ವಿ ಬಿ ಜಿ ರಾಮ್ ಜಿ ಯೋಜನೆ ಹಣವನ್ನು ಬಸ್ ಸ್ಟಾಪ್ ನಿರ್ಮಾಣಕ್ಕೆ ಬಳಸುವುದನ್ನು ಎಐಟಿಯುಸಿ ಸಂಯೋಜಿತ ಉದ್ಯೋಗ ಖಾತ್ರಿ ಕಾರ್ಮಿಕರ ಸಂಘದ ಜಿಲ್ಲಾಧ್ಯಕ್ಷ ಆವರಗೆರೆ ಚಂದ್ರು ವಿರೋಧಿಸಿದ್ದಾರೆ.
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಸಚಿವರಾದ ಈಶ್ವರ ಬಿ ಖಂಡ್ರೆ ಅವರು ಇಲಾಖೆ ಕಾರ್ಯದರ್ಶಿಯವರಿಗೆ ಸೂಚನೆ ನೀಡಿ, ಗ್ರಾಮೀಣ ಪ್ರದೇಶಗಳಲ್ಲಿ ಒಂದು ಸಾವಿರ ಬಸ್ ಶೆಲ್ಟರ್ ನಿರ್ಮಾಣಕ್ಕೆ ವಿಬಿಜಿ ರಾಮ್ ಜಿ ಯೋಜನೆ ಹಣದಲ್ಲಿ ನಿರ್ಮಾಣ ಮಾಡಲು ಸೂಚಿಸಿರುವುದನ್ನು ವಿರೋಧಿಸಿರುವ ಆವರಗೆರೆ ಚಂದ್ರು, “ಇದರಿಂದ ಯೋಜನೆಯ ಮೂಲ ಆಶಯಕ್ಕೆ ಧಕ್ಕೆ ಉಂಟಾಗಿ ಉದ್ಯೋಗ ಖಾತರಿ ಕಾರ್ಮಿಕರು ಕೆಲಸ ಮತ್ತು ಕೂಲಿಯಿಂದ ವಂಚಿತರಾಗುತ್ತಾರೆ” ಎಂದಿದ್ದಾರೆ.
“ಕಬ್ಬಿಣ ಮತ್ತು ಶೀಟ್ ಬಳಕೆ ಮಾಡಿ ನಿರ್ಮಾಣ ಮಾಡುವುದರಿಂದ ಕೆಲವೇ ಜನರಿಗೆ ಇದರ ಲಾಭ ಆಗುತ್ತದೆ ಆದ್ದರಿಂದ ಗ್ರಾಮೀಣ ಪ್ರದೇಶದಲ್ಲಿ ಬಸ್ ಶೆಲ್ಟರ್ ನಿರ್ಮಾಣಕ್ಕೆ ಇಲಾಖೆ ಕಾರ್ಯದರ್ಶಿಗಳಿಗೆ ನೀಡಿರುವ ಸೂಚನೆಯನ್ನು ಹಿಂಪಡೆದು ಅದರ ಬದಲಾಗಿ ಬೇರೆ ಕಾಮಗಾರಿಗಳನ್ನು ಮಾಡುವುದರಿಂದ ಸ್ಥಳೀಯ ಉದ್ಯೋಗ ಖಾತ್ರಿ ಕಾರ್ಮಿಕರಿಗೆ ಕೆಲಸ ಮತ್ತು ಕೂಲಿ ದೊರೆಯುತ್ತದೆ. ಆದ್ದರಿಂದ, ತಮ್ಮ ಸೂಚನೆಯನ್ನು ಪುನಃ ಪರಿಶೀಲಿಸಬೇಕಿದೆ” ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವರಿಗೆ ಉದ್ಯೋಗ ಖಾತರಿ ಕಾರ್ಮಿಕರ ಸಂಘದ ಜಿಲ್ಲಾಧ್ಯಕ್ಷ ಆವರಗೆರೆ ಚಂದ್ರು , ಮುಖಂಡರುಗಳಾದ ನರೇಗಾ ರಂಗನಾಥ್, ಗದಿಗೇಶ ಪಾಳೇದ, ಎ ತಿಪ್ಪೇಶ್ ಒತ್ತಾಯಿಸಿದ್ದಾರೆ.






