ಬಸವಾದಿ ಶರಣರ ತತ್ವಗಳ ಪಾಲನೆಯಿಂದ ಜೀವನ ಸಾರ್ಥಕವಾಗುತ್ತದೆ ಎಂದು ನಾರಂಜಾ ಸಹಕಾರ ಸಕ್ಕರೆ ಕಾರ್ಖಾನೆಯ ಅಧ್ಯಕ್ಷ ಸೂರ್ಯಕಾಂತ ನಾಗಮಾರಪಳ್ಳಿ ಹೇಳಿದರು.
ವಚನಾಮೃತ ಕನ್ನಡ ಸಂಘದಿಂದ ಇಲ್ಲಿಯ ಪೂಜ್ಯ ಚನ್ನಬಸವ ಪಟ್ಟದ್ದೇವರು ರಂಗ ಮಂದಿರದಲ್ಲಿ ಶುಕ್ರವಾರ ಆಯೋಜಿಸಿದ್ದ ಮಹಾನುಭಾವಿ ಅಲ್ಲಮಪ್ರಭು ವಿಚಾರ ಸಂಕಿರಣ ಉದ್ಘಾಟಿಸಿ ಅವರು ಮಾತನಾಡಿದರು.
“ಶರಣರ ವಿಚಾರಗಳಲ್ಲಿ ಅಗಾಧ ಶಕ್ತಿ ಇದೆ. ಅವುಗಳನ್ನು ಅನುಸರಿಸಿದರೆ ಜೀವನದಲ್ಲಿ ಬಯಸಿದ್ದೆಲ್ಲ ಪಡೆಯಬಹುದು. ಬಸವಣ್ಣನವರು ಅಲ್ಲಮಪ್ರಭುದೇವರ ಬಗ್ಗೆ ಅಪಾರ ಗೌರವ ಹೊಂದಿದ್ದರು. ಅಂತೆಯೇ ಅವರಿಗೆ ಅನುಭವ ಮಂಟಪದ ಅಧ್ಯಕ್ಷ ಸ್ಥಾನ ನೀಡಿದ್ದರು” ಎಂದರು.
ಆಶಯ ನುಡಿದ ಆಡಿದ ಹುಬ್ಬಳ್ಳಿಯ ಹಿರಿಯ ಸಾಹಿತಿ ಡಾ.ಶ್ಯಾಮಸುಂದರ ಬಿದರಕುಂದಿ ಅವರು, “ಅಲ್ಲಮ ಪ್ರಭುದೇವರ ವ್ಯಕ್ತಿತ್ವ ಯಾರ ಕೈಗೂ ಸಿಗದಂಥದ್ದು. ಅವರು ವಿಶ್ವಮಟ್ಟದ ಪ್ರತಿಭೆಯಾಗಿದ್ದರು. ಅಲ್ಲಮರು ಅರಿವು ಹಾಗೂ ಬೆಳಕನ್ನು ಹೊಲಿಕೆ ಮಾಡಿದ್ದರು. ಅರಿವು ಮತ್ತು ಬೆಳಕು ಒಂದೇ ಎಂದು ಸಾರಿದ್ದರು. ವಿಶ್ವ ಜೀವನದ ಜ್ಞಾನ ಅವರಿಗೆ ಇತ್ತು. ಜೀವನಕ್ಕೆ ಅವರದ್ದೇ ಸಂವಿಧಾನ ಇದೆ” ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ವಚನಾಮೃತ ಕನ್ನಡ ಸಂಘದ ಅಧ್ಯಕ್ಷ ಪ್ರೊ. ಸಿದ್ರಾಮಪ್ಪ ಮಾಸಿಮಾಡೆ ಮಾತನಾಡಿ, “ಜಗತ್ತಿನಲ್ಲೇ ಶ್ರೇಷ್ಠ ವಿಚಾರಗಳು ಜನ್ಮ ತಳೆದ ಕೇಂದ್ರ ಸ್ಥಾನ ಬೀದರ್. ಇಂಥ ವಿಚಾರಗಳು ಬೇರೆಲ್ಲೂ ಕಾಣ ಸಿಗುವುದಿಲ್ಲ. ಸಾಂಸ್ಕೃತಿಕ ನಾಯಕ ಬಸವಣ್ಣ ಹಾಗೂ ಅಲ್ಲಮಪ್ರಭು ದೇವರ ವಿಚಾರಗಳು ಕಲ್ಯಾಣ ನಾಡಿನಿಂದ ಜಗತ್ತಿನಾದ್ಯಂತ ಪರಿಸರಿಸಬೇಕಾಗಿದೆ” ಎಂದು ತಿಳಿಸಿದರು.
“ವಚನಾಮೃತ ಕನ್ನಡ ಸಂಘ ಬಸವಾದಿ ಶರಣರ ವಚನಗಳನ್ನು ಜನ ಮನಕ್ಕೆ ಮುಟ್ಟಿಸುವುದಕ್ಕಾಗಿಯೇ ಹುಟ್ಟಿಕೊಂಡಿದೆ. ಸಂಘವು ಶರಣರ ವಿಚಾರಧಾರೆಗಳ ಪ್ರಚಾರ, ಪ್ರಸಾರದಲ್ಲಿ ತೊಡಗಿಸಿಕೊಂಡಿದೆ. ಶರಣರು ಹಾಗೂ ವಚನ ಸಾಹಿತ್ಯದ ಕುರಿತು ಬರುವ ದಿನಗಳಲ್ಲಿ ಇನ್ನೂ ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಿದೆ” ಎಂದು ಹೇಳಿದರು.
ಬಸವಕಲ್ಯಾಣದ ಅನುಭವ ಮಂಟಪದ ಅಧ್ಯಕ್ಷ ಡಾ. ಬಸವಲಿಂಗ ಪಟ್ಟದ್ದೇವರು ದಿವ್ಯ ಸಾನಿಧ್ಯ, ಹಾರಕೂಡದ ಚನ್ನವೀರ ಶಿವಾಚಾರ್ಯರು ಸಾನಿಧ್ಯ ವಹಿಸಿದ್ದರು.
ಇದನ್ನೂ ಓದಿ: ಔರಾದ್ | ಸ್ವಚ್ಛ ಪರಿಸರಕ್ಕಾಗಿ ಪ್ಲಾಸ್ಟಿಕ್ ಮುಕ್ತ ಗ್ರಾಮ ಅಭಿಯಾನ
ದತ್ತಗಿರಿ ಮಹಾರಾಜ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಮಲ್ಲಿಕಾರ್ಜುನ ಹತ್ತಿ, ಕರ್ನಾಟಕ ಕೌನ್ಸಿಲ್ ಆಫ್ ಪ್ರೊಫೆಷನಲ್ ಸಿವಿಲ್ ಎಂಜಿನಿಯರ್ಸ್ ಸದಸ್ಯ ಹಾವಶೆಟ್ಟಿ ಪಾಟೀಲ, ಉದ್ಯಮಿ ಜೈರಾಜ ಖಂಡ್ರೆ, ಸ್ವಾಗತ ಸಮಿತಿಯ ಅಧ್ಯಕ್ಷ ಉಮಾಕಾಂತ ಮೀಸೆ ಮತ್ತಿತರರು ಇದ್ದರು. ಮೀರಾ ಖೇಣಿ ನಿರೂಪಿಸಿದರು. ಪರಮೇಶ್ವರ್ ಬಿರಾದಾರ ಸ್ವಾಗತಿಸಿದರು. ಬಸವರಾಜ ಬಿರಾದಾರ ವಂದಿಸಿದರು.




