ಸರ್ಕಾರಿ ಹಾಸ್ಟೆಲ್ ಹಾಗೂ ವಸತಿ ಶಾಲೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಹೊರಗುತ್ತಿಗೆ ನೌಕರರಿಗೆ ಸರ್ಕಾರ ಘೋಷಿಸಿರುವ ಹೆಚ್ಚಿದ ಕನಿಷ್ಠ ಕೂಲಿಯನ್ನು ತಕ್ಷಣ ಜಾರಿಗೊಳಿಸುವುದು, ಸೇವಾ ಭದ್ರತೆ ಸೇರಿದಂತೆ ವಿವಿಧ ನ್ಯಾಯಸಮ್ಮತ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಕರ್ನಾಟಕ ರಾಜ್ಯ ಸರ್ಕಾರಿ ಹಾಸ್ಟೆಲ್ ಮತ್ತು ವಸತಿ ಶಾಲಾ ಹೊರಗುತ್ತಿಗೆ ನೌಕರರ ಸಂಘದ ಜಿಲ್ಲಾ ಸಮಿತಿ ಶುಕ್ರವಾರ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.
ಪ್ರತಿಭಟನೆಯ ಬಳಿಕ ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಮಂತ್ರಿ ಅವರಿಗೆ ಮನವಿ ಪತ್ರ ಸಲ್ಲಿಸಿದ ಸಂಘದ ಪದಾಧಿಕಾರಿಗಳು, ಹಲವು ವರ್ಷಗಳಿಂದ ಸಮಾಜ ಕಲ್ಯಾಣ, ಹಿಂದುಳಿದ ವರ್ಗಗಳ ಕಲ್ಯಾಣ, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಸೇರಿದಂತೆ ವಿವಿಧ ವಸತಿ ಶಾಲೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಹೊರಗುತ್ತಿಗೆ ನೌಕರರು ಕಡಿಮೆ ವೇತನದಲ್ಲಿ ಯಾವುದೇ ಸೇವಾ ಭದ್ರತೆಯಿಲ್ಲದೆ ಕೆಲಸ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.
ಪ್ರತಿಭಟನೆಯನ್ನುದ್ದೇಶಿಸಿ ಭೀಮಶೆಟ್ಟಿ ಎಂಪಳ್ಳಿ ಮಾತನಾಡಿ, ‘ಸರ್ಕಾರ ಆದೇಶಿಸಿರುವ ಹೆಚ್ಚಿದ ಕನಿಷ್ಠ ಕೂಲಿಯನ್ನು ಜಿಲ್ಲೆಯ ಎಲ್ಲ ಹಾಸ್ಟೆಲ್ ಹಾಗೂ ವಸತಿ ಶಾಲೆಗಳ ಹೊರಗುತ್ತಿಗೆ ನೌಕರರಿಗೆ ತಕ್ಷಣದಿಂದಲೇ ಜಾರಿಗೊಳಿಸಿ, ಬಾಕಿ ವೇತನವನ್ನು ಪಾವತಿಸಬೇಕು. ಅಲ್ಲದೆ, ಎಲ್ಲ ನೌಕರರಿಗೆ ನಿವೃತ್ತಿವರೆಗೆ ಸೇವಾ ಭದ್ರತೆ ಒದಗಿಸಿ, ಹಲವು ವರ್ಷಗಳಿಂದ ನಿರಂತರ ಸೇವೆ ಸಲ್ಲಿಸುತ್ತಿರುವ ಸಿಬ್ಬಂದಿಯನ್ನು ಕಾಯಂಗೊಳಿಸಬೇಕು’ ಎಂದು ಒತ್ತಾಯಿಸಿದರು.
‘ವಸತಿ ಶಾಲೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಸಿಬ್ಬಂದಿಗೆ ವಸತಿ ಸೌಲಭ್ಯ ಕಲ್ಪಿಸುವುದು, ಅಧಿಕೃತ ನೇಮಕಾತಿ ಆದೇಶ ಪತ್ರ ನೀಡುವುದು, ಶಹಾಪುರ ಅಲ್ಪಸಂಖ್ಯಾತರ ವಸತಿ ನಿಲಯದಿಂದ ಸೇವೆಯಿಂದ ತೆಗೆದುಹಾಕಿರುವ ಅಡಿಗೆ ಸಿಬ್ಬಂದಿಯನ್ನು ಮರುನೇಮಕ ಮಾಡುವುದು ಹಾಗೂ ಇಪಿಎಫ್, ಇಎಸ್‌ಐ, ರಜೆ ಸೇರಿದಂತೆ ಎಲ್ಲ ಕಾನೂನುಬದ್ಧ ಕಾರ್ಮಿಕ ಸೌಲಭ್ಯಗಳನ್ನು ಒದಗಿಸಬೇಕು’ ಎಂದು ಆಗ್ರಹಿಸಿದರು.
ಬೇಡಿಕೆಗಳನ್ನು ಶೀಘ್ರ ಈಡೇರಿಸದಿದ್ದರೆ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ಸಂಘ ಎಚ್ಚರಿಕೆ ನೀಡಿತು.
ಇದನ್ನು ಓದಿದ್ದೀರಾ? ಕಲಬುರಗಿ | ಸೇವಾ ಭದ್ರತೆ ಸೇರಿ ವಿವಿಧ ಬೇಡಿಕೆಗಳ ಈಡೇರಿಕೆಗೆ ಅಂಗನವಾಡಿ, ಅಕ್ಷರ ದಾಸೋಹ ನೌಕರರ ಪ್ರತಿಭಟನೆ
ಪ್ರತಿಭಟನೆಯಲ್ಲಿ ಜಿಲ್ಲಾ ಅಧ್ಯಕ್ಷ ದಾವಲ್ ಸಾಬ್ ನದಾಫ್, ರಾಜ್ಯ ಜಂಟಿ ಕಾರ್ಯದರ್ಶಿ ಹುಲುಗಪ್ಪ ಚಲವಾದಿ, ಭೀಮಶೆಟ್ಟಿ ಎಂಪಳ್ಳಿ, ಶ್ರೀದೇವಿ ಹುಣಸಗಿ, ಶಂಕರ್ ಕಡಗುಡ್ಡ, ದುರ್ಗಮ್ಮ ಅಳಿಸಗರ್, ವಸಂತರಾಜ್ ಪೂಜಾರಿ, ಮಲ್ಲಮ್ಮ ಐಕೂರ್, ಮಂಜುಳಾ ಮುಂಡಾಸ್, ಶರಣಪ್ಪ ಗೋಗಿ, ರಮೇಶ್ ಬೆಂಡೆಗಂಬಳ್ಳಿ, ಬಸಣ್ಣ ಕೆಂಭಾವಿ ಸೇರಿದಂತೆ ಹಲವರು ಭಾಗವಹಿಸಿದ್ದರು




