“ಸಂವಿಧಾನಾತ್ಮಕವಾಗಿ ನಡೆಸಿರುವ ಹಿಂದುಳಿದ ವರ್ಗಗಳ ಸಾಮಾಜಿಕ, ಆರ್ಥಿಕ, ಶೈಕ್ಷಣಿಕ ಜಾತಿ ಗಣತಿ ಸಮೀಕ್ಷೆಯನ್ನು ವಿರೋಧಿಸುವವರಿಗೆ ಅಹಿಂದ ವರ್ಗಗಳಿಂದ ತಕ್ಕ ಉತ್ತರ ನೀಡಲಾಗುವುದು” ಎಂದು ದಾವಣಗೆರೆಯಲ್ಲಿ ಸ್ವಾಭಿಮಾನಿ ಬಳಗದ ರಾಜ್ಯಾಧ್ಯಕ್ಷ ಜಿಬಿ ವಿನಯ್ ಕುಮಾರ್ ಎಚ್ಚರಿಸಿದರು.
ದಾವಣಗೆರೆಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಜಿಬಿ ವಿನಯ್ ಕುಮಾರ್ “ಸಮೀಕ್ಷೆಯನ್ನು ಸಂವಿಧಾನಬದ್ಧವಾಗಿ, ಜನರ ತೆರಿಗೆ ಹಣ ವ್ಯಯ ಮಾಡಿ, ಸರ್ಕಾರಿ ಶಿಕ್ಷಕರಿಂದ ನಡೆಸಲ್ಪಟ್ಟಿರುವ ಸಾಮಾಜಿಕ, ಶೈಕ್ಷಣಿಕ, ಆರ್ಥಿಕ ಸಮೀಕ್ಷೆಯಾಗಿದೆ. ಈ ವರದಿಯನ್ನು ವಿರೋಧ ಮಾಡುತ್ತಿರುವುದನ್ನು ನೋಡುವಾಗ, ಹಾಸ್ಯಾಸ್ಪದವಾಗಿ ಕಾಣಿಸುತ್ತಿದೆ. 10 ವರ್ಷಗಳ ಹಿಂದೆ ಇದೇ ಕಾಂಗ್ರೆಸ್ ಸರ್ಕಾರದ ಆಡಳಿತವಿತ್ತು, ಸಮಾಜ ಕಲ್ಯಾಣ ಇಲಾಖೆಯು ಜಾಹೀರಾತಿನ ಮೂಲಕ ಸಮೀಕ್ಷೆಯ ಬಗ್ಗೆ ಸಾರ್ವಜನಿಕವಾಗಿ ತಿಳುವಳಿಕೆ ನೀಡಲಾಗಿತ್ತು. ಇಂದು ಸಮೀಕ್ಷೆಯ ವರದಿಯನ್ನು ವಿರೋಧಿಸುವವರು ಅಂದಿನ ಸರ್ಕಾರದಲ್ಲಿ ಶಾಸಕರುಗಳಾಗಿದ್ದವರು ಒಂದು ತಿಂಗಳ ಮನೆ ಮನೆ ಸಮೀಕ್ಷೆ ನಡೆಸುವಾಗ, ಆಕ್ಷೇಪ ವ್ಯಕ್ತಪಡಿಸದ ಇರುವವರು, ಈಗ ವರದಿ ಸಚಿವ ಸಂಪುಟದಲ್ಲಿ ಮಂಡನೆಯಾದ ನಂತರ ಮೊಸರಲ್ಲಿ ಕಲ್ಲನ್ನು ಹುಡುಕುವ ಕೆಲಸ ಮಾಡುತ್ತಿದ್ದಾರೆ” ಎಂದು ಆಕ್ಷೇಪ ವ್ಯಕ್ತಪಡಿಸಿದರು.

“ಸ್ವಾತಂತ್ರ್ಯ ಬಂದು 78 ವರ್ಷಗಳಾದರೂ ಶೋಷಿತರಿಗೆ ಸಿಗಬೇಕಾದ ಸಂವಿಧಾನಬದ್ದ ಸೌಲಭ್ಯಗಳು, ಹಕ್ಕುಗಳು ಸಿಗುತ್ತಿಲ್ಲ. ಇಂದಿಗೂ ಶೈಕ್ಷಣಿಕವಾಗಿ, ಸಾಮಾಜಿಕ, ಆರ್ಥಿಕವಾಗಿ ಹಿಂದುಳಿದಿದ್ದಾರೆ. ‘ಅಹಿಂದ ವರ್ಗಗಳಿಗೆ ವರದಿ ಜಾರಿಯಾಗುವುದರಿಂದ ನ್ಯಾಯ ಸಿಗುವುದನ್ನು ಸಹಿಸಿಕೊಳ್ಳಲು ಆಗುತ್ತಿಲ್ಲ’ ಎನ್ನುವುದು ಅವರ ಅಭಿಪ್ರಾಯಗಳಲ್ಲಿ ವ್ಯಕ್ತವಾಗಿದೆ” ಎಂದು ಅಭಿಪ್ರಾಯಪಟ್ಟರು.
“ರಾಜ್ಯದಲ್ಲಿ ದಲಿತರ, ಹಿಂದುಳಿದ ವರ್ಗದವರ ಅಲ್ಪಸಂಖ್ಯಾತರ ಎಷ್ಟು ಶಿಕ್ಷಣ ಸಂಸ್ಥೆಗಳಿವೆ? ಬ್ಯಾಂಕುಗಳಿವೆ? ಉದ್ಯಮಗಳಿವೆ? ಮೀಸಲಾತಿ ಹೊರತುಪಡಿಸಿ ಎಷ್ಟು ಜನ ಶಾಸಕರುಗಳು ಆಯ್ಕೆಯಾಗಿದ್ದಾರೆ. ಕರ್ನಾಟಕ ರಾಜ್ಯವನ್ನು ಆಳಿದವರಲ್ಲಿ ಎಷ್ಟು ಜನ ಅಹಿಂದ ವರ್ಗಗಳನ್ನು ಪ್ರತಿನಿಧಿಸುವವರು ಮುಖ್ಯಮಂತ್ರಿಗಳಾಗಿದ್ದಾರೆ? ಇವುಗಳ ಅಂಕಿ ಅಂಶಗಳು ಯಾವ ಸಮುದಾಯಗಳಿಗೆ ಅನ್ಯಾಯವಾಗುತ್ತಿದೆ ಹೇಳುತ್ತಿವೆ. ಈ ಸತ್ಯವನ್ನು ವರ್ಷಗಳ ಹಿಂದೆಯೇ ಬಿಡುಗಡೆಗೊಳಿಸಬೇಕಿತ್ತು. ಎಲ್ಲರಿಗೂ ಸಮಾನವಾಗಿ ಸೌಲಭ್ಯಗಳನ್ನು ಹಂಚಬೇಕಿತ್ತು. ರಾಜಕೀಯ ಇಚ್ಛಾಶಕ್ತಿಯ ಕೊರತೆಯಿಂದ, ಮೇಲಾಟಗಳಿಂದ ಆಹಿಂದ ವರ್ಗಗಳಿಗೆ ಅನ್ಯಾಯ ಮಾಡಿಕೊಂಡೇ ಬರಲಾಗುತ್ತಿದೆ. ಮೊನ್ನೆ ನಡೆದ ವಿಶೇಷ ಸಚಿವ ಸಂಪುಟದಲ್ಲಿ ಯಾರ ವಿರೋಧವಿಲ್ಲದೇ ಅಂಗೀಕಾರವಾಗಬೇಕಿದ್ದ ವರದಿಯನ್ನು ಕಾರಣ ನೀಡಿ ಮುಂದೂಡಿರುವುದು ಸಹ ಅಹಿಂದ ವರ್ಗಗಳಿಗೆ ಮಾಡುತ್ತಿರುವ ಅನ್ಯಾಯ” ಎಂದು ಆಕ್ರೋಶ ವ್ಯಕ್ತಪಡಿಸಿದರು.

“ಅನಧಿಕೃತ ವರದಿ ಪ್ರಕಾರ ರಾಜ್ಯದ ಒಟ್ಟು ಜನಸಂಖ್ಯೆಯಲ್ಲಿ ಶೇ.80ರಷ್ಟು ಅಹಿಂದ ವರ್ಗಗಳ ಸಮುದಾಯಗಳಿವೆ. ಇಲ್ಲಿಯವರೆಗೂ ಶೋಷಿತ ಸಮುದಾಯಗಳನ್ನು ಮತಗಳಿಗಾಗಿ ಬಳಸಿಕೊಳ್ಳುತ್ತಿದ್ದರು. ಈಗ ಶೋಷಿತ ವರ್ಗಗಳಿಗೆ ಸವಲತ್ತುಗಳು, ಅಧಿಕಾರ ಹಂಚಿಕೊಳ್ಳಬೇಕಾಗುತ್ತದೆ ಎಂಬ ಕಾರಣಕ್ಕೆ ಸಮೀಕ್ಷಾ ವರದಿಯನ್ನು ವಿರೋಧಿಸುತ್ತಿದ್ದಾರೆ. ದಾವಣಗೆರೆ ಲೋಕಸಭಾ ಕ್ಷೇತ್ರದಲ್ಲಿರುವ ಒಟ್ಟು ಜನಸಂಖ್ಯೆಯಲ್ಲಿ ಶೇ. 85% ರಷ್ಟಿರುವ ಅಹಿಂದ ವರ್ಗಗಳ ಮತಗಳಿಂದ ರಾಜಕೀಯ ಸ್ಥಾನಮಾನಗಳನ್ನು ಅನುಭವಿಸುತ್ತಿದ್ದಾರೆ” ಎಂದು ಕಿಡಿಕಾರಿದರು.
“ಎಲ್ಲಾ ಬೆಳವಣಿಗೆಗಳನ್ನು ಶೋಷಿತ ಸಮುದಾಯಗಳು ಸೂಕ್ಷ್ಮವಾಗಿ ಗಮನಿಸುತ್ತಿವೆ. ಸೌಲಭ್ಯ, ಹಕ್ಕುಗಳನ್ನು ಕಸಿಯುತ್ತಿರುವ ಹುನ್ನಾರಗಳಿಗೆ ಆಹಿಂದ ವರ್ಗ ಮುಂದಿನ ದಿನಗಳಲ್ಲಿ ಜಾಗೃತಗೊಂಡು, ಸಂಘಟಿತ ಹೋರಾಟದ ಮೂಲಕ ತಕ್ಕನಾದ ಉತ್ತರಗಳನ್ನು ನೀಡುತ್ತದೆ” ಎಂದು ಎಚ್ಚರಿಕೆ ನೀಡಿದರು.
ಈ ಸುದ್ದಿ ಓದಿದ್ದೀರಾ? ದಾವಣಗೆರೆ | ಸದಾಶಿವ ರೆಡ್ಡಿ ಮೇಲೆ ಹಲ್ಲೆ, ಜಿಲ್ಲಾ ವಕೀಲರ ಸಂಘ ಖಂಡನೆ, ವಕೀಲರ ಸಂರಕ್ಷಣಾ ಕಾಯ್ದೆ ಜಾರಿಗೆ ಆಗ್ರಹ.
ಸುದ್ದಿಗೋಷ್ಠಿಯಲ್ಲಿ ರಾಜು ಪಾಟೀಲ್, ವಿರುಪಾಕ್ಷಪ್ಪ, ಅಣ್ಣಪ್ಪ, ಮೈಲಪ್ಪ, ಮಹಾಂತೇಶ ಸೇರಿದಂತೆ ಹಲವು ಮುಖಂಡರು ಹಾಜರಿದ್ದರು.