*ಕರ್ನಾಟಕ ರಾಜ್ಯ ರೈತ ಸಂಘದ ಹಲವು ಸಂಘಟನೆಗಳು ಜಗಳೂರು ತಾಲೂಕಿನ ರೈತರಿಗೆ ಯೂರಿಯಾ ರಸಗೊಬ್ಬರ ಪೂರೈಕೆಗಾಗಿ ದಾವಣಗೆರೆ ಜಿಲ್ಲೆ ಜಗಳೂರು ಎಪಿಎಂಸಿ ಸೇರಿದಂತೆ ತಾಲೂಕಿನ ವಿವಿಧೆಡೆ ರಾಜ್ಯ ರಸ್ತೆ , ಹೆದ್ದಾರಿಗಳನ್ನು ತಡೆದು ಬೃಹತ್ ಪ್ರತಿಭಟನೆಯನ್ನು ಮಾಡಲಾಯಿತು.

ಪ್ರತಿಭಟನೆಯಲ್ಲಿದ್ದ ತಾಲೂಕಿನ ರೈತ ಸಂಘದ ಅಧ್ಯಕ್ಷ ಕುಮಾರ್ ಭರಮಸಮುದ್ರ ಮಾತನಾಡಿ “ದಾವಣಗೆರೆ ಜಿಲ್ಲೆ, ಜಗಳೂರು ಸೇರಿದಂತೆ ರಾಜ್ಯದ ಬಹುತೇಕ ಕಡೆ ಯೂರಿಯಾ ರಸಗೊಬ್ಬರ ಪೂರೈಕೆಯಿಲ್ಲದೇ ರೈತರು ಕಂಗಾಲಾಗಿದ್ದಾರೆ. ಪೈರಿನ ಬೆಳವಣಿಗೆಗೆ ಹಂತದಲ್ಲಿ ಅತ್ಯವಶ್ಯಕವಾಗಿ ಬೇಕಿದ್ದ ಯೂರಿಯಾ ಸಿಗದೇ ಬೆಳೆಗಳ ಇಳುವರಿ ಕುಂಠಿತವಾಗಿ ರೈತ ಆರ್ಥಿಕವಾಗಿ ನಷ್ಟಕ್ಕೆ ಗುರಿಯಾಗುತ್ತಾರೆ. ಸಕಾಲಕ್ಕೆ ಗೊಬ್ಬರ ಪೂರೈಸಬೇಕಿದ್ದ ಸರ್ಕಾರ, ಕೃಷಿ ಇಲಾಖೆ ಕುಂಟು ನೆಪಗಳನ್ನು ಹೇಳಿ ಕಾಲಹರಣ ಮಾಡುತ್ತಿದ್ದಾರೆ” ಎಂದು ಆರೋಪಿಸಿದರು.

“ಅಗತ್ಯ ಗೊಬ್ಬರ ಒದಗಿಸಲು ಕೃಷಿ ಇಲಾಖೆ, ಸಚಿವರು ವಿಫಲರಾಗಿದ್ದಾರೆ. ಕೃಷಿ ಸಚಿವ ಚೆಲುವರಾಯಸ್ವಾಮಿ ಇಸ್ರೇಲ್, ಇರಾನ್, ಉಕ್ರೇನ್ ಎಂದು ತೋರಿಸಿ ಕುಂಟು ನೆಪಗಳನ್ನು ಹೇಳುತ್ತಿದ್ದಾರೆ. ಆಗಿರುವ ವಿಳಂಬ, ತಪ್ಪನ್ನು ಒಪ್ಪಿಕೊಂಡು, ಕೂಡಲೇ ಜಿಲ್ಲೆಯ ರೈತರಿಗೆ ಅವಶ್ಯಕವಾದ ರಸಗೊಬ್ಬರ ಪೂರೈಕೆಗೆ ಜಿಲ್ಲಾಡಳಿತ ಕೃಷಿ ಇಲಾಖೆ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು, ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ಆಗುವ ರೈತರ ಆರ್ಥಿಕ ನಷ್ಟಕ್ಕೆ, ಅನಾಹುತಗಳಿಗೆ ಅವರೇ ಕಾರಣರಾಗುತ್ತಾರೆ” ಎಂದು ರೈತ ಮುಖಂಡ ಹುಚ್ಚವ್ವನಹಳ್ಳಿ ಮಂಜುನಾಥ್ ಈದಿನ ಡಾಟ್ ಕಾಮ್ ಗೆ ಪ್ರತಿಕ್ರಿಯೆ ನೀಡಿ ಸರ್ಕಾರಕ್ಕೆ ಎಚ್ಚರಿಸಿದರು.

ಹಲವೆಡೆ ರೈತ ಸಂಘದ ಬಣಗಳ ಮುಖಂಡರು ಕಾರ್ಯಕರ್ತರು ಹೆದ್ದಾರಿ ರಸ್ತೆ ತಡೆ ನಡೆಸಿದ್ದರಿಂದ ವಾಹನಗಳುನಿಂತಲ್ಲೇ ನಿಂತು ಸಂಚಾರ ದಟ್ಟಣೆ ಹೆಚ್ಚಾಯಿತು. ಪ್ರತಿಭಟನಾ ಸ್ಥಳಕ್ಕೆ ದಾವಣಗೆರೆ ಕೃಷಿ ಜಂಟಿ ನಿರ್ದೇಶಕರಾದ ಜಿಯಾಉಲ್ಲಾ ಕೆ, ಡಿ.ವೈ.ಎಸ್. ಪಿ ಬಸವರಾಜ್, ಜಗಳೂರು ಪೊಲೀಸ್ ವೃತ್ತ ನಿರೀಕ್ಷಕರಾದ ಸಿದ್ದರಾಮಯ್ಯ, ಪೊಲೀಸ್ ಸಬ್ ಇನ್ಸ್ಪೆಕ್ಟರ್ ಗಾದಿಲಿಂಗಪ್ಪ, ಜಗಳೂರು ತಾಲೂಕು ದಂಡಾಧಿಕಾರಿ ಸೈಯದ್ ಕಲೀಮ್ ಉಲ್ಲ, ಹಾಗೂ ಜಗಳೂರು ತಾಲೂಕು ಸಹಾಯಕ ಕೃಷಿ ನಿರ್ದೇಶಕರು ಡಿ ಶ್ವೇತ, ಇವರು ಧರಣಿ ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡಿ ಪ್ರತಿಭಟನಾ ರೈತರಿಗೆ ಇನ್ನೆರಡು ದಿನಗಳಲ್ಲಿ ಅಂದರೆ ಗುರುವಾರದ ಒಳಗೆ ಯೂರಿಯಾ ರಸಗೊಬ್ಬರವನ್ನು ಪೂರ್ಣ ಪ್ರಮಾಣದಲ್ಲಿ ಒದಗಿಸುತ್ತೇವೆಂದು ಭರವಸೆ ನೀಡಿದ ನಂತರ ರೈತ ಸಂಘಟನೆ ಕಾರ್ಯಕರ್ತರು ಹಾಗೂ ರೈತರು ಧರಣಿ ಸತ್ಯಾಗ್ರಹವನ್ನು ಹಿಂಪಡೆದರು.

ಈ ಸುದ್ದಿ ಓದಿದ್ದೀರಾ? ದಾವಣಗೆರೆ | ಯೂರಿಯಾ ರಸಗೊಬ್ಬರ ಕೊರತೆ: ವಿತರಕ ಏಜೆನ್ಸಿ ವಿರುದ್ಧ ರೈತ ಸಂಘ ಪ್ರತಿಭಟನೆ
ಈ ಪ್ರತಿಭಟನಾ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆಯ (ವಾಸುದೇವ ಮೇಟಿ ಬಣದ) ತಾಲೂಕು ಅಧ್ಯಕ್ಷರಾದ ಬಿ ಕುಮಾರ್ ಭರಮಸಮುದ್ರ, ತಾಲೂಕು ಉಪಾಧ್ಯಕ್ಷರಾದ ದೊಡ್ಡಬೊಮ್ಮನಹಳ್ಳಿ ಬಸವರಾಜ್, ಜಿಲ್ಲಾ ಕಾರ್ಯದರ್ಶಿಯಾದ ಕಿರಣ್ ಕುಮಾರ್ ಟಿ, ಜಿಲ್ಲಾ ಜಂಟಿ ಕಾರ್ಯದರ್ಶಿ ಕುಮಾರಸ್ವಾಮಿ, (ಹುಚ್ಚವ್ವನಹಳ್ಳಿ ಮಂಜುನಾಥ್ ಬಣ) ಅಧ್ಯಕ್ಷ ಕಸವನಹಳ್ಳಿ ನಾಗರಾಜ್, ಪ್ರಧಾನ ಕಾರ್ಯದರ್ಶಿ ರಾಜು, ಗೌಡಗೊಂಡನಳ್ಳಿ ಸತೀಶ, ಘಟಕದ ಅಧ್ಯಕ್ಷರಾದ ಚನ್ನಬಸಪ್ಪ ಹಾಗೂ ವಕೀಲರಾದ ಆರ್. ಓಬಳೇಶ್, ಮುಖಂಡರಾದ ಗುರುಸಿದ್ದಣ್ಣ, ಚಿರಂಜೀವಿ, ಗೌರಿಪುರ ಸತ್ಯಮೂರ್ತಿ, ಮಲ್ಲೇಶ್, ಸೂರಪ್ಪ, ತಿಪ್ಪಣ್ಣ, ಗುಂಡಪ್ಪ, ಈರಜ್ಜ, ಮಧು, ಪ್ರಕಾಶ್, ಕಾಡಪ್ಪ, ಕೃಷ್ಣಪ್ಪ, ಸೇರಿದಂತೆ ಮತ್ತು ರೈತ ಮಹಿಳೆಯರು ಸೇರಿದಂತೆ ಸಾವಿರಾರು ರೈತರು ಭಾಗವಹಿಸಿದ್ದರು.