ಆರ್‌ಎಸ್‌ಎಸ್ ಮುಖಂಡ ಕಲ್ಲಡ್ಕ ಪ್ರಭಾಕರ್ ಭಟ್ ಅವರನ್ನು ರಾಜ್ಯ ಸರ್ಕಾರ ಕೂಡಲೇ ಬಂಧಿಸಬೇಕು ಎಂದು ಆಗ್ರಹಿಸಿ ಮಹಿಳೆಯರು ಶುಕ್ರವಾರ ಬೆಂಗಳೂರಿನ ಫ್ರೀಡಂ ಪಾರ್ಕಿನಲ್ಲಿ ಪ್ರತಿಭಟನೆ ನಡೆಸಿದರು.
ವಿವಿಧ ಮಹಿಳಾ ಸಂಘಟನೆಗಳ ಮುಖಂಡರು ‘ನಾವೆದ್ದು ನಿಲ್ಲದಿದ್ದರೆ’ ಘೋಷವಾಕ್ಯದಡಿ ಒಗ್ಗೂಡಿ, ಮುಸ್ಲಿಂ ಮಹಿಳೆಯರ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿರುವ ಕಲ್ಲಡ್ಕ ಭಟ್ ಅವರನ್ನು ಬಂಧಿಸುವಲ್ಲಿ ವಿಫಲವಾಗಿದೆ ಎಂದು ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು.
ಜನವಾದಿ ಮಹಿಳಾ ಸಂಘಟನೆ ಮುಖಂಡರಾದ ಕೆ.ಎಸ್.ಲಕ್ಷ್ಮಿ ಮಾತನಾಡಿ, “ಸರ್ವ ಜನಾಂಗದ ಶಾಂತಿಯ ತೋಟವಾದ ಕರ್ನಾಟಕವನ್ನು ಕೋಮುವಾದಿ ಶಕ್ತಿಗಳಿಂದ ಕಾಪಾಡುತ್ತೇವೆ ಎಂದು ಹೇಳಿ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಸರ್ಕಾರ ಈಗ ಸಮಾಜದಲ್ಲಿ ಶಾಂತಿ ಕಾದಾಡುತ್ತಿರುವ ದುಷ್ಕರ್ಮಿಗಳ ವಿರುದ್ಧ ಕ್ರಮ ಕೈಗೊಳ್ಳಲು ಹಿಂದೇಟು ಹಾಕುತ್ತಿದೆ” ಎಂದು ಕಿಡಿಕಾರಿದರು.
ಮುಖಂಡರಾದ ಬಸಮ್ಮ ಮಾತನಾಡಿ, “ಕಲ್ಲಡ್ಕ ಭಟ್ ಆಡಿರುವ ಮಾತುಗಳು ಮಹಿಳೆಯರ ಘನತೆಗೆ ಧಕ್ಕೆ ತಂದಿದೆ. ಸಾಮಾಜಿಕ ಕಾರ್ಯಕರ್ತೆ ನಜ್ಮಾ ನಝೀರ್ ಚಿಕ್ಕನೇರಳೆ ದೂರು ನೀಡಿದರೂ ಆರೋಪಿ ಬಂಧನಕ್ಕೆ ಹಿಂದೇಟು ಹಾಕುತ್ತಿರುವ ರಾಜ್ಯ ಸರ್ಕಾರ ತಾನು ಯಾರ ಎಂಬುದನ್ನು ಸ್ಪಷ್ಟಪಡಿಸಲಿ. ನಾವು ಇಲ್ಲಿಗೆ ನಿಲ್ಲುವುದಿಲ್ಲ. ಆರೋಪಿಯನ್ನು ಬಂಧಿಸುವರೆಗೂ ನಮ್ಮ ಹೋರಾಟ ಮುಂದುವರಿಯಲಿದೆ” ಎಂದು ತಿಳಿಸಿದರು.
ಹೆಣ್ಣು ಮಕ್ಕಳ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿರುವ ಕಲ್ಲಡ್ಕ ಪ್ರಭಾಕರ್ ಭಟ್‌ನನ್ನು ತಕ್ಷಣವೇ ಸ್ವಯಂ ಪ್ರೇರಿತ ದೂರು ದಾಖಲಿಸಿ ಬಂಧಿಸಬೇಕಿತ್ತು. ಆದರೆ ಕೋಮು ಸಾಮರಸ್ಯ ಹಾಳು ಮಾಡುತ್ತಿರುವ ದುಷ್ಕರ್ಮಿಗಳ ರಕ್ಷಣೆಗೆ ಈಗ ಸರ್ಕಾರವೇ ನಿಂತುಕೊಂಡಿದೆ ಎಂದು ಪ್ರತಿಭಟನಾಕಾರರು ದೂರಿದರು.
ಸಮುದಾಯದ ಹೆಣ್ಣು ಮಕ್ಕಳ ಬಗ್ಗೆ ಕೀಳಾಗಿ ಮಾತನಾಡಿದರೂ ಜನಪ್ರತಿನಿಧಿಗಳಾದ ಯು.ಟಿ.ಖಾದರ್, ಜಮೀರ್ ಅಹ್ಮದ್ ಖಾನ್, ಕನೀಜ್ ಫಾತಿಮಾ, ಮಹಮದ್ ಹ್ಯಾರಿಸ್ ಮೌನಕ್ಕೆ ಜಾರಿರುವುದು ನಾಚಿಕೆಗೇಡು ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.
ಈ ವೇಳೆ ಪ್ರತಿಭಟನಾಕಾರರು ಕಲ್ಲಡ್ಕ ಭಟ್ ಹಾಗೂ ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು. ಜನಪರ ಸಂಘಟನೆಗಳ ಮುಖಂಡರು ಹೋರಾಟದಲ್ಲಿ ಪಾಲ್ಗೊಂಡಿದ್ದರು.