೇಕು. ಮೋಡ ಬಿತ್ತನೆಗೆ ಅಗತ್ಯ ಕ್ರಮ ಕೈಗೊಳ್ಳುವುದರ ಜೊತೆಗೆ, ಬಾಕಿ ಉಳಿದಿರುವ ₹300 ಕೋಟಿಗೂ ಅಧಿಕ ಬೆಳೆ ವಿಮೆ ಪರಿಹಾರವನ್ನು ರೈತರಿಗೆ ಶೀಘ್ರ ಬಿಡುಗಡೆ ಮಾಡಬೇಕು’ ಎಂದು ಆಗ್ರಹಿಸಿದರು.
ಇದನ್ನು ಓದಿದ್ದೀರಾ? ಯಾದಗಿರಿ | ಕನಿಷ್ಠ ಕೂಲಿ, ಸೇವಾ ಭದ್ರತೆಗೆ ಆಗ್ರಹ; ಹೊರಗುತ್ತಿಗೆ ನೌಕರರ ಪ್ರತಿಭಟನೆ
ಪ್ರತಿಭಟನೆಯಲ್ಲಿ ರೈತ ಸಂಘದ ಮುಖಂಡರಾದ ಪರಮೇಶ್ವರ ಕಾಂತಾ, ದಿಲೀಪ್ ನಾಗೂರೆ, ತುಳುಜಪ್ಪ ಮೊಘಾ, ಸಿದ್ದಪ್ಪ ಖನೆಟ್ಟಿ, ಶಬ್ಬೀರ್ ಮಿಯಾ, ದೇವೇಂದ್ರಪ್ಪ ಪಾಟೀಲ ಸೇರಿದಂತೆ ಹಲವರು ಭಾಗವಹಿಸಿದ್ದರು.




