ದಾವಣಗೆರೆ ಪೊಲೀಸ್ ಇಲಾಖೆ ವತಿಯಿಂದ “ನಮ್ಮ ಪೊಲೀಸ್ ನಮ್ಮ ಹೆಮ್ಮೆ” ‘ಡ್ರಗ್ಸ್ ಮುಕ್ತ ದಾವಣಗೆರೆ’ ‘ಸೈಬರ್ ಸೇಫ್ ಸಿಟಿ’ ‘112 ಸಹಾಯವಾಣಿ’ ‘ಸಂಚಾರ ನಿಯಮಗಳ ಕಡ್ಡಾಯ ಪಾಲನೆ’, ‘ಫಿಟ್ ನೆಸ್ ಫಾರ್ ಆಲ್’. ‘ಮಹಿಳಾ ಸುರಕ್ಷತೆ ಅಭಿಯಾನ’ ಎಂಬ ಘೋಷಣೆ ಅಡಿಯಲ್ಲಿ ಎರಡನೇ ಬಾರಿಗೆ ಮ್ಯಾರಥಾನ್ ಓಟ -2025 ಆಯೋಜಿಸಲಾಗಿದೆ” ಎಂದು ಪೂರ್ವವಲಯ ಪೊಲೀಸ್ ಮಹಾನಿರ್ದೇಶಕ ಡಾ.ರವಿಕಾಂತೇಗೌಡ ಬಿಆರ್ ತಿಳಿಸಿದರು.
ದಾವಣಗೆರೆ ಕಛೇರಿಯಲ್ಲಿ ಪೊಸ್ಟರ್ ಬಿಡುಗಡೆ ಮಾಡಿ ಮಾತನಾಡಿದ ಅವರು, “ಪೊಲೀಸ್ ಅಧೀಕ್ಷಕರಾದ ಶ್ರೀಮತಿ ಉಮಾ ಪ್ರಶಾಂತ್ ನೇತೃತ್ವದಲ್ಲಿ 2025 ಮಾರ್ಚ್ 9ರಂದು “10ಕೆ ಮ್ಯಾರಥಾನ್ ಹಾಗೂ 5ಕೆ ಮ್ಯಾರಾಥಾನ್ ಪೊಲೀಸರೊಂದಿಗೆ ಓಟ” ಕಾರ್ಯಕ್ರಮ ಆಯೋಜಿಸಲಾಗಿದೆ. ಸ್ಪರ್ಧೆಯಲ್ಲಿ ಪೊಲೀಸರೊಂದಿಗೆ 18 ವರ್ಷ ಮೇಲ್ಪಟ್ಟ ವಿದ್ಯಾರ್ಥಿಗಳು, ಯುವಕ, ಯುವತಿಯರು, ಕ್ರೀಡಾಪಟುಗಳು, ಹಾಗೂ ಜಿಲ್ಲೆಯ ನಾಗರೀಕರು ಸಹ ಸ್ವ-ಹಿತಾಸಕ್ತಿಯಿಂದ ಪಾಲ್ಗೊಳ್ಳಲು ಅವಕಾಶವಿದೆ. ಸದರಿ ಮ್ಯಾರಥಾನ್ ಓಟದ ಸ್ಪರ್ಧೆಯಲ್ಲಿ ಭಾಗವಹಿಸುವವರು ಮಾರ್ಚ್ 8ರ ಮದ್ಯಾಹ್ನ 02-00 ಗಂಟೆಯೊಳಗೆ ಲಿಂಕ್ ಮೂಲಕ ರಿಜಿಸ್ಟರ್ ಮಾಡಿಕೊಳ್ಳುವುದು ಕಡ್ಡಾಯ” ಎಂದು ಮಾಹಿತಿ ನೀಡಿದರು.
“ದಾವಣಗೆರೆ ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಮಾರ್ಚ್ 9ರ ಬೆಳಗ್ಗೆ 07-00 ಗಂಟೆಗೆ “10ಕೆ ಮ್ಯಾರಾಥಾನ್ ಹಾಗೂ 5ಕೆ ಮ್ಯಾರಾಥಾನ್ ಗೆ ಚಾಲನೆ ನೀಡಲಾಗುತ್ತದೆ. ಪ್ರತಿ ವಿಭಾಗದಲ್ಲೂ ವಿಜೇತರಾದ ಮೂವರು ಸ್ಪರ್ಧಿಗಳಿಗೆ ಬಹುಮಾನ ನೀಡಲಾಗುವುದು. ವಿಶೇಷವಾಗಿ ಮಹಿಳೆಯರಿಗಾಗಿ 5000 ಮೀ. ಓಟದ ಸ್ಪರ್ಧೆಯನ್ನು ಆಯೋಜಿಸಿದ್ದು, ವಿಜೇತರಾದ ಮೊದಲ 03 ಸ್ಪರ್ದಿಗಳಿಗೆ ಬಹುಮಾನ ನೀಡಲಾಗುತ್ತದೆ. ಮ್ಯಾರಥಾನ್ ಸ್ಪರ್ಧೆಯಲ್ಲಿ ಭಾಗವಹಿಸುವವರು ಕಡ್ಡಾಯವಾಗಿ 18 ವರ್ಷ ಮೇಲ್ಪಟ್ಟ ವಯಸ್ಕರಾಗಿರಬೇಕು. ಯಾವುದೇ ಆರೋಗ್ಯದ ಸಮಸ್ಯೆಗಳು ಹೊಂದಿರಬಾರದು ಹಾಗೂ ಯಾವುದೇ ಸಮಸ್ಯೆ, ಆರೋಗ್ಯದಲ್ಲಿ ಏರುಪೇರಾದರೂ ಸ್ಪರ್ಧಾಳುಗಳೇ ಜವಾಬ್ದಾರರಾಗಿರುತ್ತಾರೆ” ಎಂದು ಸೂಚನೆ ನೀಡಿದರು.

“ಬೆಳಿಗ್ಗೆ 7ಕ್ಕೆ ಪ್ರಾರಂಭವಾಗುವ ಮ್ಯಾರಥಾನ್ ಓಟದ 10ಕೆ ಮ್ಯಾರಥಾನ್ ಓಟದ ಮಾರ್ಗ, ಜಿಲ್ಲಾ ಕ್ರೀಡಾಂಗಣದಿಂದ ಹೊರಟು ಡೆಂಟಲ್ ಕಾಲೇಜ್ ರಸ್ತೆ – ಗುಂಡಿ ವೃತ್ತ – ಶಾಮನೂರು ರಸ್ತೆ ಮೂಲಕ ನಗರದ ಹಲವೆಡೆ ಸಂಚರಿಸಿ ಜಯದೇವ ವೃತ್ತ, ವಿದ್ಯಾರ್ಥಿ ಭವನ ಜಂಕ್ಷನ್ ಮೂಲಕ ಸಾಗಿ – ಬಾಪೂಜಿ ಬ್ಯಾಂಕ್ ಬಳಿ ಬಲ ತಿರುವ ಪಡೆದುಕೊಂಡು ಜಿಲ್ಲಾ ಕ್ರೀಡಾಂಗಣದ ಮುಖ್ಯದ್ವಾರದ ಮೂಲಕ ಒಳಗಡೆ ಬರಲಿದೆ”.
“5000 ಮಿ. ಮ್ಯಾರಥಾನ್ ಓಟ ಜಿಲ್ಲಾ ಕ್ರೀಡಾಂಗಣದಿಂದ ಆರಂಭವಾಗಿ ಹದಡಿ ರಸ್ತೆಯ ಪೂರ್ವ ಮುಖ್ಯದ್ವಾರದ ಮೂಲಕ ಸಾಗಿ ಎ ಆರ್ ಜಿ ಕಾಲೇಜ್ ರಸ್ತೆ ಮೂಲಕ ಡೆಂಟಲ್ ಯುಬಿಡಿಟಿ ಕಾಲೇಜ್ ಬಳಿ ತಿರುವು ಪಡೆದು ನಗರದ ವಿವಿಧೆಡೆ ಸಂಚರಿಸಿ ಹದಡಿ ರಸ್ತೆಗೆ ಬಂದು ನೇರವಾಗಿ ಹದಡಿ ರಸ್ತೆ ಮುಖಾಂತರ ಜಿಲ್ಲಾ ಕ್ರೀಡಾಂಗಣಕ್ಕೆ ವಾಪಸ್ ಬಂದು ಸೇರಲಿದೆ” ಎಂದು ತಿಳಿಸಿದರು.
ಈ ಸುದ್ದಿ ಓದಿದ್ದೀರಾ? ದಾವಣಗೆರೆ | ಅಕ್ರಮ ಆಸ್ತಿ ಗಳಿಕೆ ಆರೋಪ, ಆಹಾರ ಸುರಕ್ಷತಾ ಇಲಾಖೆಯ ಅಧಿಕಾರಿ ಮೇಲೆ ಲೋಕಾಯುಕ್ತ ದಾಳಿ.
ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಉಮಾ ಪ್ರಶಾಂತ್, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಅಶೋಕ್ ಕುಮಾರ್ ಸಂತೋಷ್ ಹಾಗೂ ಹಿರಿಯ ಪೊಲೀಸ್ ಅಧಿಕಾರಿಗಳು ಉಪಸ್ಥಿತರಿದ್ದರು.