ಆ ಸರ್ಕಾರಿ ಶಾಲೆಗೆ ದಶಮಾನೋತ್ಸವ ಕಳೆದಿದೆ. ಗೋಡೆ ಬಿರುಕು ಬಿಟ್ಟಿದೆ, ಬಾಗಿಲು ಶಿಥಿಲವಾಗಿದೆ. ಕಟ್ಟಿರುವ ಶಾಲೆಯ ಕೊಠಡಿಗಳು ಇಂದೋ-ನಾಳೆಯೋ ಬೀಳುವ ಹಂತಕ್ಕೆ ತಲುಪಿದೆ.
ಹೌದು. ಇದು ರಾಯಚೂರು ಜಿಲ್ಲೆಯ ದೇವದುರ್ಗ ತಾಲೂಕಿನಲ್ಲಿರುವ ಗಬ್ಬೂರು ಹೋಬಳಿಯ ಸರ್ಕಾರಿ ಪ್ರೌಢಶಾಲೆಯ ದುಸ್ಥಿತಿ. ಸಂಬಂಧಪಟ್ಟ ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ದಶಮಾನೋತ್ಸವ ಕಳೆದ ಶಾಲೆಗೆ ಈ ಪರಿಸ್ಥಿತಿ ಬಂದೊದಗಿದೆ.
1965ರಲ್ಲಿ ಕಟ್ಟಿದ ಈ ಶಾಲೆಯ ಕಟ್ಟಡವು ಶಿಥಿಲಗೊಂಡು ಇಂದೋ-ನಾಳೆಯೋ ಬೀಳುವ ಹಂತಕ್ಕೆ ಬಂದಿದ್ದು ಮಕ್ಕಳು ,ಶಿಕ್ಷಕರು ಭಯದಲ್ಲಿ ಇರುವಂತಾಗಿದೆ. ಶಾಲೆಯಲ್ಲಿ 16 ಕೊಠಡಿಗಳಿದ್ದು, 08 ಕೊಠಡಿಗಳು ಶಿಥಿಲಗೊಂಡು ಕೊಠಡಿಗಳು ಧರೆಗೆ ಉರುಳುವ ಅಪಾಯದಲ್ಲಿವೆ. ಶಾಲೆಯಲ್ಲಿ ಒಟ್ಟು 687 ಮಕ್ಕಳು ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಶಾಲೆಯ ಕಟ್ಟಡದ ದುಸ್ಥಿತಿ ಕಂಡು ಪಾಲಕರು ಮಕ್ಕಳನ್ನು ಕಳುಹಿಸಲು ಹಿಂದೇಟು ಹಾಕುತ್ತಿದ್ದಾರೆ .
ಮಳೆ ಬಂದರೆ ಗೋಡೆಯಿಂದ ನೀರು ಸೋರಲು ಆರಂಭಿಸುತ್ತದೆ. ಕಳೆದ ನಾಲ್ಕೈದು ವರ್ಷಗಳಿಂದ ಈ ಶಾಲೆ ಮಳೆಯಿಂದ ಸೋರುತ್ತಿದ್ದರೂ ಕೂಡ ಶಿಕ್ಷಣ ಇಲಾಖೆಯ ಅಧಿಕಾರಿಗಳು ಕಾಯಕಲ್ಪ ಒದಗಿಸಲು ಮುಂದಾಗಿಲ್ಲ. ದುರಂತ ಎಂದರೆ ಮಳೆ ಬಂದರೆ ತರಗತಿಗಳಲ್ಲಿ ಪಾಠ ನಡೆಯುವುದಿಲ್ಲ. ಕೆಲ ಕೊಠಡಿಗಳಲ್ಲಿ ಮಳೆ ಬಂದು ನೀರು ಸೋರಲು ಆರಂಭವಾದರೆ ಮಕ್ಕಳು ನಿಂತುಕೊಂಡು ಪಾಠ ಕೇಳಬೇಕಾದ ಪರಿಸ್ಥಿತಿ ನಿರ್ಮಾಣವಾಗುತ್ತಿದೆ ಎಂದು ಪೋಷಕರು ತಮ್ಮ ಮಕ್ಕಳ ಕಷ್ಟವನ್ನು ಹೇಳಿಕೊಂಡಿದ್ದಾರೆ.
ಈ ಸಂಬಂಧ ಗ್ರಾಮಸ್ಥ ಶಾಂತಕುಮಾರ ಹೊನ್ನಟಗಿ ಮಾತನಾಡಿ, ಪ್ರಾಥಮಿಕ ಹಾಗೂ ಪ್ರೌಢಶಾಲೆ ಕಟ್ಟಡಗಳು ಶಿಥಿಲಗೊಂಡು ಬೀಳುವ ಸ್ಥಿತಿಯಲ್ಲಿದೆ. ಮಳೆ ಬಂದಾಗ ಶಾಲಾ ಆವರಣದಲ್ಲಿ ನೀರು ನಿಂತು ಮಕ್ಕಳು ಸಾಂಕ್ರಾಮಿಕ ರೋಗಗಳಿಗೆ ತುತ್ತಾಗುವ ಸಾಧ್ಯತೆಗಳಿವೆ ಎಂದು ಹೇಳಿದರು.
ಈ ಸುದ್ದಿ ಓದಿದ್ದೀರಾ? ರಾಯಚೂರು | ಅಪ್ರಾಪ್ತ ಬಾಲಕಿಯ ಅತ್ಯಾಚಾರ ಪ್ರಕರಣ: ಅಪರಾಧಿಗೆ ಜೀವಾವಧಿ ಶಿಕ್ಷೆ
ಶಾಲೆಯ ಸಮಸ್ಯೆಯ ಬಗ್ಗೆ ಕ್ಷೇತ್ರ ಶಿಕ್ಷಣಾಧಿಕಾರಿ ಸುಖದೇವ್ ಅವರನ್ನು ಗಮನಕ್ಕೆ ತಂದರೂ, ಯಾವುದೇ ಪ್ರಯೋಜನವಾಗಿಲ್ಲ ಎಂದು ಶಾಲಾಭಿವೃದ್ಧಿ ಸಮಿತಿಯವರು ತಿಳಿಸಿದ್ದಾರೆ. ಶಾಲೆಯ ಬಗ್ಗೆ ಡಿಡಿಪಿಐ ಅವರನ್ನು ಭೇಟಿಯಾಗಿ ಮನವಿ ಕೂಡ ಸಲ್ಲಿಸಲಾಗಿದೆ. ಶಾಲೆಯ ಸ್ಥಿತಿಗತಿ, ಇಂಗ್ಲಿಷ್ ವಿಷಯಕ್ಕೆ ಶಿಕ್ಷಕರಿಲ್ಲದೆ ಮಕ್ಕಳ ಭವಿಷ್ಯ ಅಂಧಕಾರದಲ್ಲಿ ಮುಳುಗಿದೆ ಎಂದು ಶಾಂತಕುಮಾರ ತಿಳಿಸಿದರು.

ಶಾಲೆಯ ಸಂಬಂಧ ಶಾಲಾ ಮುಖ್ಯೋಪಾಧ್ಯಾಯ ವನಕೇರಪ್ಪ ಅವರನ್ನು ಸಂಪರ್ಕಿಸಿದಾಗ, ಶಾಲೆಯಲ್ಲಿ 16 ಕೊಠಡಿಗಳಿದ್ದು, ಅದರಲ್ಲಿ 8 ಹಳೆ ಕೊಠಡಿಗಳು ಪೂರ್ತಿ ಶಿಥಿಲಗೊಂಡಿವೆ. 8 ಮಾತ್ರ ಕೊಠಡಿಗಳು ಸರಿಯಾಗಿವೆ ಎಂದರು.
ಶಾಲೆಯಲ್ಲಿ ಒಟ್ಟು 687 ವಿದ್ಯಾರ್ಥಿಗಳು ಕಲಿಯುತ್ತಿದ್ದಾರೆ. ಹೆಸರಿಗೆ 12 ಶೌಚಾಲಯಗಳಿದ್ದರೂ ಕೂಡ, ಅದರಲ್ಲಿ 4 ಮಾತ್ರ ಸರಿಯಾಗಿವೆ. ಕೆಲವು ಪಾಳು ಬಿದ್ದಿವೆ.
20 ಮಕ್ಕಳಿಗೆ ಒಂದು ಶೌಚಾಲಯ ಇರಬೇಕು ಎಂದು ಸರ್ಕಾರದ ನಿಯಮವಿದೆ. ಕಟ್ಟಡ ಸಂಬಂಧ ಮೇಲಾಧಿಕಾರಿಗಳ ಗಮನಕ್ಕೆ ತರಲಾಗಿದೆ. ಆದಷ್ಟು ಬೇಗ ಗಮನ ಹರಿಸಲಾಗುವುದು ಎಂದು ಭರವಸೆ ನೀಡಿದ್ದಾರೆ ಎಂದು ಮುಖ್ಯೋಪಾಧ್ಯಾಯರು ತಿಳಿಸಿದರು.


ರಫಿ ಗುರುಗುಂಟ
ಗುಲಬರ್ಗಾ ವಿವಿಯಿಂದ ಪತ್ರಿಕೋದ್ಯಮದಲ್ಲಿ ಎಂ ಎ ಪದವಿ, ಕಲ್ಯಾಣ ಕರ್ನಾಟಕ ವಲಯ ಕೋರ್ಡಿನೇಟರ್