ಸ್ಲಂನಲ್ಲಿ ವಾಸಿಸುವ ವಸತಿ ಹೀನರಿಗೆ ನಿವೇಶನಗಳನ್ನು ನೀಡುವಂತೆ ಹಲವು ವರ್ಷಗಳಿಂದ ಸ್ಲಂಜನಾಂದೋಲನ ಕರ್ನಾಟಕ, ಸಾವಿತ್ರಿಬಾಯಿ ಫುಲೆ ಮಹಿಳಾ ಸಂಘಟನೆ ದಾವಣಗೆರೆ ಜಿಲ್ಲಾ ಸಮಿತಿಯಿಂದ ಹೋರಾಟ ಮಾಡುತ್ತಾ ಬಂದಿದ್ದರೂ ನಮ್ಮ ಮನವಿಗೆ ಜಿಲ್ಲಾಡಳಿತ ಹಾಗೂ ಜನಪ್ರತಿನಿಧಿಗಳು ಸಂದಿಸುತ್ತಿಲ್ಲ ಎಂದು ಸಮಿತಿ ಗೌರವಾಧ್ಯಕ್ಷ ಎಸ್ ಎಲ್ ಆನಂದಪ್ಪ ಅಸಮಾಧಾನ ವ್ಯಕ್ತಪಡಿಸಿದರು.
ದಾವಣಗೆರೆಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, “ಸಂಘಟನೆಯ ಹೋರಾಟಕ್ಕೆ ಸ್ಪಂದಿಸಿದ ಹಿಂದಿನ ಜಿಲ್ಲಾಧಿಕಾರಿಗಳಾಗಿದ್ದ ಗೌತಮ್ ಬಗಾದಿ ಅವರು ಜಿಎಂಐಟಿ ಬಳಿ 41 ಎಕರೆ ಹಾಗೂ ಬಾತಿ ಸರ್ವೇ ನಂಬರ್ನಲ್ಲಿ 20 ಎಕರೆ ಭೂಮಿ ಖರೀದಿಸಿದ್ದು, ಮೊದಲ ಆದ್ಯತೆಯನ್ನು ಸ್ಲಂ ವಸತಿರಹಿತರಿಗೆ ನೀಡುವುದಾಗಿ ಭರವಸೆ ನೀಡಿದ್ದರು. ಅವರ ವರ್ಗಾವಣೆ ನಂತರ ಇಬ್ಬರು, ಮೂವರು ಜಿಲ್ಲಾಧಿಕಾರಿಗಳು ಬಂದರು. ಅವರಿಗೂ ಕೂಡ ಮನವಿ ಸಲ್ಲಿಸಿದರು ಕ್ರಮ ಕೈಗೊಂಡಿಲ್ಲ”
ಎಂದು ಆಕ್ಷೇಪಿಸಿದರು.
“ಈಗಿನ ಜಿಲ್ಲಾಧಿಕಾರಿಗೆ ಜನವರಿ 8ರಂದು ವಸತಿ ರಹಿತರ ಪರವಾಗಿ ಸಂಘಟನೆಯಿಂದ ಮನವಿ ಸಲ್ಲಿಸಲಾಗುವುದು. ಕ್ರಮ ಕೈಗೊಳ್ಳದಿದ್ದಲ್ಲಿ ಜನವರಿ 16ರಿಂದ ನಿವೇಶನ ಸಿಗುವವರೆಗೂ ಜಿಲ್ಲಾಧಿಕಾರಿ ಕಚೇರಿ ಮುಂಭಾಗದಲ್ಲಿ ಧರಣಿ ನಡೆಸಲಾಗುವುದು” ಎಂದು ತಿಳಿಸಿದರು.
ಪ್ರಧಾನ ಕಾರ್ಯದರ್ಶಿ ರೇಣುಕಾ ಯಲ್ಲಮ್ಮ ಮಾತನಾಡಿ, “ನಮ್ಮ ಸಂಘಟನೆಯಿಂದ ಕಳೆದ 14 ವರ್ಷಗಳಿಂದ ಮೂಲ ಸೌಕರ್ಯಕ್ಕಾಗಿ ಹೋರಾಟ ಮಾಡಿಕೊಂಡು ಬರಲಾಗಿದೆ. ಸ್ಲಂನಿವಾಸಿಗಳ ನಿವೇಶನಕ್ಕಾಗಿ ಹೋರಾಟ ನಡೆಸಿದ್ದರೂ ಅಧಿಕಾರಿಗಳು ಸ್ಪಂದಿಸುತ್ತಿಲ್ಲ. ಈಗಿನ ಜಿಲ್ಲಾಧಿಕಾರಿಗಳು ನಮ್ಮ ಮನವಿಗೆ ಕ್ರಮ ಕೈಗೊಳ್ಳದಿದ್ದರೆ ಸುಮಾರು 1000ಕ್ಕೂ ಹೆಚ್ಚು ನಿವೇಶನ ರಹಿತ ಮಹಿಳೆಯರು, ಮಕ್ಕಳು ಜಿಲ್ಲಾಧಿಕಾರಿ ಕಚೇರಿ ಮುಂಭಾಗದಲ್ಲಿ ನಿವೇಶನ ನೀಡುವವರೆಗೂ ನಿರಂತರ ಧರಣಿ ನಡೆಸಲಾಗುತ್ತದೆ” ಎಂದು ಎಚ್ಚರಿಕೆ ನೀಡಿದರು.
ಈ ಸುದ್ದಿ ಓದಿದ್ದೀರಾ? ದಾವಣಗೆರೆ | ಕಾರ್ಮಿಕರೊಬ್ಬರಿಂದ ಒಳಚರಂಡಿ ಸ್ವಚ್ಛತೆ; ಎಫ್ಐಆರ್ ದಾಖಲು
ಸುದ್ದಿಗೋಷ್ಟಿಯಲ್ಲಿ ಎಂ ಶಬ್ಬಿರ್ ಸಾಬ್, ಮುನ್ನಾ ಸಾಬ್, ಮಂಜುಳ, ಜಂಶಿದಾಬಾನು, ನಯಾಜ್ ಸೇರಿದಂತೆ ಇತರರು ಇದ್ದರು.