ಗ್ರಾಮೀಣ ಪ್ರದೇಶದ ಬಗರ್ ಹುಕುಂ ಸಾಗುವಳಿದಾರರಿಗೆ ಕೂಡಲೇ ಹಕ್ಕು ಪತ್ರ ನೀಡಬೇಕೆಂದು ಆಗ್ರಹಿಸಿ ಅಖಿಲ ಭಾರತ ರೈತ ಕೃಷಿ ಕಾರ್ಮಿಕರ ಸಂಘಟನೆಯ (ಎಐಕೆಕೆಎಂಎಸ್) ಪದಾಧಿಕಾರಿಗಳು ಕಲಬುರಗಿ ಗ್ರಾಮೀಣ ಕ್ಷೇತ್ರದ ಶಾಸಕ ಬಸವರಾಜ ಮತ್ತಿಮೂಡ್ ಅವರಿಗೆ ಮನವಿ ಪತ್ರ ಸಲ್ಲಿಸಿದರು.
ಸಂಘಟನೆಯ ಜಿಲ್ಲಾ ಕಾರ್ಯದರ್ಶಿ ಮಹೇಶ್ ಎಸ್ ಬಿ. ಮಾತನಾಡಿ, ʼಕಲಬುರಗಿ ತಾಲೂಕಿನ ಕುಸನೂರು, ಕುಸನೂರು ತಾಂಡಾ, ನಂದೂರ ತಾಂಡಾ ಹಾಗೂ ಝಾಪುರ್ ಗ್ರಾಮಗಳಲ್ಲಿ ಸುಮಾರು ಕಳೆದ 40 ವರ್ಷಗಳಿಂದ ರೈತರು ತಮ್ಮ ಸಾಗುವಳಿ ಭೂಮಿ ಸಕ್ರಮವಾಗಿ ಪರಿವರ್ತಿಸಿಕೊಳ್ಳಲು ಅರ್ಜಿ ಸಲ್ಲಿಸಿ ದಶಕಗಳಿಂದ ಕಾಯುತ್ತಿದ್ದಾರೆ. ಫಾರಂ ನಂ.50, 53 ಮತ್ತು ಫಾರಂ 57 ಇವುಗಳ ವಿಲೇವಾರಿ ಮಾಡಲಾಗುತ್ತಿಲ್ಲ. ಇದರಿಂದ ನಿಜವಾದ ಭೂ ಸಾಗುವಳಿ ಮಾಡುವವರಿಗೆ ಭೂಮಿ ಸಿಗುತ್ತಿಲ್ಲʼ ಎಂದರು.
ʼಭೂಹೀನ ಮತ್ತು ಬಡ ರೈತರು ಕಂದಾಯ ಹಾಗೂ ಅರಣ್ಯದ ಕುರುಚಲು ಗಿಡ, ಕಲ್ಲು ಭೂಮಿ ಇರುವ ಪ್ರದೇಶಗಳಲ್ಲಿ ಜೀವನೋಪಾಯಕ್ಕಾಗಿ ಸಾಗುವಳಿ ಮಾಡುತ್ತಿದ್ದಾರೆ. ಇದು ಬಹುಪಾಲು ರೈತರ ಬದುಕಿಗೆ ಜೀವನಾಧಾರವಾಗಿದೆ. ಎಲ್ಲಾ ಸರ್ಕಾರಗಳು ಬಡ ರೈತರ ಜೀವನದ ವಸ್ತುಸ್ಥಿತಿ ಅರಿವಿದ್ದೇ ಸರ್ಕಾರಕ್ಕೆ ಸೇರಿದೆ ಜಮೀನಿನಲ್ಲಿ ಉಳುಮೆಗೆ ಅವಕಾಶ ಕೊಡುತ್ತಾ ಬಂದಿದೆ. ಆದರೆ ಶಾಸನಬದ್ದವಾಗಿ ಭೂಮಿಯ ಹಕ್ಕು ದೊರೆಯದೆ ಇರುವುದರಿಂದ ಬಗರ್ ಹುಕುಂ ಸಾಗುವಳಿದಾರರಿಗೆ ದಿಕ್ಕು ತೋಚದಂತಾಗಿದೆ. ಸರ್ಕಾರ ಕೂಡಲೇ ರೈತರಿಗೆ ನ್ಯಾಯ ಒದಗಿಸಿಕೊಡಬೇಕುʼ ಎಂದು ಆಗ್ರಹಿಸಿದರು.
ʼಸಹಜವಾಗಿ ಇವರಿಗೆ ಕೃಷಿ ಬೆಳೆ ಸಾಲ, ಕೃಷಿ ಪರಿಕರ ಮೇಲಿನ ಸಾಲ ಹಾಗೂ ಇನ್ನಿತರ ಜೀವನೋಪಾಯಕ್ಕಾಗಿ ಸಹಕಾರಿ ಹಾಗೂ ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿ ಯಾವುದೇ ರೀತಿಯ ಅಲ್ಪಾವಧಿ ಸಾಲ ದೊರೆಯದ ಕಾರಣ ಬಹುತೇಕ ಬಡ ರೈತರು ಬೇರೆ ದಾರಿಯಿಲ್ಲದೆ ಕೈಸಾಲ ಪಡೆದು ಸಂಕಟಕ್ಕೆ ಸಿಲುಕಿದ್ದಾರೆ. ಇಂತಹ ಪರಿಸ್ಥಿತಿ ಅವರನ್ನು ಆತ್ಮಹತ್ಯೆಗೆ ದೂಡುವಂತೆ ಮಾಡುತ್ತಿರುವುದು ಅತ್ಯಂತ ವಿಷಾದನೀಯ ಸಂಗತಿ. ಸರ್ಕಾರ ಬಗರ್ ಹುಕುಂ ಸಾಗುವಳಿದಾರರಿಗೆ ಹಕ್ಕುಪತ್ರ ಕೊಡುವುದೆಂದರೆ ದೊಡ್ಡ ಕರುಣೆ ಅಥವಾ ಭಿಕ್ಷೆಯಲ್ಲ, ಅದು ನ್ಯಾಯಬದ್ದವಾಗಿ ಕೊಡಬೇಕಾಗಿರುವ ಹಕ್ಕುʼ ಎಂದರು.
ಕಲಬುರಗಿ ಗ್ರಾಮೀಣ ಕ್ಷೇತ್ರದ ವ್ಯಾಪ್ತಿಗೆ ಬರುವ ಗ್ರಾಮಗಳಿಗೆ ಸಂಬಂಧಿಸಿದಂತೆ ತಹಸೀಲ್ದಾರ್ ಅವರೊಂದಿಗೆ ಸಭೆ ಕರೆದು ಬಗರ್ ಹುಕುಂ ರೈತರಿಗೆ ಹಕ್ಕು ಪತ್ರ ವಿತರಿಸುವ ಕುರಿತುಗಿ ಚರ್ಚಿಸಬೇಕು. ಆ ಸಭೆಗೆ ಎಲ್ಲಾ ರೈತ ಸಂಘಟನೆಗಳು ಹಾಗೂ ಬಗರ್ ಹುಕುಂ ಸಾಗುವಳಿ ರೈತರಿಗೆ ಮಾಹಿತಿ ತಿಳಿಸಬೇಕು ಎಂದು ಕೋರಿದರು.
ಬೆಳಗಾವಿಯಲ್ಲಿ ಡಿ.9 ರಿಂದ ನಡೆಯಲಿರುವ ಚಳಗಾಲ ಅಧಿವೇಶನದಲ್ಲಿ ಈಗ ಸರ್ಕಾರ ಮಾಡಿರುವ ಹಲವು ನಿಯಮಗಳನ್ನು ಸರಳೀಕರಣಗೊಳಿಸಲು ಒತ್ತಾಯಿಸಿ, ಬಡ ರೈತರು ಭೂಮಿಯನ್ನು ಪಡೆದುಕೊಳ್ಳಲು ಅನುಕೂಲವಾಗುವಂತೆ ಸರ್ಕಾರದ ಮೇಲೆ ಒತ್ತಡ ಹಾಕಬೇಕು ಎಂದು ಮನವಿ ಮಾಡಿದರು.
ಈ ಸುದ್ದಿ ಓದಿದ್ದೀರಾ? ಬೀದರ್ | ರಸ್ತೆ ಅಪಘಾತ : ಚಿಕಿತ್ಸೆಗೆ ಸ್ಪಂದಿಸದೆ ವಿದ್ಯಾರ್ಥಿ ಸಾವು
ಈ ಸಂದರ್ಭದಲ್ಲಿ ಶಿವಶರಣಪ್ಪ ದೊಡ್ಮನಿ, ದಶರತ್ ತೆಗನೂರ, ಕಾಶಿಪತಿ, ಶರಣಪ್ಪ ತಳವಾರ್, ರವಿಚಂದ್ರ, ಪರಶುರಾಮ ಹಾಗೂ ಇನ್ನಿತರರು ಉಪಸ್ಥಿತರಿದ್ದರು.