ಮಳೆಯ ಅಭಾವದಿಂದ ಬೆಳೆ ಕೈಗೆ ಬಾರದೆ ರೈತರು ಪರ್ಯಾಯ ಆದಾಯದ ಮೂಲ ಹುಡುಕುತ್ತಿದ್ದು, ದಾವಣಗೆರೆ ಜಿಲ್ಲೆ ಸಂತೇಬೆನ್ನೂರು ಭಾಗದ ರೈತರು ಭತ್ತದ ಹುಲ್ಲಿನ ಯಾಂತ್ರೀಕೃತ ಸಿಲಿಂಡರಿನಾಕೃತಿಯ ಪೆಂಡಿಗಳನ್ನು ತಯಾರಿಸಿ ಮಾರುತ್ತಿದ್ದಾರೆ.
ಈ ಮೂಲಕ ಪರ್ಯಾಯ ಆದಾಯದ ಮೂಲವನ್ನು ಸೃಷ್ಟಿಸಿಕೊಂಡಿದ್ದಾರೆ. ಬರಗಾಲದಿಂದ ತ್ತರಿಸಿರುವ ಬೇರೆ ಭಾಗದ ರೈತರು ದನಕರುಗಳ ಮೇವಿಗೆ ಭತ್ತದ ಹುಲ್ಲನ್ನು ಕೊಳ್ಳುಲ್ಲು ಇಲ್ಲಿಗೆ ಬರುತ್ತಿದ್ದಾರೆ.
ಈಗಾಗಲೇ ಟ್ರ್ಯಾಕ್ಟರ್‌ಗೆ ಪೆಂಡಿ ಕಟ್ಟುವ ಯಂತ್ರಗಳನ್ನು ಕೆಲ ರೈತರು ಖರೀದಿಸಿದ್ದಾರೆ. ಎಕರೆಗೆ 35ರಿಂದ 40 ಭತ್ತದ ಹುಲ್ಲಿನ ಪೆಂಡಿಗಳಾಗುತ್ತವೆ. ಯಂತ್ರದ ಮೂಲಕ ಒಂದು ಪೆಂಡಿ ಕಟ್ಟಲು 60ರೂ. ದರ ವಿಧಿಸಲಾಗುತ್ತಿದೆ. ಆಂಧ್ರಪ್ರದೇಶದಿಂದಲೂ ಪೆಂಡಿ ಕಟ್ಟುವ ಯಂತ್ರಗಳು ಬಂದಿದ್ದು ನೀರಾವರಿ ಪ್ರದೇಶದಲ್ಲಿ ಸದ್ದು ಮಾಡುತ್ತಿವೆ.
ನಾಲ್ಕು ಎಕರೆಯಲ್ಲಿ ಯಾಂತ್ರೀಕೃತ ಭತ್ತದ ಹುಲ್ಲಿನ 160 ಪೆಂಡಿಗಳು ಉತ್ಪನ್ನವಾಗಿದ್ದವು. ಪ್ರತೀ ಪೆಂಡಿಗೆ 250 ರೂ. ದರದಲ್ಲಿ ಮಾರಾಟ ಮಾಡಲಾಯಿತು. ಯಂತ್ರದ ಮಾಲೀಕನಿಗೆ ಒಂದು ಪೆಂಡಿಗೆ 60 ರೂ. ನೀಡಲಾಯಿತು ಎಂದು ರೈತರು ಹೇಳುತ್ತಾರೆ.
ಸಾಂಪ್ರದಾಯಿಕವಾಗಿ ಭತ್ತದ ಹುಲ್ಲನ್ನು ಟ್ರ್ಯಾಕ್ಟರ್ ಟ್ರೇಲರ್‌ಗೆ ಹೇರಿ ಹಗ್ಗ ಬಿಗಿದು ಸಾಗಣೆ ಮಾಡಲಾಗುತ್ತಿತ್ತು. ಯಾಂತ್ರೀಕೃತ ಭತ್ತದ ಪೆಂಡಿಗಳು ಸಾಗಣೆಗೆ ಸುಲಭ. ಒಂದು ಟ್ರ್ಯಾಕ್ಟರ್ ಲೋಡ್‌ನಲ್ಲಿ 40ಪೆಂಡಿಗಳನ್ನು ಒಮ್ಮೆಗೆ ಸಾಗಿಸಬಹುದು ಎನ್ನುತ್ತಾರೆ ರೈತರು.
ಭೀಮನೆರೆ ರೈತ ವೀರೇಂದ್ರ ಪಾಟೀಲ್ ಯಾಂತ್ರೀಕೃತ ಪೆಂಡಿ ಕಟ್ಟುವ ಯಂತ್ರಕ್ಕೆ 3ಲಕ್ಷ ರೂ. ಕೊಟ್ಟು ಖರೀದಿಸಿದ್ದಾರೆ. ಭತ್ತದ ಹುಲ್ಲಿನ ಬೇಡಿಕೆ ಹೆಚ್ಚಿದ್ದರಿಂದ ಹಗಲು-ರಾತ್ರಿ ಪೆಂಡಿ ಕಟ್ಟುವ ಕಾರ್ಯದಲ್ಲಿ ನಿರತರಾಗಿದ್ದಾರೆ. ದಿನಕ್ಕೆ 400ರಿಂದ 500ಭತ್ತದ ಹುಲ್ಲಿನ ಪೆಂಡಿಗಳನ್ನು ತಯಾರಿಸುತ್ತಾರೆ.
ಚಿತ್ರದುರ್ಗ, ಚಳ್ಳಕೆರೆ, ಬೀರೂರು, ಕಡೂರು, ಅಜ್ಜಂಪುರ ಭಾಗದ ಗ್ರಾಹಕರು ಮೇವು ಖರೀದಿಸಲು ಧಾವಿಸುತ್ತಿದ್ದಾರೆ. ಈ ಭಾಗದಲ್ಲಿ ಭತ್ತದ ಕೊಯ್ಲು ಶೇ. 60ರಷ್ಟು ಪೂರ್ಣಗೊಂಡಿದೆ. ಭತ್ತದ ಹುಲ್ಲಿನ ಬೇಡಿಕೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ ಎನ್ನುತ್ತಾರೆ ರೈತ ವಿಶ್ವನಾಥ್.