ಮುದ್ರಣ ಮತ್ತು ವಿದ್ಯುನ್ಮಾನ ಮಾಧ್ಯಮದಲ್ಲಿ ಕಾರ್ಯನಿರ್ವಹಿಸುವ ಜಿಲ್ಲಾ ಹಾಗೂ ತಾಲೂಕು ಮಟ್ಟದ ಪತ್ರಕರ್ತರು ಸುದ್ದಿಗಾಗಿ, ವಿಶೇಷ ವರದಿಗಾಗಿ ಮತ್ತು ಸುದ್ದಿಗಾಗಿ ಹೋದ ಸ್ಥಳಗಳಲ್ಲಿ ಕೆಲವರು ಪತ್ರಕರ್ತರ ಮೇಲೆ ಹಲ್ಲೆ ನಡೆಸುವುದು ಮತ್ತು ಅಡಚಣೆ ಉಂಟು ಮಾಡಿ, ಇಡೀ ಮಾಧ್ಯಮವನ್ನು ಅವಮಾನಿಸುವಂತಹ ಘಟನೆಗಳು ಆಗಿಂದಾಗ್ಗೆ ನಡೆಯುತ್ತಿವೆ. ಚಿತ್ರದುರ್ಗ ನಗರದ ತುರುವನೂರು ರಸ್ತೆಯಲ್ಲಿ ಸುದ್ದಿಗೋಷ್ಠಿಗೆ ಹಾಜರಾಗಿ ಹಿಂದಿರುಗುತ್ತಿದ್ದ ನ್ಯೂಸ್ ಫಸ್ಟ್ ಜಿಲ್ಲಾ ವರದಿಗಾರರ ಮೇಲೆ ಸ್ಥಳೀಯ ರಾಜಕಾರಣಿ, ಮುಖಂಡರೊಬ್ಬರು ಹಲ್ಲೆ ನಡೆಸಿದ ಘಟನೆ ನಡೆದಿದೆ. ಈ ಸಂಬಂಧ ಪ್ರತಿಭಟನೆ ನಡೆಸಿ ಪತ್ರಕರ್ತರಿಗೆ ರಕ್ಷಣೆ ಕಲ್ಪಿಸುವಂತೆ ಪತ್ರಕರ್ತರ ಸಂಘದ ಅಧ್ಯಕ್ಷರು ಮತ್ತು ಪದಾಧಿಕಾರಿಗಳು ಅಪರ ಜಿಲ್ಲಾಧಿಕಾರಿಗಳಿಗೆ ಮನವಿ ನೀಡಿ ಸರ್ಕಾರ ಮತ್ತು ಪೊಲೀಸ್ ಇಲಾಖೆಗೆ ಒತ್ತಾಯಿಸಿದರು.
ಪ್ರತಿಭಟನೆ ವೇಳೆ ಮಾತನಾಡಿದ ಪತ್ರಕರ್ತರ ಸಂಘದ ಅಧ್ಯಕ್ಷ ದಿನೇಶ್ ಗೌಡಗೆರೆ, “ಇತ್ತೀಚೆಗೆ ರಾಜ್ಯದ ನಾನಾ ಜಿಲ್ಲೆಗಳಲ್ಲಿ ಪತ್ರಕರ್ತರ ಮೇಲೆ ಹಲ್ಲೆ, ದೌರ್ಜನ್ಯಗಳು ಹೆಚ್ಚಾಗುತ್ತಿವೆ. ಅಂತಹ ಘಟನೆಗಳನ್ನು ಗಂಭೀರವಾಗಿ ಪರಿಗಣಿಸಿ ಸರ್ಕಾರ ಕೂಡಲೇ ಕ್ರಮಜರುಗಿಸಿ ಪತ್ರಕರ್ತರಿಗೆ ಸೂಕ್ತ ರಕ್ಷಣೆ ಕಲ್ಪಿಸಬೇಕು. ದಿನಾಂಕ 08-06-2025 ರಂದು ಭಾನುವಾರ ಚಿತ್ರದುರ್ಗ ನಗರದ ತುರುವನೂರು ರಸ್ತೆಯಲ್ಲಿ ಸುದ್ದಿಗೋಷ್ಠಿಗೆ ಹಾಜರಾಗಿ ಹಿಂದಿರುಗುತ್ತಿದ್ದ ನ್ಯೂಸ್ ಫಸ್ಟ್ ಜಿಲ್ಲಾ ವರದಿಗಾರ ರಾಘವೇಂದ್ರ, ವಿಷ್ಣು ಸರ್ ದೇಸಾಯಿ ಅವರ ಮೇಲೆ ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಹಾಗೂ ದುರ್ಗದ ಸಿರಿ ಹೋಟೆಲ್ ಮಾಲೀಕ ಬಾಬುರೆಡ್ಡಿ ಕ್ಷುಲ್ಲಕ ಕಾರಣಕ್ಕಾಗಿ ಹಲ್ಲೆ ನಡೆಸಿ, ಅವಾಚ್ಯ ಶಬ್ದಗಳಿಂದ ಸಾರ್ವಜನಿಕ ಸ್ಥಳದಲ್ಲಿ ನಿಂದಿಸಿರುತ್ತಾರೆ. ಜೊತೆಗೆ ಮುದ್ರಣ ಮತ್ತು ವಿದ್ಯುನ್ಮಾನ ಮಾಧ್ಯಮದಲ್ಲಿ ಕಾರ್ಯನಿರ್ವಹಿಸುವ ಪತ್ರಕರ್ತರನ್ನು ಕೀಳುಮಟ್ಟದ ಪದ ಬಳಸಿ ಸಾರ್ವಜನಿಕರ ಮುಂದೆ ಕೂಗಾಡಿದ್ದಾರೆ” ಎಂದು ಆರೋಪಿಸಿದರು.

“ಪತ್ರಕರ್ತರ ಮೇಲೆ ಮಾಡಿರುವ ಹಲ್ಲೆ ಪತ್ರಕರ್ತರ ನೈತಿಕಸ್ಥೈರ್ಯವನ್ನು ಕುಗ್ಗಿಸುವ ಘಟನೆಯಾಗಿದ್ದು, ಕಾರ್ಯನಿರತ ಪತ್ರಕರ್ತರ ಸಂಘ ಚಿತ್ರದುರ್ಗ ಜಿಲ್ಲಾ ಘಟಕ ತೀವ್ರವಾಗಿ ಖಂಡಿಸುತ್ತದೆ. ಸುದ್ದಿಗಾಗಿ ಹೋದಂತಹ ಸ್ಥಳಗಳಲ್ಲಿ ಮತ್ತು ಅಲ್ಲಿಂದ ಹಿಂದಿರುಗುವ ಸಂದರ್ಭದಲ್ಲಿ ಪತ್ರಕರ್ತರ ಮೇಲೆ ಹಲ್ಲೆ ನಡೆಸಿ, ದೌರ್ಜನ್ಯ ಎಸಗುವ ವ್ಯಕ್ತಿಗಳ ಮೇಲೆ ಕಠಿಣ ಕ್ರಮ ಜರುಗಿಸಬೇಕು. ಕ್ರಮ ಜರುಗಿಸುವ ವಿಧಾನದಲ್ಲಿ ವಿಳಂಬ ನೀತಿಯನ್ನು ಅನುಸರಿಸದೇ ಮತ್ತು ಜನಪ್ರತಿನಿಧಿಗಳ ಒತ್ತಡಕ್ಕೆ ಮಣಿಯದೇ ನಿರ್ದಾಕ್ಷಿಣ್ಯವಾಗಿ ಕ್ರಮಕೈಗೊಳ್ಳಬೇಕು” ಎಂದು ಒತ್ತಾಯಿಸಿದರು.
“ಸಾಮಾಜಿಕ ವ್ಯವಸ್ಥೆಯಡಿ ನಾಲ್ಕನೇ ಅಂಗವಾಗಿ ಕಾರ್ಯನಿರ್ವಹಿಸುತ್ತಿರುವ ಪತ್ರಿಕಾರಂಗವನ್ನು ದುರ್ಬಲಗೊಳಿಸುವ ಹುನ್ನಾರ ಹೊಂದಿರುವ ವ್ಯಕ್ತಿಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸಿ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಎತ್ತಿ ಹಿಡಿಯುವ ಪತ್ರಕರ್ತರಿಗೆ ರಕ್ಷಣೆ ಒದಗಿಸಬೇಕು ಎಂದು ಪತ್ರಕರ್ತರ ಸಂಘ ಆಗ್ರಹಿಸುತ್ತದೆ” ಎಂದು ತಿಳಿಸಿದ್ದಾರೆ.
ಸೂಕ್ತ ಕಾನೂನು ಕ್ರಮಕ್ಕೆ ಒತ್ತಾಯಿಸಿ ಅಪರ ಜಿಲ್ಲಾಧಿಕಾರಿ ಕುಮಾರಸ್ವಾಮಿ ಅವರಿಗೆ ಕಾರ್ಯನಿರತ ಪತ್ರಕರ್ತರ ಸಂಘದ ಸದಸ್ಯರು ಮನವಿ ಸಲ್ಲಿಸಿದರು ಈ ವೇಳೆ ಪತ್ರಕರ್ತರಾದ ಚಿಕ್ಕಪ್ಪನಹಳ್ಳಿ ಷಣ್ಮುಖ, ಎಂ.ಎನ್. ಅಹೋಬಲಪತಿ, ಬಸವರಾಜ ಮುದನೂರು, ಟಿ.ಕೆ. ಬಸವರಾಜ್, ರವಿ ಮಲ್ಲಾಪುರ, ಮಂಜುನಾಥ್, ತಿಪ್ಪೇಸ್ವಾಮಿ ನಾಕೀಕೆರೆ, ಸಿ. ಹೆಂಜಾರಪ್ಪ ರವಿಕುಮಾರ್, ವಿನಾಯಕ ತೊಡರನಾಳು, ಸಿದ್ದರಾಜು, ಕಿರಣ್, ದ್ವಾರಕಾನಾಥ್, ಯೋಗೀಶ್, ಚಂದ್ರು, ರಾಘವೇಂದ್ರ, ಮಾಲತೇಶ ಅರಸ್, ನವೀನ್, ಕುಮಾರಸ್ವಾಮಿ ಹಾಗೂ ಇತರ ಪತ್ರಕರ್ತರು ಹಾಜರಿದ್ದರು.
ಈ ಸುದ್ದಿ ಓದಿದ್ದೀರಾ? ಚಿತ್ರದುರ್ಗ | ಬಾಲ್ಯ ವಿವಾಹಕ್ಕೆ ಯತ್ನ ಮದುವೆ ಬೇಡವೆಂದು ಅಂಗಲಾಚಿದ ಬಾಲಕಿಯ ರಕ್ಷಣೆ; ಐವರ ಮೇಲೆ ದೂರು ದಾಖಲು
ಘಟನೆ ತೀವ್ರ ಸ್ವರೂಪ ಪಡೆಯುತ್ತಿದ್ದಂತೆ ಎಚ್ಚೆತ್ತುಕೊಂಡು ಪತ್ರಿಕಾ ಭವನಕ್ಕೆ ಆಗಮಿಸಿದ ಮುಖಂಡ ಬಾಬು ರೆಡ್ಡಿ, “ಭಾನುವಾರ ಆಕಸ್ಮಿಕವಾಗಿ ಘಟನೆ ನಡೆದಿದ್ದು, ಈ ಬಗ್ಗೆ ಪಶ್ಚಾತ್ತಾಪ ಪಟ್ಟಿದ್ದೇನೆ. ಮಾಧ್ಯಮದವರ ಬಗ್ಗೆ ಬಾಯಿ ತಪ್ಪಿ ಹಗುರವಾಗಿ ಮಾತನಾಡಿದ್ದೇನೆ. ಇದನ್ನು ಮುಂದುವರಿಸುವುದು ಬೇಡ. ಇಲ್ಲಿಗೆ ನಿಲ್ಲಿಸೋಣ” ಎಂದು ಮನವಿ ಮಾಡಿ ವಿಷಾದ ವ್ಯಕ್ತಪಡಿಸಿದ್ದಾರೆ.