ಕೇಂದ್ರ ಸರ್ಕಾರ ಕರ್ನಾಟಕದಲ್ಲಿ ಬರಗಾಲ ಕಾರಣಕ್ಕೆ ಹೆಚ್ಚುವರಿ 50 ಮಾನವ ದಿನಗಳನ್ನು ಘೋಷಣೆ ಮಾಡುವುದು ಹಾಗೂ ಮನರೇಗಾ ಅಡಿಯಲ್ಲಿ 3 ತಿಂಗಳಿನಿಂದ ನಿಲ್ಲಿಸಿದ ಕೂಲಿ ಹಣವನ್ನು ಬಿಡುಗಡೆಗೊಳಿಸಬೇಕು ಎಂದು ಬಳ್ಳಾರಿ, ಕಂಪ್ಲಿ, ಹೊಸಪೇಟೆ ತಾಲೂಕಿನ ಮನರೇಗಾ ಕಾರ್ಮಿಕರು ಅಂಚೆ ಪತ್ರ ಚಳುವಳಿ ನಡೆಸಿದ್ದಾರೆ.
ಗ್ರಾಮೀಣ ಕೂಲಿಕಾರರ ಸಂಘದ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿರುವ ಕಾರ್ಮಿಕರು ಪ್ರಧಾನಿ ಮೋದಿ ಅವರಿಗೆ ಬರೆದ ಅಂಚೆ ಪತ್ರಗಳನ್ನು ಅಂಚೆ ಡಬ್ಬಿಗೆ ಹಾಕಿದ್ದಾರೆ. ವಿಜಯನಗರ ಜಿಲ್ಲೆಯ ಬಿಜಿಹಳ್ಳಿ, ಕಡ್ಡಿರಾಂಪುರ, ಬೈಲುವದ್ದಿಗೆರಿ, ಒಳ ಬಾಪೂರ, ಕಲ್ಲಳ್ಳಿ, ನಿಡಗೂರ್ತಿ, ಪಿಲೋಮನ ಹಳ್ಳಿ, ಚಿಲುಗೊಡು, ಹಂಪಾ ಪಟ್ಟಣ ಹಾಗೂ ಇನ್ನಿತರ ಗ್ರಾಮಗಳ ಕಾರ್ಮಿಕರು ಪ್ರಧಾನಿಗೆ ಅಂಚೆ ಪತ್ರ ಕಳಿಸಿದ್ದಾರೆ.
“ಮನರೇಗಾ ಯೋಜನೆಯ ಕಾನೂನಿನಂತೆ ದುಡಿದ ಕಾರ್ಮಿಕರಿಗೆ ಶೀಘ್ರವೇ ಕೂಲಿ ಹಣ ನೀಡಬೇಕು. ಆದರೆ, ಕೆಲಸ ಮಾಡಿ ಮೂರು ತಿಂಗಳಾದರೂ ಕೂಲಿ ಹಣ ನೀಡಿಲ್ಲ. ತಕ್ಷಣವೇ ಹಣ ಬಿಡುಗಡೆ ಮಾಡಬೇಕು. ಜೊತೆಗೆ, ಮೂರು ತಿಂಗಳಿನ ಬಡ್ಡಿ ಹಣವನ್ನೂ ಸೇರಿಸಿ ನೀಡಬೇಕು” ಎಂದು ಆಗ್ರಹಿಸಿದ್ದಾರೆ.
“ಕರ್ನಾಟಕದಲ್ಲಿ ಈ ವರ್ಷ ಬರಗಾಲ ಎದುರಾಗಿದೆ. ರಾಜ್ಯ ಸರ್ಕಾರ ಈಗಾಗಲೇ ಬರಗಾಲ ಘೋಷಣೆ ಮಾಡಿದೆ. ಕೇಂದ್ರ ಸರಕಾರವೂ ಬರಗಾಲ ಘೋಷಿಸಿ, ಕೂಲಿ ಕಾರ್ಮಿಕರಿಗೆ ಮನರೇಗಾದಲ್ಲಿ ಹೆಚ್ಚುವರಿ 50 ಮಾನವ ದಿನಗಳ ಕೂಲಿ ನೀಡಬೇಕು” ಎಂದು ಒತ್ತಾಯಿಸಿದ್ದಾರೆ.
ಈ ಸಂದರ್ಭದಲ್ಲಿ ಗ್ರಾಕೂಸ ಕಾರ್ಯಕರ್ತೆ ಅಕ್ಕಮ್ಮ ಮರಬ್ಬಿಹಾಳು , ಹೊಸಪೇಟೆ ತಾಲ್ಲೂಕು ಸಂಚಾಲಕಿ ಶೈನಜಾ , ವಾಣಿ , ಸುಧಾ , ಸೇರಿದಂತೆ ನೂರಾರು ಕೂಲಿ ಕಾರ್ಮಿಕರು ಇದ್ದರು.