ಸಂಸತ್ತಿನಲ್ಲಿ ಉಪರಾಷ್ಟ್ರಪತಿಯವರ ನಡವಳಿಕೆಗಳನ್ನು ಅಣಕು ಮಾಡಿದ ಕಾಂಗ್ರೆಸ್ ಸಂಸದರ ನಡೆ ಖಂಡಿಸಿ ದಾವಣಗೆರೆ ಜಿಲ್ಲಾ ಬಿಜೆಪಿ ಘಟಕ ಪ್ರತಿಭಟನೆ ನಡೆಸಿದೆ.
ದಾವಣಗೆರೆ ನಗರದ ಕೆಬಿ ಬಡಾವಣೆಯಲ್ಲಿನ ಬಿಜೆಪಿ ಕಚೇರಿಯಿಂದ ಹೋರಟ ಪ್ರತಿಭಟನಾ ಮೆರವಣಿಗೆ ಜಯದೇವ ವೃತ್ತಕ್ಕೆ ತಲುಪಿದ ಬಳಿಕ ಮುಖಂಡರು ಹಾಗೂ ಕಾರ್ಯಕರ್ತರು ಕೇಂದ್ರದ ವಿಪಕ್ಷಗಳ ವಿರುದ್ಧ ಧಿಕ್ಕಾರ ಕೂಗುವ ಮೂಲಕ ಆಕ್ರೋಶ ವ್ಯಕ್ತಪಡಿಸಿದರು.
ಬಿಜೆಪಿ ಜಿಲ್ಲಾಧ್ಯಕ್ಷ ವೀರೇಶ್ ಹನಗವಾಡಿ “ಉಪರಾಷ್ಟ್ರಪತಿ ಹಾಗೂ ರಾಜ್ಯಸಭಾ ಸಭಾಪತಿ ಜಗದೀಪ್ ಧನಕರ್ ಅವರ ಹುದ್ದೆ ಸಂವಿಧಾನಿಕ ಹುದ್ದೆಯಾಗಿದ್ದು, ಕಲಾಪ ನಡೆಯುವ ವೇಳೆ ಅವರು ಮಾತನಾಡಿದ ಮಾತುಗಳನ್ನೇ ಅವಮಾನಿಸುವ ರೀತಿಯಲ್ಲಿ ವಿಪಕ್ಷಗಳ ಸಂಸದರು ಅಣಕು ಪ್ರದರ್ಶನ ಮಾಡಿದ್ದಾರೆ. ರಾಜ್ಯಸಭಾ ಸಭಾಪತಿಗೆ ಮಾಡಿದ ಅವಮಾನವಲ್ಲ, ನಮ್ಮ ದೇಶದ ಪವಿತ್ರ ಗ್ರಂಥ ಸಂವಿಧಾನ ಹಾಗೂ ದೇಶದ ಜನತೆಗೆ ಮಾಡಿದ ಅವಮಾನ. ಹಾಗಾಗಿ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಸೇರಿದಂತೆ ವಿಪಕ್ಷಗಳ ಸಂಸದರು ದೇಶದ ಜನರ ಕ್ಷಮೆಯಾಚಿಸಬೇಕು” ಎಂದು ಆಗ್ರಹಿಸಿದರು.
“ಸಂವಿಧಾನಿಕ ಹುದ್ದೆಗಳ ಬಗ್ಗೆ ಅರಿವಿಲ್ಲದ ರಾಹುಲ್ ಗಾಂಧಿಯವರನ್ನು ಮುಂಬರುವ ಚುನಾವಣೆ ನಂತರ ಪ್ರಧಾನಿ ಅಭ್ಯರ್ಥಿಯನ್ನಾಗಿ ಘೋಷಿಸಬೇಕಿತ್ತು. ಆದರೆ ಅವರಿಗೆ ಸಂವಿಧಾನದ ಅರಿವಿಲ್ಲ ಎನ್ನುವ ಕಾರಣಕ್ಕಾಗಿಯೇ ಕಾಂಗ್ರೆಸ್ ಮುಖಂಡರೇ ಮಲ್ಲಿಕಾರ್ಜುನ ಖರ್ಗೆ ಅವರ ಹೆಸರನ್ನೇ ಮುಂದಿನ ಪ್ರಧಾನ ಮಂತ್ರಿ ಅಭ್ಯರ್ಥಿಯೆಂದು ಘೋಷಿಸಿದ್ದಾರೆ. ಇದನ್ನು ಗಮನಿಸಿದರೆ ಮೇಲ್ನೋಟಕ್ಕೆ ಪ್ರಧಾನಿ ಹುದ್ದೆಗೆ ಅರ್ಹರಲ್ಲ ಎನ್ನುವುದು ಕಾಂಗ್ರೆಸ್ ಮುಖಂಡರಿಗೆ ಮನವರಿಕೆಯಾದಂತೆ ಅನಿಸುತ್ತದೆ. ಇಂತಹ ವ್ಯಕ್ತಿ ಉಪರಾಷ್ಟ್ರಪತಿಯವರನ್ನು ಅಣಕು ಮಾಡಿರುವುದು ಖಂಡನೀಯ” ಎಂದರು.
ಈ ಸುದ್ದಿ ಓದಿದ್ದೀರಾ? ದಾವಣಗೆರೆ | ಸಂತ್ರಸ್ತರಿಗೆ ಮಾನವೀಯ ನೆರವು ನೀಡಬೇಕು: ಡಾ. ಲೋಹಿತ್ ನಾಯ್ಕರ್
ಪ್ರತಿಭಟನೆಯಲ್ಲಿ ವಿಧಾನ ಪರಿಷತ್ ಮಾಜಿ ಸಚೇತಕ ಡಾ. ಎ ಎಚ್ ಶಿವಯೋಗಿಸ್ವಾಮಿ, ಯಶವಂತರಾವ್ ಜಾಧವ್, ಜಗದೀಶ್, ರಾಜನಹಳ್ಳಿ ಶಿವಕುಮಾರ್, ಡಿ ಎಸ್ ಶಿವಶಂಕರ್, ಪ್ರಕಾಶ್ ಪಾಟೀಲ್, ಎಸ್ ಮಂಜಾನಾಯ್ಡ್ ಸೇರಿದಂತೆ ಇತರರು ಇದ್ದರು.