ಕಳೆದ ಎರಡು ವರ್ಷಗಳಿಂದ ಮನರೇಗಾ ಯೋಜನೆಯಡಿ ಉದ್ಯೋಗಗಳನ್ನು ಸಮರ್ಪಕವಾಗಿ ನೀಡಲಾಗುತ್ತಿಲ್ಲ. ಯೊಜನೆಯನ್ನು ಸಮರ್ಪಕವಾಗಿ ಅನುಷ್ಠಾನಕ್ಕೆ ತರಬೇಕೆಂದು ಆಗ್ರಹಿಸಿ ಕರ್ನಾಟಕ ಪ್ರಾಂತ ರೈತ ಸಂಘ ಪ್ರತಿಬಟನೆ ನಡೆಸಿದೆ
ವಿಜಯಪುರ ಜಿಲ್ಲೆಯ ಸಿಂದಗಿಯಲ್ಲಿ ಪ್ರತಿಭಟನೆ ನಡೆಸಿದ ಸಂಘಟನೆಯ ಕಾರ್ಯಕರ್ತರು ತಾಲೂಕು ಪಂಚಾಯತಿ ಅಧಿಕಾರಿಗೆ ಹಕ್ಕೊತ್ತಾಯ ಪತ್ರ ಸಲ್ಲಿಸಿದ್ದಾರೆ. “ಗ್ರಾಮ ಪಂಚಾಯತಿಗಳ ವ್ಯಾಪ್ತಿಯಲ್ಲಿ ಸರಿಯಾಗಿ ಮನರೇಗಾ ಉದ್ಯೋಗಗಳನ್ನು ಒದಗಿಸಲಾಗುತ್ತಿಲ್ಲ. ಕೂಲಿಕಾರರ ಬದಲು ಯಂತ್ರಗಳ ಮೂಲಕ ಕೆಲಸ ಮಾಡಿಸಲಾಗುತ್ತಿದೆ. ಕೂಲಿಕಾರರನ್ನು ಉದ್ದೇಶಪೂರ್ವಕವಾಗಿ ಸತಾಯಿಸಲಾಗುತ್ತಿದೆ” ಎಂದು ಆರೋಪಿಸಿದ್ದಾರೆ.
“ಸರಿಯಾಗಿ ಕೂಲಿಯನ್ನೂ ಪಾವತಿಸುತ್ತಿಲ್ಲ. ಎರಡು ಮೂರು ತಿಂಗಳು ತಡಮಾಡಲಾಗುತ್ತಿದೆ. ಮನರೇಗಾ ಅಡಿ ಭ್ರಷ್ಟಾಚಾರ ನಡೆಯುತ್ತಿದೆ. ಸರಿಯಾಗಿ ಕೂಲಿ ಸಿಗದೆ ಕೂಲಿಕಾರರು ಕೆಲಸ ಹರಸಿ ಗುಳೆ ಹೋಗುತ್ತಿದ್ದಾರೆ” ಎಂದು ಹೇಳಿದ್ದಾರೆ.
“ಜಿಲ್ಲೆಯಲ್ಲಿ ಬರಗಾಲ ಎದುರಾಗಿದೆ. ಹೀಗಾಗಿ,ಮನರೇಗಾ ಅಡಿಯಲ್ಲಿ ಕೆಲಸ ಮಾನವ ದಿನಗಳನ್ನು 150 ದಿನಗಳಿಗೆ ಹೆಚ್ಚಿಸಿ ಸರ್ಕಾರ ಘೋಷಿಸಿದೆ. ಆದರೂ, ಕೂಲಿಕಾರರಿಗೆ ಕೆಲಸ ನೀಡಲಾಗುತ್ತಿಲ್ಲ” ಎಂದು ಆರೋಪಿಸಿದ್ದಾರೆ.
ಪ್ರತಿಭಟನೆಯಲ್ಲಿ ರೈತ ಸಂಘದ ರಮೇಶ್ ತಳವಾರ, ಶಾಂತಪ್ಪ ಹೊಸಮನಿ, ಪರಸುರಾಮ್ ಕಾರಗೊಂಡ, ಸಂಗಮ ಕೇರಿ, ಜಗದೇವಿ ಅರಾವಾಳ , ಶಾಂಭವಿ ಬೋರಗಿ, ದೇವಿಕಿ ಮಸಳಿ ಇತರರು ಇದ್ದರು.