ಗ್ರಾಮೀಣ ಭಾಗದಲ್ಲಿ ಸೇವೆ ಸಲ್ಲಿಸುತ್ತಿರುವ ವೈದ್ಯರ ಮೇಲೆ ಕಿರುಕುಳ ನಡೆಯುತ್ತಿದೆ. ಕಿರುಕುಳ ತಡೆದು, ವೈದ್ಯರು ಉತ್ತಮವಾಗಿ ಕಾರ್ಯನಿರ್ವಹಿಸಲು ಕ್ರಮ ಕೈಗೊಳ್ಳಬೇಕೆಂದು ಕಲ್ಯಾಣ ಕರ್ನಾಟಕ ಗ್ರಾಮೀಣ ವೈದ್ಯರ ಅಭಿವೃದ್ಧಿಪರ ಸಂಘ ಆಗ್ರಹಿಸಿದೆ.
ಕಲಬುರಗಿಯಲ್ಲಿ ಪ್ರತಿಭಟನೆ ನಡೆಸಿದ ಸಂಘದ ಮುಖಂಡರು ಜಿಲ್ಲಾಧಿಕಾರಿಗೆ ಹಕ್ಕೊತ್ತಾಯ ಪತ್ರ ಸಲ್ಲಿಸಿದ್ದಾರೆ. ಪ್ರತಿಭಟನೆಯಲ್ಲಿ ಮಾತನಾಡಿದ ಸಂಘದ ಅಧ್ಯಕ್ಷ ಅಮೃತ ಪಾಟೀಲ್ ಸಿರನೂರ್, “ಗ್ರಾಮೀಣ ವೈದ್ಯರ ಮೇಲೆ ನಡೆಯುತ್ತಿರುವ ಕಿರುಕುಳವನ್ನು ತಡೆಯಲು ಕ್ರಮ ಕೈಗೊಳ್ಳಬೇಕು. ಗ್ರಾಮೀಣ ವೈದ್ಯರಿಗೆ ಪ್ರಥಮ ಚಿಕಿತ್ಸೆ ನೀಡಲು ಪಿಎಂಪಿ ಪ್ರಮಾಣ ಪತ್ರ ನೀಡಲು ಸರ್ಕಾರದ ಮೇಲೆ ಒತ್ತಡ ತರಬೇಕು” ಎಂದು ಆಗ್ರಹಿಸಿದ್ದಾರೆ.
“ಸುಮಾರು 1.5 ಲಕ್ಷ ವೈದ್ಯರು ಗ್ರಾಮೀಣ ಪ್ರದೇಶದಲ್ಲಿ ಮನೆ ಬಾಗಿಲಿಗೆ ಹೋಗಿ ಚಿಕಿತ್ಸೆ (ಆರೋಗ್ಯ ತಪಾಸಣೆ) ಮಾಡುತ್ತಿದ್ದಾರೆ. ಸುಮಾರು 30-35 ವರ್ಷಗಳಿಂದ ಸತತವಾಗಿ ಮತ್ತು ಪಾರಂಪರಿಕವಾಗಿ ಹಳ್ಳಿ ಜನರಿಗೆ ಸೇವೆ ಮಾಡುತ್ತಾ ಬರುತ್ತಿದ್ದಾರೆ. ಈ ವೈದ್ಯರಿಗೆ 2008 ಮತ್ತು 2019ರಲ್ಲಿ ತಾತ್ಕಾಲಿಕ ಪಿಎಂಪಿ(ಪ್ರಾವೀಟ್ ಮೆಡಿಕಲ್ ಪ್ರಾಕ್ಟಿಸನರ್) ಪರವಾನಿಗೆ ಮತ್ತು ಪ್ರಮಾಣ ಪತ್ರಗಳನ್ನು ಆರೋಗ್ಯ ಇಲಾಖೆಯಿಂದ ನೀಡಲಾಗಿದೆ. ಅದನ್ನು ಪೂರ್ಣಕಾಲಿಕವಾಗಿ ಪರಿವರ್ತಿಸಬೇಕು” ಎಂದು ಆಗ್ರಹಿಸಿದ್ದಾರೆ.
“ಮಹಾಮಾರಿ ಕೊರೊನಾವನ್ನು ಲೆಕ್ಕಿಸದೆ ಹಳ್ಳಿಗಳಲ್ಲಿ ಲಕ್ಷಾಂತರ ಜನರ ಜೀವವನ್ನ ಗ್ರಾಮೀಣ ವೈದ್ಯರು ಉಳಿಸಿದ್ದಾರೆ. ಆದರೆ, ಇಲ್ಲಿಯವರೆಗೆ ಸರ್ಕಾರದಿಂದ ಯಾವ ಸವಲತ್ತು ಕೂಡ ದೊರೆತಿಲ್ಲ. ಆರೋಗ್ಯ ಸಚಿವರು ಶೀಘ್ರವೇ ಉನ್ನತ ಮಟ್ಟದ ಸಭೆ ಕರೆದು ಆಂಧ್ರಪ್ರದೇಶದ ಮಾದರಿಯಲ್ಲಿ ಕರ್ನಾಟಕದ ಗ್ರಾಮೀಣ ವೈದ್ಯರಿಗೆ ಪ್ರಮಾಣ ಪತ್ರ ಮತ್ತು ಪರವಾನಿಗೆ ನೀಡಬೇಕು. ಪ್ರತಿ ತಿಂಗಳಿಗೆ ರೂ. 25,000-30,000 ರೂ. ಸಹಾಯಧನ ನೀಡಬೇಕು” ಎಂದು ಒತ್ತಾಯಿಸಿದ್ದಾರೆ.
ಈ ಸಂದರ್ಭದಲ್ಲಿ ರವಿ ಒಂಟಿ, ಶಿವಾನಂದ, ಗೋವಿಂದ ಭಟ್ಟ,ವಿ. ಡಿ. ಪಾಟೀಲ್,ಎಸ್. ವಿ ಚವಾಣ, ಅಮೃತ ಪಾಟೀಲ್ ಸಿರನೂರ್ ಇನ್ನಿತರರು ಉಪಸ್ಥಿತರಿದ್ದರು.