ರಾಜ್ಯಪಾಲರು ಪ್ರಜಾಪ್ರಭುತ್ವದ ಆಶಯವನ್ನು ಭಗ್ನಗೊಳಿಸಿ ಸಂವಿಧಾನ ವಿರೋಧಿಗಳಂತೆ ನಡೆದುಕೊಂಡಿರುವುದು ಖಂಡನೀಯ. ಕೂಡಲೇ ಸಿಎಂ ಸಿದ್ದರಾಮಯ್ಯನವರ ವಿರುದ್ಧ ಪ್ರಾಸಿಕ್ಯೂಷನ್ ಅನುಮತಿ ಹಿಂಪಡೆಯಬೇಕು ಎಂದು ಎದ್ದೇಳು ಕರ್ನಾಟಕ ಜಿಲ್ಲಾ ಸಂಚಾಲಕ ಮಾರೆಪ್ಪ ಹರವಿ ಒತ್ತಾಯಿಸಿದರು.
ನಗರದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ʼತಳಸಮುದಾಯ ಓರ್ವ ನಾಯಕ ಸಿದ್ದರಾಮಯ್ಯನವರು ಎರಡು ಅವಧಿಗೆ ಮುಖ್ಯಮಂತ್ರಿಯಾಗಿ ಜನಪರ ಸರ್ಕಾರ ನೀಡುವುದನ್ನು ಸಹಿಸದ ಬಿಜೆಪಿ-ಜೆಡಿಎಸ್ ಪಕ್ಷಗಳು ರಾಜ್ಯಪಾಲರನ್ನು ಬಳಸಿಕೊಂಡು ಸರ್ಕಾರ ಅಸ್ಥಿರಗೊಳಿಸಲು ಹುನ್ನಾರ ನಡೆಸುತ್ತಿವೆʼ ಎಂದು ಆರೋಪಿಸಿದರು .
ʼಬಿಜೆಪಿ ಮತ್ತು ಜೆಡಿಎಸ್ ಪಕ್ಷಗಳು ಕಳೆದ 15 ತಿಂಗಳಲ್ಲಿ ಜನರ ಬದುಕಿನ ಒಮ್ಮೆಯೂ ಧ್ವನಿ ಎತ್ತಲಿಲ್ಲ, ಕಳೆದ ವಿಧಾನಸಭಾ ಚುನಾವಣೆಯಲ್ಲಿ ಹೀನಾಯ ಸೋಲು ಕಂಡ ಬಳಿಕ ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ಇನ್ನಿಲ್ಲದ ಷಡ್ಯಂತ್ರ ಹೂಡುವುದೇ ಬಿಜೆಪಿಯ ನಿತ್ಯದ ಕಾಯಕವಾಗಿದೆʼ ಎಂದರು .
ʼಸಿಬಿಐ, ಇಡಿ, ಐಟಿಗಳಂತಹ ಸಾಂವಿಧಾನಿಕ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧ ಪಕ್ಷದ ನಾಯಕರನ್ನು ಜೈಲಿಗೆ ತಳ್ಳುವುದು, ಅಪರೇಷನ್ ಕಮಲ ಮೂಲಕ ಸರ್ಕಾರಗಳು ಕೆಡವು ಪ್ರಯತ್ನ ಇನ್ನು ಮುಂದುವರೆದಿದೆ. ರಾಜ್ಯದ ರಾಜ್ಯಪಾಲ ಥಾವರ್ ಚಂದ್ ಗೆಹಲೋತ್ ಅವರ ಅನುಮತಿ ತಿರಸ್ಕರಿಸಿ ನ್ಯಾಯಾಲಯ ರಾಜಕೀಯ ಶಕ್ತಿಗಳಿಗೆ ಹೊಸ ಸಂದೇಶ ರವಾನಿಸಿ ಸಂವಿಧಾನಿಕ ಘನತೆ ಎತ್ತಿ ಹಿಡಿಯಬೇಕುʼ ಎಂದು ಹೇಳಿದರು.
ಪ್ರಗತಿಪರ ಹೋರಾಟಗಾರ ಖಾಜಾ ಅಸ್ಲಾಂ ಪಾಶಾ, ಎಂ.ಆರ್. ಭೇರಿ, ಸಮದ್, ರಂಗಾರೆಡ್ಡಿ ಹಾಗೂ ಕರ್ನಾಟಕ ಜನಶಕ್ತಿ ಮುಖಂಡ ಆಂಜನೇಯ ಇದ್ದರು.
