ದಾವಣಗೆರೆ ತಾಲೂಕಿನ ಹೆಬ್ಬಾಳು ಟೋಲ್‌ಗೇಟ್ ಬಳಿ ಸಣ್ಣಪುಟ್ಟ ಅಂಗಡಿಗಳನ್ನು ತೆರವುಗೊಳಿಸಿದ್ದನ್ನು ವಿರೋಧಿಸಿ ಬೀದಿ ಬದಿ ವ್ಯಾಪಾರಿಗಳು, ಸಂತ್ರಸ್ತರು, ದಲಿತ ಸಂಘರ್ಷ ಸಮಿತಿಯ ನೇತೃತ್ವದಲ್ಲಿ ಜಿಲ್ಲಾಧಿಕಾರಿ ಕಚೇರಿ ಮುಂಭಾಗದಲ್ಲಿ ಪ್ರತಿಭಟನೆ ನಡೆಸಿ ಅಂಗಡಿಗಳಿಗೆ ಅವಕಾಶ ನೀಡಲು ಮನವಿ ಸಲ್ಲಿಸಿದರು.
ಸಂತ್ರಸ್ತರೊಂದಿಗೆ ದಾವಣಗೆರೆ ಜಿಲ್ಲಾಧಿಕಾರಿ ಕಚೇರಿ ಮುಂಭಾಗದಲ್ಲಿ ಸೋಮವಾರ ಪ್ರತಿಭಟನೆ ನಡೆಸಿ ರಾಷ್ಟ್ರೀಯ ಹೆದ್ದಾರಿ ಅಧಿಕಾರಿಗಳ ವಿರುದ್ಧ ಕಿಡಿಕಾರಿದ
ಕರ್ನಾಟಕ ದಲಿತ ಸಂಘಷ ಸಮಿತಿ (ಪ್ರೊ.ಬಿ.ಕೃಷ್ಣಪ್ಪ ಸ್ಥಾಪಿತ) ಜಿಲ್ಲಾ ಸಂಚಾಲಕ ಕುಂದುವಾಡ ಮಂಜುನಾಥ್
ಮಾತನಾಡಿ, “ಹೆಬ್ಬಾಳು ಟೋಲ್ ಪ್ಲಾಜಾದ ಎರಡೂ ಬದಿಗಳಲ್ಲಿ ಇಟ್ಟುಕೊಂಡಿದ್ದ ಸಣ್ಣಪುಟ್ಟ ಪೆಟ್ಟಿಗೆ ಅಂಗಡಿಗಳನ್ನು ರಾಷ್ಟ್ರೀಯ ಹೆದ್ದಾರಿ (ಎನ್‌ಎಚ್) ಹಾಗೂ ಟೋಲ್ ಪ್ಲಾಜಾ ಅಧಿಕಾರಿಗಳು ದಿಢೀರ್ ತೆರವುಗೊಳಿಸಿದ್ದು, ಇದರಿಂದಾಗಿ 40ಕ್ಕೂ ಹೆಚ್ಚು ಬಡ ಕುಟುಂಬಗಳು ಬೀದಿಗೆ ಬಿದ್ದಿವೆ. ಹೆಬ್ಬಾಳು ಟೋಲ್ ಬಳಿ ಸಣ್ಣಪುಟ್ಟ ಅಂಗಡಿಗಳನ್ನು ಇಟ್ಟುಕೊಂಡು ಜೀವನ ಸಾಗಿಸುತ್ತಿದ್ದ ಬಡ ವ್ಯಾಪಾರಿಗಳ ಅಂಗಡಿಗಳನ್ನು ಏಕಾಏಕಿ ತೆರವುಗೊಳಿಸಿ, ಅವರ ಜೀವನೋಪಾಯಕ್ಕೆ ಕಲ್ಲು ಹಾಕಲಾಗಿದೆ” ಎಂದು ಸಂತ್ರಸ್ತ ವ್ಯಾಪಾರಿಗಳ ಪರ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.

ಕರ್ನಾಟಕ ದಲಿತ ಸಂಘರ್ಷ ಜಿಲ್ಲಾ ಸಮಿತಿ ಜಿಲ್ಲಾ ಸಂಚಾಲಕ ಕುಂದುವಾಡ ಮಂಜುನಾಥ್ ಮಾತನಾಡಿ, ಹೆಬ್ಬಾಳು ಟೋಲ್ ಬಳಿ ಸಣ್ಣಪುಟ್ಟ ಅಂಗಡಿಗಳನ್ನು ಇಟ್ಟುಕೊಂಡ ಸಂತ್ರಸ್ತ ಕುಟುಂಬಗಳಲ್ಲಿ ಹೆಚ್ಚಿನವರು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಕ್ಕೆ ಸೇರಿದವರಾಗಿದ್ದು, ಈಗಾಗಲೇ ಮಳೆಯಿಲ್ಲದೆ ಬರಗಾಲದ ಪರಿಸ್ಥಿತಿ ಇರುವಾಗ ಈ ತೆರವು ಕಾರ್ಯ ಆಘಾತ ತಂದಿದೆ. ಜಿಲ್ಲೆಯ ಪೂರ್ಣ ಜವಾಬ್ದಾರಿ ಹೊತ್ತಿರುವ ಜಿಲ್ಲಾಧಿಕಾರಿಗಳು ತಕ್ಷಣವೇ ಈ ವಿಷಯದಲ್ಲಿ ಮಧ್ಯಪ್ರವೇಶಿಸಬೇಕು. ಬೀದಿಗೆ ಬಿದ್ದಿರುವ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಬಡ ಕುಟುಂಬಗಳಿಗೆ ಪುನಃ ಜೀವನೋಪಾಯ ಕಂಡುಕೊಳ್ಳಲು ಅನುಕೂಲ ಹಾಗೂ ಸೂಕ್ತ ವ್ಯವಸ್ಥೆ ಮಾಡಿಕೊಡಬೇಕು” ಎಂದು ಆಗ್ರಹಿಸಿದರು.
“ಕಳೆದ 8 ವರ್ಷಗಳಿಂದ ಡ್ರೈನೇಜ್ ಹಾಗೂ ಫುಟ್‌ಪಾತ್ ಮೇಲೆ ತಳ್ಳುವ ಗಾಡಿ ಅಥವಾ ಪೆಟ್ಟಿಗೆ ಅಂಗಡಿಗಳನ್ನು ಇಟ್ಟುಕೊಂಡು ಕಾಫಿ, ಟೀ, ನೀರಿನ ಬಾಟಲಿ ಹಾಗೂ ತಿಂಡಿ ವ್ಯಾಪಾರ ಮಾಡುತ್ತಾ ಈ ಕುಟುಂಬಗಳು ಜೀವನ ಸಾಗಿಸುತ್ತಿದ್ದವು. ಆರ್ಥಿಕ ಸಂಕಷ್ಟದಲ್ಲೂ ಸಾಲ-ಸೋಲ ಮಾಡಿ ಮಕ್ಕಳ ಶಿಕ್ಷಣ ಮತ್ತು ದಿನನಿತ್ಯದ ಬದುಕನ್ನು ಕಟ್ಟಿಕೊಂಡಿದ್ದ ಬಡ ಕುಟುಂಬಗಳು, ಈಗ ಏಕಾಏಕಿ ಅಂಗಡಿಗಳ ತೆರವಿನಿಂದಾಗಿ ಆದಾಯವಿಲ್ಲದೆ ಬೀದಿಗೆ ಬಿದ್ದಿದ್ದೇವೆ” ಎಂದು ಸಂತ್ರಸ್ತರು ಅಳಲನ್ನು ತೋಡಿಕೊಂಡರು.

ಈ ಸಂದರ್ಭದಲ್ಲಿ ಮಾತನಾಡಿದ ಸಂತ್ರಸ್ತೆ ಗೀತಮ್ಮ, “ನಾವು ಕಡು ಬಡವರು. ಹೆಬ್ಬಾಳು ಟೋಲ್ ಬಳಿ ಸಣ್ಣ ಅಂಗಡಿಗಳನ್ನು ನೆಚ್ಚಿಕೊಂಡು ಬದುಕುತ್ತಿದ್ದೆವು. ಆದರೆ ದೌರ್ಜನ್ಯ ಎಸಗಿ ನಮ್ಮ ಅಂಗಡಿಗಳನ್ನು ಕಸಿದುಕೊಳ್ಳಲಾಗಿದೆ. ನಮ್ಮ ಆಹಾರ, ಸರಕು-ಸಾಮಗ್ರಿಗಳನ್ನು ಚೆಲ್ಲಾಪಿಲ್ಲಿ ಮಾಡಿ ರಸ್ತೆ ಪಾಲು ಮಾಡಿದ್ದಾರೆ. ಇದರಿಂದ ಲಕ್ಷಾಂತರ ರೂಪಾಯಿ ನಷ್ಟ ಸಂಭವಿಸಿದೆ” ಎಂದು ಕಣ್ಣೀರಿಟ್ಟಿರು.
“ಊರಿನಲ್ಲಿ ಮಳೆಯೂ ಇಲ್ಲ, ಸರಿಯಾದ ಬೆಳೆಯೂ ಇಲ್ಲ. ಕೃಷಿ ಕೆಲಸಗಳಾಗಲಿ ಅಥವಾ ನರೇಗಾ (ಉದ್ಯೋಗ ಖಾತ್ರಿ) ಕೆಲಸಗಳಾಗಲಿ ಸರಿಯಾಗಿ ಸಿಗುತ್ತಿಲ್ಲ. ಮಕ್ಕಳ ಶಿಕ್ಷಣಕ್ಕಾಗಿ ಹಾಗೂ ಮದುವೆಗಳಿಗಾಗಿ ಲಕ್ಷಾಂತರ ರೂಪಾಯಿ ಸಾಲ ಮಾಡಿಕೊಂಡಿದ್ದೇವೆ. ಇಂತಹ ಪರಿಸ್ಥಿತಿಯಲ್ಲಿ ಇದ್ದ ಗೂಡಂಗಡಿಗಳನ್ನೂ ತೆರವುಗೊಳಿಸಿದರೆ ನಾವು ಜೀವನ ಮಾಡುವುದು ಹೇಗೆ?” ಎಂದು ಪ್ರಶ್ನಿಸಿದರು.
ಈ ಸುದ್ದಿ ಓದಿದ್ದೀರಾ? ದಾವಣಗೆರೆ | ಪೋಕ್ಸೊ ಪ್ರಕರಣ; ಪಂಚಮಸಾಲಿ ಪೀಠದ ವಚನಾನಂದ ಶ್ರೀಗೆ ಜಾಮೀನು
“ತಮಗೆ ಸೂಕ್ತ ಪರಿಹಾರ ಹಾಗೂ ಅಂಗಡಿಗಳನ್ನು ಮರುಸ್ಥಾಪಿಸಲು ಅವಕಾಶ ನೀಡದಿದ್ದರೆ ಟೋಲ್ ಬಂದ್ ಮಾಡಿ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಸಿದ ಅವರು, ನಮಗೆ ನ್ಯಾಯ ಸಿಗದಿದ್ದರೆ ಇಲ್ಲೇ ಪ್ರಾಣ ಬಿಡಬೇಕಾಗುತ್ತದೆ” ಎಂದು ಎಚ್ಚರಿಕೆ ನೀಡಿದರು.
ಡಿಎಸ್‌ಎಸ್ ಜಿಲ್ಲಾ ಮಹಿಳಾ ಸಂಚಾಲಕಿ ಕೆ.ವಿಜಯಲಕ್ಷ್ಮಿ, ಹಾಲುವರ್ತಿ ಮಹಾಂತೇಶ್, ತುರ್ಚಘಟ್ಟ ಖಾಲೀದ್, ಎಲೆಕ್ಟಿçಕಲ್ ಮಂಜುನಾಥ್, ಶಂಕರ್, ಶ್ರೀಧರ್, ಚಂದ್ರಣ್ಣ, ಮಹಾಂತೇಶ್ ಕುಂದುವಾಡ, ಸಂತ್ರಸ್ತರಾದ ಕರಿಬಸಮ್ಮ, ಸಂದೀಪ, ಪ್ರಕಾಶ್, ರೇಣುಕಮ್ಮ, ಶೃತಿ, ಪಂಪಣ್ಣ, ರಂಗಸ್ವಾಮಿ, ಸುನಿ, ಚೇತನ, ಪವನ, ಮೈಲಾರಿ ಸೇರಿದಂತೆ 30ಕ್ಕೂ ಹೆಚ್ಚು ಸಂತ್ರಸ್ತರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.






