ಭತ್ತದ ಬೆಂಬಲ ಬೆಲೆ ನಿಗದಿಗೆ ಆಗ್ರಹಿಸಿ, ಬೆಂಬಲ ಬೆಲೆಗೆ ಖರೀದಿಸುವಂತೆ ಆದೇಶ ನೀಡಬೇಕು ಎಂದು ಆಗ್ರಹಿಸಿ ಕರ್ನಾಟಕ ರಾಜ್ಯ ರೈತ ಸಂಘ ದಾವಣಗೆರೆ ಜಿಲ್ಲೆ ಚಿಕ್ಕತೊಗಲೇರಿ ಬಳಿಯ ರಾಜ್ಯ ಹೆದ್ದಾರಿ ಸೇರಿದಂತೆ ಜಿಲ್ಲೆಯ ವಿವಿಧೆಡೆ ರಸ್ತೆ ತಡೆ ನಡೆಸಿ ಒತ್ತಾಯಿಸಿತು.

ಭತ್ತಕ್ಕೆ ಕನಿಷ್ಠ 3500 ರೂಪಾಯಿಗಳ ಬೆಂಬಲ ಬೆಲೆ ನೀಡಬೇಕು ಮತ್ತು ಹೆಚ್ಚುವರಿ 1000 ರೂ. ಬೋನಸ್ ನೀಡಬೇಕು. ಈ ಕೂಡಲೇ ಖರೀದಿದಾರರಿಗೆ 3500 ಕ್ಕಿಂತ ಹೆಚ್ಚಿನ ಬೆಲೆಗೆ ಖರೀದಿಗೆ ಆದೇಶ ನೀಡಲು ಈ ಕೂಡಲೇ ಕೃಷಿ ಸಚಿವರು ಅಥವಾ ಮುಖ್ಯಮಂತ್ರಿಗಳು ಸಭೆ ನಡೆಸಿ ಆದೇಶಿಸಬೇಕು ಎಂದು ಒತ್ತಾಯಿಸಿ ದಾವಣಗೆರೆಯ ಚಿಕ್ಕತೊಗಲೇರಿ, ಜಗಳೂರು ತಾಲೂಕು ಸೇರಿದಂತೆ ಹಲವೆಡೆ ಮುಖಂಡ ಹುಚ್ಚವನಹಳ್ಳಿ ಮಂಜುನಾಥ್ ನೇತೃತ್ವದ ಕರ್ನಾಟಕ ರಾಜ್ಯ ರೈತ ಸಂಘ ರಸ್ತೆ ತಡೆ ನಡೆಸಿತು.

ಈ ವೇಳೆ ಮಾತನಾಡಿದ ಮುಖಂಡ ಹುಚ್ಚವನಹಳ್ಳಿ ಮಂಜುನಾಥ್, “ಭತ್ತದ ಬೆಲೆ ಕುಸಿತದಿಂದ ರೈತರು ಆತಂಕಗೊಂಡಿದ್ದಾರೆ. ಈಗ ಸಿಗುತ್ತಿರುವ ಬೆಲೆಯಿಂದಾಗಿ ಭತ್ತದ ಖರ್ಚು ವೆಚ್ಚಗಳಿಗೆ ಅದು ಸಾಕಾಗುತ್ತಿಲ್ಲ. ರೈತರು ನಷ್ಟದ ಬೆಲೆಗೆ ಭತ್ತ ಮಾರಾಟ ಮಾಡುವಂತಾಗಿದೆ. ಆದ್ದರಿಂದ ಜಿಲ್ಲಾಧಿಕಾರಿಗಳಿಗೆ 3500 ಗಳಿಗೆ ಭತ್ತ ಖರೀದಿ ಮಾಡಲು ಆದೇಶ ನೀಡಲು ಕೃಷಿ ಸಚಿವರ ಅಥವಾ ಮುಖ್ಯಮಂತ್ರಿಗಳ ಸಭೆ ಕರೆಯಬೇಕೆಂದು ಮನವಿ ನೀಡಿದ್ದು ಅದಕ್ಕೆ ಸ್ಪಂದಿಸಿಲ್ಲ. ಸರ್ಕಾರಕ್ಕೆ ರೈತರ ಹಿತಾಸಕ್ತಿ ಬಗ್ಗೆ ಕಾಳಜಿಯೇ ಇಲ್ಲ. ಕಾರಣ ರೈತರು ರಸ್ತೆ ತಡೆ ನಡೆಸುತ್ತಿದ್ದು ಈ ಕೂಡಲೇ ಭತ್ತದ ಖರೀದಿಗೆ 3500 ಬೆಂಬಲ ಬೆಲೆಗೆ ತೆಗೆದುಕೊಳ್ಳಲು ಆದೇಶಿಸಬೇಕು ಮತ್ತು ಹೆಚ್ಚುವರಿ ಬೋನಸ್ ನೀಡಬೇಕು” ಎಂದು ಒತ್ತಾಯಿಸಿದರು.

“ಜಿಲ್ಲಾಡಳಿತ ಸೂಕ್ತವಾಗಿ ಸ್ಪಂದಿಸದ ಹಿನ್ನೆಲೆಯಲ್ಲಿ ಅನಿವಾರ್ಯವಾಗಿ ಜಿಲ್ಲಾದ್ಯಂತ ಎಲ್ಲ ರೈತರು ತಮ್ಮ ಗ್ರಾಮಗಳಲ್ಲಿಯೇ ರಸ್ತೆತಡೆ ಮಾಡಿ ಸರ್ಕಾರಕ್ಕೆ ಎಚ್ಚರಿಕೆ ನೀಡಲು ಕರೆ ನೀಡಲಾಗಿದೆ” ಎಂದು ತಿಳಿಸಿದರು.
ಈ ಸುದ್ದಿ ಓದಿದ್ದೀರಾ? ಚಿತ್ರದುರ್ಗ | ಸಾಲಬಾಧೆ, ಬೆಳೆ ಕೈಕೊಟ್ಟದ್ದರಿಂದ ವಿಷ ಸೇವಿಸಿ ರೈತ ಆತ್ಮಹತ್ಯೆ.
ಈ ವೇಳೆ ರೈತಸಂಘದ ಮುಖಂಡರಾದ ಎಲೋದಹಳ್ಳಿ ರವಿಕುಮಾರ್, ಆನಗೋಡು ಭೀಮಣ್ಣ, ಗಂಡುಗಲಿ, ಹರಿಹರದ ಗರಡಿ ಮನೆ ಬಸವರಾಜ್, ಯರವನಾಗತಿಹಳ್ಳಿ ರುದ್ರಪ್ಪ, ಹೂವಿನ ಮಡು ನಾಗರಾಜ್, ಚನ್ನಸಮುದ್ರ ಭೀಮಣ್ಣ, ಮರಡಿ ಸತೀಶ್ ಹಾಗೂ ಇತರ ಮುಖಂಡರು, ರೈತರು ಭಾಗವಹಿಸಿದ್ದರು.