ಮನರೇಗಾ ಕಾಮಗಾರಿಗಳಲ್ಲಿ 100 ಕೋಟಿ ರೂ.ಗಳಿಗೂ ಅಧಿಕ ಭ್ರಷ್ಟಾಚಾರ ನಡೆದಿದೆ ಎಂಬ ಆರೋಪ ಕೇಳಿಬಂದಿದ್ದು, ದೇವದುರ್ಗ ತಾಲೂಕಿನ ನಾಲ್ವರು ಪಿಡಿಒಗಳನ್ನು ಅಮಾನತು ಮಾಡಲಾಗಿದೆ.
ರಾಯಚೂರು ಜಿಲ್ಲೆಯ ದೇವದುರ್ಗ ತಾಲೂಕಿನ ಜಾಲಹಳ್ಳಿ ಗ್ರಾಮ ಪಂಚಾಯತಿ ಪಿಡಿಒ ಪತ್ಯಪ್ಪ ರಾಠೋಡ್, ಶಾವಂತಗೆರಾ ಪಂಚಾಯತಿ ಪಿಡಿಒ ಗುರುಸ್ವಾಮಿ, ಗಾಣದಾಳ ಪಂಚಾಯತಿ ಪಿಡಿಒ ಮಲ್ಲಪ್ಪ ಹಾಗೂ ಕ್ಯಾದಿಗೇರಾ ಪಂಚಾಯಿತಿ ಪಿಡಿಒ ಸಿ.ಬಿ ಪಾಟೀಲ್ ಅವರನ್ನು ಅಮಾನತುಗೊಳಿಸಿ ಜಿಲ್ಲಾ ಪಂಚಾಯತಿ ಸಿಇಒ ಪಾಂಡ್ವೆ ರಾಹುಲ್ ತುಕಾರಾಮ್ ಆದೇಶಿಸಿದ್ದಾರೆ. ಅಲ್ಲದೆ, ಇಬ್ಬರು ಗೆಜೆಟೆಡ್ ಅಧಿಕಾರಿಗಳ ವಿರುದ್ಧ ಎಫ್‌ಐಆರ್ ಕೂಡ ದಾಖಲಾಗಿದೆ.
ದೇವದುರ್ಗ ತಾಲೂಕಿನ 33 ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ನಡೆದಿರುವ ಮನರೇಗಾ ಕಾಮಗಾರಿಗಳಲ್ಲಿ 100 ಕೋಟಿ ರೂ.ಗಳಿಗೂ ಅಧಿಕ ಅವ್ಯವಹಾರ ನಡೆದಿದೆ. ಮಾರುತೇಶ್ವರ ಎಂಟರ್ ಪ್ರೈಸಸ್‌ಗೆ ನಿಯಮ ಮೀರಿ 102.32 ಕೋಟಿ ರೂ.ಗಳನ್ನು ಪಾವತಿಸಲಾಗಿದೆ ಎಂದು ಆರೋಪಿಸಲಾಗಿತ್ತು. ಜಿಲ್ಲಾ ಪಂಚಾಯತಿಯ ಮನರೇಗಾ ಯೋಜನಾ ಸಹಾಯಕ ನಿರ್ದೇಶಕರಿಗೆ ಅಣ್ಣರಾವ್ ಎಂಬವರು ದೂರು ಸಲ್ಲಿಸಿದ್ದರು. ಅಲ್ಲದೆ, ನಿರ್ಗಮಿತ ಸಹಾಯಕ ನಿರ್ದೇಶಕ ಬಸಣ್ಣ ನಾಯಕ ಹೇಮನೂರ ಎಂಬವರ ವಿರುದ್ಧ ದೇವದುರ್ಗ ಪೊಲೀಸ್ ಠಾಣೆಯಲ್ಲಿ ಪ್ರಕರಣ ಕೂಡ ದಾಖಲಾಗಿತ್ತು.
ಪ್ರಕರಣ ಸಂಬಂಧ ಇಲಾಖಾ ಮಟ್ಟದ ತನಿಖೆ ನಡೆದಿದ್ದು, ನಾಲ್ವರು ಪಿಡಿಒಗಳನ್ನು ಅಮಾನತು ಮಾಡಲಾಗಿದೆ. ಬಸಣ್ಣ ನಾಯಕ ವಿರುದ್ಧ ಐಪಿಸಿ ಸೆಕ್ಷನ್ 465, 409, 420, 34ರ ಅಡಿ ಪ್ರಕರಣ ದಾಖಲಾಗಿದೆ. ಅವ್ಯವಹಾರದಲ್ಲಿ ಇನ್ನೂ ಕೆಲ ಪಿಡಿಒಗಳು ಹಾಗೂ ಅಧಿಕಾರಿಗಳು ಭಾಗಿಯಾಗಿದ್ದಾರೆ. ಅವರ ವಿರುದ್ಧವೂ ಕ್ರಮ ಕೈಗೊಳ್ಳಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.