ಸರ್ಕಾರಿ ವಸತಿ ನಿಲಯಗಳ ಹೊರಗುತ್ತಿಗೆ ನೌಕರರಿಗೆ ಬಾಕಿ ಇರುವ ವೇತನ ಬಿಡುಗಡೆ ಹಾಗೂ ಕಳೆದ ಮೂರು ವರ್ಷಗಳಿಂದ ಕಡಿಮೆ ವೇತನ ಪಾವತಿಸಿದ ಶಾರ್ಪ್ ಏಜೆನ್ಸಿ ಮೇಲೆ ಶಿಸ್ತು ಕ್ರಮಕ್ಕೆ ಒತ್ತಾಯಿಸಿ ಕರ್ನಾಟಕ ರಾಜ್ಯ ಸರಕಾರಿ ಹಾಸ್ಟೆಲ್ ಮತ್ತು ವಸತಿ ಶಾಲಾ ಹೊರಗುತ್ತಿಗೆ ನೌಕರರು ಪ್ರತಿಭಟನೆ ನಡೆಸಿದರು.
ಜಿಲ್ಲಾ ಸಮಿತಿಯಿಂದ ಕಲಬುರಗಿ ನಗರದ ಸಮಾಜ ಕಲ್ಯಾಣ ಇಲಾಖೆ ಎದುರಗಡೆ ಧರಣಿ ಸತ್ಯಾಗ್ರಹ ನಡೆಸಿ ಜಿಲ್ಲಾಧಿಕಾರಿಗಳಿಗೆ ಹಕ್ಕೊತ್ತಾಯ ಪತ್ರ ಸಲ್ಲಿಸಿದರು.
ಸಂಘದ ಜಿಲ್ಲಾಧ್ಯಕ್ಷ ಕಾಶಿನಾಥ ಬಂಡಿ ಮಾತನಾಡಿ, “ಸಮಾಜ ಕಲ್ಯಾಣ ಇಲಾಖೆ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ, ಅಲ್ಪಸಂಖ್ಯಾತ ಕಲ್ಯಾಣ ಇಲಾಖೆ ಸೇರಿದಂತೆ ಮೊರಾರ್ಜಿ ದೇಸಾಯಿ, ಕಿತ್ತೂರ ರಾಣಿ ಚನ್ನಮ್ಮ, ಇಂದಿರಾ ಗಾಂಧಿ, ಅಂಬೇಡ್ಕರ್ ವಿದ್ಯಾರ್ಥಿ ನಿಲಯಗಳಲ್ಲಿ ಹೊರಗುತ್ತಿಗೆ ನೌಕರರಿಗೆ ಸಕಾಲಕ್ಕೆ ವೇತನ ನೀಡದೇ ಬಾಕಿ ವೇತನ ಸಂದಾಯವಾಗದ ಪರಿಣಾಮ ನೌಕರರು ವೇತನಕ್ಕಾಗಿ ಅಲೆದಾಡುವ ಪರಿಸ್ಥಿತಿ ಎದುರಾಗಿದೆ” ಎಂದು ಆಕ್ರೋಶ ವ್ಯಕ್ತಪಡಿಸಿದರು.
“ಸಮಾಜ ಕಲ್ಯಾಣ ಇಲಾಖೆಯಡಿ ಕಾರ್ಯನಿರ್ವಹಿಸುವ ಹೊರಗುತ್ತಿಗೆ ಸಿಬ್ಬಂದಿಗೆ ವೇತನ ನೀಡುವ ಏಜೆನ್ಸಿಯವರು ಕಳೆದ ಮೂರು ವರ್ಷಗಳಿಂದ ಸರ್ಕಾರದ ಆದೇಶದಂತೆ ವೇತನ ಪಾವತಿಸದೇ ತಿಂಗಳಿಗೆ ಪ್ರತಿ ಸಿಬ್ಬಂದಿಗೆ 1 ಸಾವಿರ ರೂ. ವೇತನ ಕಡಿತಗೊಳಿಸುತ್ತಾರೆ. ಪಿಎಫ್, ಇಎಸ್‌ಐ ನೀಡುವಲ್ಲಿ ಮೋಸ ಮಾಡಿದ್ದಾರೆ. ಈ ಬಗ್ಗೆ 150 ಜನ ಸಿಬ್ಬಂದಿಯ ಬ್ಯಾಂಕ್ ಖಾತೆಯ ವಿವರವನ್ನು ಇಲಾಖೆಯ ಜಂಟಿ ನಿರ್ದೇಶಕರಿಗೆ ಮತ್ತು ಕಾರ್ಮಿಕ ಇಲಾಖೆ ಅಧಿಕಾರಿಗಳಿಗೆ ನೀಡಿದರೂ ಯಾವುದೇ ಕ್ರಮಕೈಗೊಂಡಿಲ್ಲ” ಎಂದು ಆರೋಪಿಸಿದರು.
ಹಾಸ್ಟಲ್ ಹೊರಗುತ್ತಿಗೆ ನೌಕರರ ಬಾಕಿ ವೇತನ ಕೂಡಲೇ ಪಾವತಿಸಬೇಕು. 2024ರ ಏ.1 ರಿಂದ ಸರಕಾರ ನಿಗದಿಪಡಿಸಿದ ಕನಿಷ್ಠ ವೇತನ ಜಾರಿ ಮಾಡಬೇಕು. ಕಳೆದ ಮೂರು ವರ್ಷಗಳಿಂದ ಕಡಿಮೆ ವೇತನ ಹಾಗೂ ಪಿಎಫ್, ಇಎಸ್‌ಐ ನೀಡದ ಏಜೆನ್ಸಿ ವಿರುದ್ಧ ತನಿಖೆ ನಡೆಸಿ ಶಿಸ್ತು ಕ್ರಮ ಜರುಗಿಸಬೇಕು ಮತ್ತು ಈಗಾಗಲೇ ಕ್ರೈಸ್ ವಸತಿ ನಿಲಯಗಳಿಗೆ ವೇತನ ಪಾವತಿಸಲು ಜಾರಿಯಾದ ಹೊಸ ಆದೇಶ ರದ್ದುಪಡಿಸಿ ಪುನಃ ಟೆಂಡರ್ ಕರೆಯಬೇಕು. ಐದು ವರ್ಷಗಳಿಂದ ಕೆಲಸ ಮಾಡುತ್ತಿರುವ ಯಾವುದೇ ಸಿಬ್ಬಂದಿಗಳಿಗೆ ಕೆಲಸದಿಂದ ತೆಗೆಯಬಾರದು. ವಾರಕ್ಕೊಂದು ರಜೆ ತಪ್ಪದೆ ಕೊಡುವುದು ಸೇರಿದಂತೆ ಹತ್ತು ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿದರು.
ಈ ಸುದ್ದಿ ಓದಿದ್ದೀರಾ? ʼಗೃಹಲಕ್ಷ್ಮಿʼಯಿಂದ ಬಂತು ಸಕ್ಕುಬಾಯಿಗೆ ʼದೃಷ್ಟಿಭಾಗ್ಯʼ
ಪ್ರತಿಭಟನೆಯಲ್ಲಿ ರಾಜ್ಯಾಧ್ಯಕ್ಷ ಭೀಮಶೆಟ್ಟಿ ಯಂಪಳ್ಳಿ, ಜಿಲ್ಲಾ ಸಮಿತಿಯ ಉಪಾಧ್ಯಕ್ಷ ಮೇಘರಾಜ ಕಠಾರೆ, ಸಹ ಕಾರ್ಯದರ್ಶಿ ಸುರೇಶ ದೊಡ್ಡಮನಿ, ಆಳಂದ ತಾಲೂಕಾಧ್ಯಕ್ಷೆ ನಾಗರತ್ನ ಮದನಕರ್, ಜಿಲ್ಲಾ ಕಾರ್ಯದರ್ಶಿ ಕಾಶಿನಾಥ ಕಮಕನೂರ, ಅಫಜಲಪೂರ ತಾಲೂಕು ಅಧ್ಯಕ್ಷ ಬಾಬು ಹೊಸಮನಿ , ಚಿತ್ತಾಪೂರ ತಾಲೂಕು ಅಧ್ಯಕ್ಷ ರವಿಚಂದ್ರ ಯರಗೋಳ, ಕಾಳಗಿ ತಾಲೂಕು ಅಧ್ಯಕ್ಷ ನಾಗರಾಜ ಕಟ್ಟಿಮನಿ ಸೇರಿದಂತೆ ಮಾಪಣ್ಣಾ ಜಾನಕರ್, ಪರಸುರಾಮ ಹಡಗಲಿ, ಶಿವರಾಜ್ ಸೇಡಂ, ಪರಶುರಾಮ್ ಹಡಗಲಿ ಇದ್ದರು.