ಕಾರ್ಗಿಲ್ ಕಂಪನಿಯ ಮಾರಾಟ ಅಥವಾ ಹಸ್ತಾಂತರ ನಿಲ್ಲಿಸಬೇಕು. ಪ್ರಕ್ರಿಯೆ ಕುರಿತು ಹಾಲಿ ಕೆಲಸಗಾರರಿಗೆ ಉದ್ಯೋಗ ಖಾತರಿ ನೀಡಬೇಕು ಮತ್ತು ಮಾಲಿನ್ಯದಿಂದ ಕೃಷಿ ಭೂಮಿ, ಬೆಳೆ ಹಾನಿಯಾಗುವ ಸಾಧ್ಯತೆಗಳಿವೆ. ಇದರ ಬಗ್ಗೆ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿ ಅಖಿಲ ಭಾರತ ರೈತ ಕೃಷಿ ಕಾರ್ಮಿಕ ಸಂಘಟನೆ (AIKKMS) ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ (ವಾಸುದೇವ ಮೇಟಿ ಬಣ) ಮುಖಂಡರು, ಕಾರ್ಯಕರ್ತರು ದಾವಣಗೆರೆ ಜಿಲ್ಲೆಯ ಹರಿಹರ ತಾಲೂಕು ತಹಶೀಲ್ದಾರರಿಗೆ ಮನವಿ ಸಲ್ಲಿಸಿ ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ಮಾತನಾಡಿದ ಮುಖಂಡರು “ಕಾರ್ಗಿಲ್ ಎಂಬ ಸಂಸ್ಥೆ 160 ವರ್ಷಗಳ ಇತಿಹಾಸ ಹೊಂದಿರುವ, ಪರಿಸರ ಸ್ನೇಹಿ , ಉದ್ಯೋಗ ಸೃಷ್ಟಿಯ ಭರವಸೆ ಮತ್ತು ರೈತ ಪರವಾಗಿರುವ ಪ್ರತಿಷ್ಠಿತ ಕಂಪನಿಯಾಗಿದೆ. ನಮ್ಮ ಕೃಷಿ ಉತ್ಪನ್ನಗಳನ್ನು ಉತ್ತಮ ಧಾರಣೆಯೊಂದಿಗೆ ಖರೀದಿಸಿ, ಸುತ್ತಮುತ್ತಲಿನ ಯುವಕರಿಗೆ ಉದ್ಯೋಗದ ಅವಕಾಶಗಳನ್ನು ಒದಗಿಸುತ್ತಾ ಬಂದಿದೆ. ಈ ನಂಬಿಕೆಯ ನಡವಳಿಕೆಯಿಂದಾಗಿ ನಾವು ನಮ್ಮ ಕೃಷಿ ಭೂಮಿಯನ್ನು ಕಡಿಮೆ ಬೆಲೆಯಲ್ಲಿ ಕಾರ್ಗಿಲ್‌ಗೆ ಬಿಟ್ಟುಕೊಟ್ಟಿದ್ದೆವು” ಎಂದು ತಿಳಿಸಿದರು.
“ಆದರೆ ಇತ್ತೀಚೆಗೆ ಈ ಘಟಕವನ್ನು ಸಾತ್ವಿಕ್ ಎಂಬ ಹೊಸ ಸಂಸ್ಥೆಗೆ ಹಸ್ತಾಂತರಿಸಲಾಗುತ್ತಿದೆ ಎಂಬ ಮಾಹಿತಿ ನಮಗೆ ಲಭಿಸಿದ್ದು, ಇದು ಆಘಾತ ತರಿಸುವ ಅಂಶವಾಗಿದೆ. ಈಗಾಗಲೇ ಮಧ್ಯಪ್ರದೇಶದ ಗ್ವಾಲಿಯರ್ ನಲ್ಲಿ ಸಾತ್ವಿಕ್ ಎಂಬ ಸಂಸ್ಥೆಯ ಘಟಕವು ಕಾರ್ಯ ನಿರ್ವಹಿಸುತ್ತಿದ್ದು, ಅಲ್ಲಿ ಯಾವುದೇ ವಾಯುಮಾಲಿನ್ಯದ ಕಾಳಜಿ, ಭೂಮಾಲಿನ್ಯದ ಕಾಳಜಿ, ಕೆಮಿಕಲ್ಸ್ ಯುಕ್ತ ನೀರನ್ನು ಶುದ್ದೀಕರಿಸದೇ ಬಿಡುತ್ತಿರುವುದನ್ನು ಅಲ್ಲಿನ ರೈತರು ಪ್ರತಿಭಟಿಸಿ ಬಹಿಷ್ಕಾರ ಹಾಕುತ್ತಿದ್ದಾರೆ” ಎಂದು ಆತಂಕ ವ್ಯಕ್ತಪಡಿಸಿದರು.
“ಸಾತ್ವಿಕ್ ಕಂಪೆನಿಯಿಂದ ಕಾರ್ಮಿಕರಿಗೆ ಉದ್ಯೋಗ ಭದ್ರತೆ ಇಲ್ಲ, ಇಬ್ಬರು ಮಾಡುವ ಕೆಲಸದಲ್ಲಿ ಒಬ್ಬರನ್ನೇ ದುಡಿಸಿಕೊಂಡು ಉದ್ಯೋಗ ವಂಚನೆ ಮತ್ತು ಕಾರ್ಮಿಕರಿಗೆ ಕನಿಷ್ಟ ಸೌಲಭ್ಯಗಳನ್ನು ನೀಡುತ್ತಿಲ್ಲ ಸಾತ್ವಿಕ್ ಗರಿಷ್ಟ ಲಾಭ- ಕನಿಷ್ಠ ಹೂಡಿಕೆ ತತ್ವದಲ್ಲಿದ್ದು ಇದು ರೈತರ, ಕಾರ್ಮಿಕರ ವಿರೋಧಿಯಾಗಿದೆ” ಎಂದು ಆಕ್ರೋಶ ವ್ಯಕ್ತಪಡಿಸಿದರು.

“ಹಾಲಿ ಕಾರ್ಗಿಲ್ ಕಂಪನಿ ಸುತ್ತಮುತ್ತಲಿನ ಹಳ್ಳಿಗಳ ನಿರುದ್ಯೋಗಿ ಯುವಕರಿಗೆ ಖಾಯಂ ಹಾಗೂ ಗುತ್ತಿಗೆ ಅಡಿಯಲ್ಲಿ ಕೆಲಸ ನೀಡಿದೆ. ಆದರೆ ಸಾತ್ವಿಕ್ ಗುತ್ತಿಗೆ ಕಾರ್ಮಿಕರನ್ನು ಕೆಲಸದಿಂದ ತೆಗೆದು ಹಾಕುವ ಮಾತುಗಳನ್ನು ಹೇಳಿದೆ. ಅದು ಮಾಡಿದ್ದೆ ಆದಲ್ಲಿ ಸುತ್ತಮುತ್ತಲಿನ ಹಳ್ಳಿಗಳ ನೂರಾರು ಕಾರ್ಮಿಕರು ಕೆಲಸ ಕಳೆದುಕೊಳ್ಳಲಿದ್ದಾರೆ” ಎಂದು ಆತಂಕ ವ್ಯಕ್ತಪಡಿಸಿದರು.
“ಬೆಳ್ಳೂಡಿ ಮತ್ತು ಸುತ್ತಮುತ್ತಲಿನ ಹಳ್ಳಿಗಳ ರೈತರು ಕಾರ್ಗಿಲ್ ಕಂಪನಿ ನೂರಾರು ವರ್ಷ ಇತಿಹಾಸ ಇರುವ ಕಂಪನಿ ರೈತರಿಗೆ ಮತ್ತು ಸುತ್ತ ಮುತ್ತಲಿನ ಇರುವ ಉದ್ಯೋಗಿಗಳಿಗೆ ಕೆಲಸ ನೀಡುತ್ತದೆ. ಜೊತೆಗೆ ಪರಿಸರ ಸ್ನೇಹಿಯಾಗಿರುತ್ತದೆ ಎನ್ನುವ ಭರವಸೆಯಿಂದ ನಮ್ಮ ಫಲವತ್ತಾದ ಹೊಲಗಳು ಮತ್ತ ನಮ್ಮ ನೈಸರ್ಗಿಕ ಸಂಪನ್ಮೂಲಗಳನ್ನು ಬಿಟ್ಟುಕೊಟ್ಟಿದ್ದೇವೆ” ಎಂದು ಸ್ಪಷ್ಟಪಡಿಸಿದರು.
“ಈ ಹಿನ್ನೆಲೆಯಲ್ಲಿ ಕೂಡಲೇ ಸಾತ್ವಿಕ್ ಕಂಪನಿಗೆ ಹಸ್ತಾಂತರ ಪ್ರಸ್ತಾಪವನ್ನು ಕೈ ಬಿಡುವಂತೆ ತಾವು ಆದೇಶಿಸಬೇಕು. ಇಲ್ಲವಾದಲ್ಲಿ ನಮ್ಮ ಜಮೀನು ಮರಳಿ ನೀಡಲು ಮತ್ತು ನಮ್ಮ ನೈಸರ್ಗಿಕ ಸಂಪನ್ಮೂಲಗಳಿಗೆ ಅಸಹಕಾರ ಚಳುವಳಿಯನ್ನು ಆರಂಭಿಸಬೇಕಾಗುತ್ತದೆ” ಎಂದು ಎಚ್ಚರಿಸಿದರು.
“ಸ್ಟಾರ್ಟ್ಅಪ್ ಕಂಪನಿಯಾದ ಸಾತ್ವಿಕ್ ಗೆ ನೀಡುವ ಪ್ರಸ್ತಾಪವನ್ನು ಕೈ ಬಿಟ್ಟು ಕಾರ್ಗಿಲ್ ಕಂಪನಿಯೇ ಮುಂದುವರೆಯಬೇಕು. ಕಂಪೆನಿ ಸ್ಥಳೀಯ ಮಾರುಕಟ್ಟೆ (APMC) ಮೂಲಕ ಸ್ಥಳೀಯ ರೈತರ ಮೆಕ್ಕೆಜೋಳವನ್ನು ಖರೀದಿಸಬೇಕು. ಪರಿಸರ ಮಾಲಿನ್ಯ ಮಾಡುವ ಕಂಪನಿಗಳಿಗೆ ಕಂಪನಿಯನ್ನು ಗುತ್ತಿಗೆ ಅಥವಾ ಮಾರಾಟ ಮಾಡಬಾರದು. ಕೆಲಸ ಮಾಡುತ್ತಿರುವ ಸ್ಥಳೀಯರಿಗೆ ಉದ್ಯೋಗ ಖಾತ್ರಿ ನೀಡಬೇಕು. ಅಭಿವೃದ್ಧಿಗೆ ಸಿಎಸ್ ಆರ್ ನಿಧಿ ಹೆಚ್ಚಿಸಬೇಕು. ಸ್ಥಳೀಯ ಪರಿಸರದ ರಕ್ಷಣೆ, ರೈತರ ಭದ್ರತೆ, ಮತ್ತು ಉದ್ಯೋಗ ಖಾತರಿಯ ವಿಷಯಗಳಲ್ಲಿ ಮೋಸ ಮಾಡುತ್ತಿರುವ ಸಾತ್ವಿಕ್ ಕಂಪನಿಗೆ ಯಾವುದೇ ಕಾರಣಕ್ಕೂ ಹಸ್ತಾಂತರಕ್ಕೆ ಅನುಮತಿ ನೀಡಬಾರದು” ಎಂಬ ಬೇಡಿಕೆಗಳನ್ನು ತಹಸೀಲ್ದಾರರಿಗೆ ಸಲ್ಲಿಸಿ ಕ್ರಮಕ್ಕೆ ಒತ್ತಾಯಿಸಿದರು.
ಈ ಸುದ್ದಿ ಓದಿದ್ದೀರಾ? ದಾವಣಗೆರೆ | ಸೈನಿಕ ಹುಳುಗಳ ಹಾವಳಿಗೆ ನಲುಗಿದ ಮೆಕ್ಕೆಜೋಳ; ರೈತರ ನೆರವಿಗೆ ಬರಬೇಕಿದೆ ಕೃಷಿ ವಿಜ್ಞಾನ, ಸರ್ಕಾರ
ಪ್ರತಿಭಟನೆಯಲ್ಲಿ ಎಐಕೆಕೆಎಂಎಸ್ ಜಿಲ್ಲಾಧ್ಯಕ್ಷ ಮಧು ತೊಗಲೇರಿ, ಸಾಮಾಜಿಕ ಮುಖಂಡರಾದ ಮಂಜುನಾಥ್ ಕೈದಾಳೆ, ಕರ್ನಾಟಕ ರಾಜ್ಯ ರೈತ ಸಂಘ ಹಸಿರು ಸೇನೆ.( ವಾಸುದೇವ ಮೇಟಿ ಬಣ) ತಾಲೂಕು ಅಧ್ಯಕ್ಷ ಸುನಿಲ್ ಕುಮಾರ್ ಎಚ್, ಸಂಘಟನೆ ಮುಖಂಡರಾದ ಮಂಜುನಾಥ್ ಶಿವನಹಳ್ಳಿ, ರಾಜು ಅನಗವಾಡಿ ಬಸವರಾಜಪ್ಪ ನೀರ್ತಡಿ, ಶಿವಾಜಿ ರಾವ್, ಬೆಳ್ಳೂಡಿ ರೈತ ಮುಖಂಡರಾದ ಸಿದ್ದೇಶ್, ಮರಳುಸಿದ್ದಪ್ಪ, ಮಂಜುನಾಥ್, ರುದ್ರಜ್ಜ, ಹರಿಹರದ ರೈತರಾದ ನೀಲಪ್ಪ, ರತ್ನಮ್ಮ, ಬೆಳ್ಳೂಡಿ ರೈತ ಮುಖಂಡರು ಹಾಗೂ ರೈತರು ಭಾಗವಹಿಸಿದ್ದರು.