ಪ್ಯಾಲೆಸ್ತೈನ್ ನಾಗರಿಕರ ಮೇಲೆ ಇಸ್ರೇಲ್ ಅಮಾನವೀಯ ದಾಳಿ ಖಂಡಿಸಿ ಮಂಗಳವಾರ ಮಧ್ಯಾಹ್ನ ಎಸ್‌ಡಿಪಿಐ ಕರೆ ನೀಡಿದ್ದ ಪ್ರತಿಭಟನೆಗೆ ಪೊಲೀಸರು ಅನುಮತಿ ನಿರಾಕರಿಸಿದ್ದರು. ಅಲ್ಲದೆ, ಮುಂಜಾಗ್ರತಾ ಕ್ರಮವಾಗಿ ಆರು ಜನ ಮುಖಂಡರನ್ನು ಬಂಧಿಸಿದ್ದರು. ಆದರೂ, ಮಂಗಳವಾರ (ಅ.31) ಸಂಜೆ ನಗರದ ಮಿಲಾದ್ ಪಾರ್ಕ್‌ನಲ್ಲಿ ಪ್ರತಿಭಟನಾಕಾರರು ಪ್ರತಿಭಟನೆ ನಡೆಸಿದ್ದು, ಪೊಲೀಸರು ಜನರನ್ನು ಚದುರಿಸಿದ್ದಾರೆ. ಪೊಲೀಸರ ನಡೆಯನ್ನು ಎಸ್‌ಡಿಪಿಐ ಖಂಡಿಸಿದೆ.
ಎಸ್‌ಡಿಪಿಐ ರಾಜ್ಯಾಧ್ಯಕ್ಷ ಅಬ್ದುಲ್ ಮಜೀದ್, ಪೊಲೀಸರು ಮತ್ತು ಸರ್ಕಾರದ ನಡೆಯನ್ನು ಖಂಡಿಸಿದ್ದು, ಪಕ್ಷದ ಕಚೇರಿಯಲ್ಲಿ ತುರ್ತು ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿರು. ಇಸ್ರೇಲ್, ಗಾಝಾ ಪಟ್ಟಿಯಲ್ಲಿ ಎಂಟು ಸಾವಿರ ಪ್ಯಾಲೆಸ್ತೈನ್ ನಾಗರಿಕರನ್ನು ಹತ್ಯೆ ಮಾಡಿದ್ದು, ಇದರಲ್ಲಿ ಎರಡು ಸಾವಿರ ಮಕ್ಕಳು ಸಾವನ್ನಪ್ಪಿದ್ದಾರೆ. ಇದನ್ನು ಖಂಡಿಸಿ ನಾವು ಶಾಂತಿಯುತ ಪ್ರತಿಭಟನೆ ನಡೆಸಲು ಮುಂದಾಗಿದ್ದೆವು. ಆದರೆ, ಪೊಲೀಸರು ಅನುಮತಿ ನಿರಾಕರಿಸಿರುವುದು ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರದ ಸರ್ವಾಧಿಕಾರಿ ಧೋರಣೆ ಎಂದು ಅಬ್ದುಲ್ ಮಜೀದ್ ಕಿಡಿಕಾರಿದರು.
ಇಡೀ ವಿಶ್ವವೇ ಪ್ಯಾಲೆಸ್ತೈನ್ ಪರವಾಗಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಇಸ್ರೇಲ್ ಪರ ನಿಲುವು ವ್ಯಕ್ತಪಡಿಸಿದ್ದರೂ ಫ್ಯಾಲೆಸ್ತೈನ್ ದೇಶಕ್ಕೆ ಅಗತ್ಯ ನೆರವು ನೀಡಿದ್ದಾರೆ. ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಪಕ್ಷವೂ ಸಹ ಪ್ಯಾಲೆಸ್ತೈನ್ ಪರ ನಿಲುವು ಪ್ರಕಟಿಸಿದ್ದರೂ ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಇಸ್ರೇಲ್ ವಿರುದ್ಧ ಶಾಂತಿಯುತ ಪ್ರತಿಭಟನೆ ನಡೆಸಲು ಅನುಮತಿ ನಿರಾಕರಿಸಿರುವುದು ಖಂಡನಾರ್ಹ. ಈ ಸರ್ಕಾರ ಆರ್‌ಎಸ್‌ಎಸ್‌ನ ಪ್ರಭಾವಕ್ಕೆ ಒಳಗಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಆಡಳಿತದಲ್ಲಿದ್ದರೂ ಎನ್ಆರ್‌ಸಿ ಮತ್ತು ಸಿಎಎ ವಿರುದ್ಧ ದೇಶಾದ್ಯಂತ ಪ್ರತಿಭಟನೆ ನಡೆದವು. ಈ ಹಿಂದೆ ಕರೋನಾ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡರೂ ಕೂಡ ಮೇಕೆದಾಟು ಯೋಜನೆ ಪರವಾಗಿ ಪ್ರತಿಭಟನೆ ನಡೆಸಿದ್ದರು. ಬಿಜೆಪಿ ಸರ್ಕಾರ ಪ್ರತಿಭಟನೆ ಹತ್ತಿಕ್ಕುವ ಕೆಲಸ ಮಾಡಲಿಲ್ಲ. ಆದರೆ, ಕಾಂಗ್ರೆಸ್ ಸರ್ಕಾರ ಮಾತ್ರ ನಮ್ಮ ಪ್ರತಿಭಟನೆ ಹತ್ತಿಕ್ಕುವ ಕೆಲಸ ಮಾಡುತ್ತಿದೆ. ಕೂಡಲೇ ಸಿದ್ದರಾಮಯ್ಯ ಅವರು, ಇಸ್ರೇಲ್- ಪ್ಯಾಲೆಸ್ತೈನ್ ಯುದ್ಧದಲ್ಲಿ ರಾಜ್ಯ ಕಾಂಗ್ರೆಸ್ ಸರ್ಕಾರದ ನಿಲುವು ಪ್ರಕಟಿಸಬೇಕೆಂದು ಒತ್ತಾಯಿಸಿದರು.
ಗಾಝಾಪಟ್ಟಿಯಲ್ಲಿ ವಿಶ್ವಸಂಸ್ಥೆ ನಡೆಸುತ್ತಿರುವ ಶಾಲೆಯ ಮೇಲೆ ಇಸ್ರೇಲ್ ಬಾಂಬ್ ದಾಳಿ ನಡೆಸಿದ ಪರಿಣಾಮ 11 ಶಿಕ್ಷಕರು ಮತ್ತು 30 ಮಕ್ಕಳು ಮೃತರಾದರು. ವಿಶ್ವಸಂಸ್ಥೆ ಇದನ್ನು ಖಂಡಿಸಿ ಯುದ್ಧ ನಿಲ್ಲಿಸಲು ಕೋರಿದೆ. ಇಡೀ ಜಗತ್ತು ಪ್ಯಾಲೆಸ್ತೈನ್ ಪರವಾಗಿದೆ. 1948ರಿಂದಲೂ ಭಾರತ ಪ್ಯಾಲೆಸ್ತೈನ್ ಪರವಾಗಿದೆ.
ವಿಧಾನ ಸಭಾ ಚುನಾವಣೆಯಲ್ಲಿ ನೀವು ಬಹುಮತ ಪಡೆದಿರಬಹುದು ಎಂದು ಬೀಗಬೇಡಿ, ಲೋಕಸಭಾ ಚುನಾವಣೆ ಹತ್ತಿರದಲ್ಲಿದ್ದು, ಜನ ನಿಮಗೆ ತಕ್ಕಪಾಠ ಕಲಿಸುತ್ತಾರೆ ಎಂದು ಎಚ್ಚರಿಕೆ ನೀಡಿದರು. ನಾವು ಶಾಂತಿಯುತ ಪ್ರತಿಭಟನೆ ನಡೆಸಲು ಒಂದು ವಾರದ ಹಿಂದೆಯೇ ಅನುಮತಿ ಕೋರಿ ಮನವಿ ಸಲ್ಲಿಸಿದ್ದರೂ, ನಗರ ಪೊಲೀಸ್ ಆಯುಕ್ತರು ಮಂಗಳವಾರ ಬೆಳಗ್ಗೆ ಅನುಮತಿ ನಿರಾಕರಿಸಿದ್ದಾರೆ. ಇದು ಖಂಡನಾರ್ಹ ಎಂದರು. ಸುದ್ದಿಗೋಷ್ಠಿಯಲ್ಲಿ ರಫತ್ ಖಾನ್, ಎಸ್. ಸ್ವಾಮಿ, ಮುಹಮ್ಮದ್ ಸಫಿವುಲ್ಲಾ, ಹಾಫೀಜ್ ಮುಕ್ತಾರ್ ಮುಂತಾದವರು ಇದ್ದರು.