30 ವರ್ಷಗಳ ಸುದೀರ್ಘ ಹೋರಾಟಕ್ಕೆ ಫಲವಾಗಿ
ಭದ್ರಾ ಮೇಲ್ದಂಡೆ ನೀರು ಹೊಸದುರ್ಗ– ಹೊಳಲ್ಕೆರೆಗೆ ಹರಿದಿದೆ. ಈ ನೀರಿನ ಹರಿವು ಕೇವಲ ಸಾಂಕೇತಿಕವಾಗಿರಬಾರದು. ಮಧ್ಯದಲ್ಲಿ ನಿಲ್ಲದೆ ನೀರು ಕೊನೆ ಹಂತದವರೆಗೂ ತಲುಪಲಿ. ಹೊಸದುರ್ಗ ಮಾತ್ರವಲ್ಲದೆ ಭದ್ರಾ ಮೇಲ್ದಂಡೆ ನೀರು ಚಿತ್ರದುರ್ಗ ಜಿಲ್ಲೆಯ ಎಲ್ಲ ತಾಲ್ಲೂಕುಗಳ ಕೆರೆಗಳಿಗೂ ನೀರು ತಲುಪುವಂತೆ ಸರ್ಕಾರ ಕ್ರಮ ಕೈಗೊಳ್ಳಬೇಕು” ಎಂದು ಸಾಣೇಹಳ್ಳಿ ಪಂಡಿತಾರಾಧ್ಯ ಶ್ರೀಗಳು ಭದ್ರಾ ಮೇಲ್ದಂಡೆ ಯೋಜನೆಯ ನೀರನ್ನು ಸ್ವಾಗತಿಸಿ ಭಾಗೀನ ಅರ್ಪಿಸಿ ಅಭಿಮತ ವ್ಯಕ್ತಪಡಿಸಿದರು.
ಚಿತ್ರದುರ್ಗ ಸೇರಿದಂತೆ ಬಯಲು ಸೀಮೆಯ ಜಿಲ್ಲೆಗಳಿಗೆ ಕುಡಿಯುವ ನೀರಿನ ಹಾಗೂ ಕೆರೆ ತುಂಬಿಸುವ ಬಹುನಿರೀಕ್ಷಿತ ಭದ್ರಾ ಮೇಲ್ದಂಡೆ ಯೋಜನೆಯ ನೀರು ಹೊಸದುರ್ಗ ಮತ್ತು ಹೊಳಲ್ಕೆರೆ ತಾಲ್ಲೂಕುಗಳಿಗೆ ಅಧಿಕೃತವಾಗಿ ಹರಿದುಬಂದಿದ್ದು, ಈ ಭಾಗದ ಜನರು ಹಾಗೂ ರೈತರಲ್ಲಿ ಹರ್ಷದ ವಾತಾವರಣ ನಿರ್ಮಾಣವಾಗಿತ್ತು. ಈ ವೇಳೆ ಹೊಸದುರ್ಗ ತಾಲೂಕಿನ ಸಾಣೇಹಳ್ಳಿ ತರಳಬಾಳು ಜಗದ್ಗುರು ಶಾಖಾಮಠದ ಶ್ರೀ ಪಂಡಿತಾರಾಧ್ಯ ಸ್ವಾಮೀಜಿಗಳು ಹರಿದುಬಂದ ನೀರನ್ನು ವೀಕ್ಷಿಸಿ ಪೂಜೆ ಸಲ್ಲಿಸಿ ಬಾಗಿನ ಅರ್ಪಿಸಿ ಸಂತಸದ ಕ್ಷಣಕ್ಕೆ ಸಾಕ್ಷಿಯಾದರು.

ಈ ವೇಳೆ ಮಾತನಾಡಿದ ಅವರು, “ಭದ್ರಾ ಮೇಲ್ದಂಡೆ ಯೋಜನೆಯ ನೀರಿಗಾಗಿ ಸುಮಾರು 30 ವರ್ಷಗಳಿಂದ ಸತತ ಹೋರಾಟದ ನಡುವೆ
ಯೋಜನೆ ಜಾರಿಗೆ ತರೀಕೆರೆ, ಅಜ್ಜಂಪುರ, ಅಜ್ಜಿನಹಳ್ಳಿ ಸೇರಿದಂತೆ ಹಲವು ಪ್ರದೇಶಗಳಲ್ಲಿ ಅಂತರ್ಜಲ ಬತ್ತಿಹೋಗುವ ಆತಂಕದಿಂದ ಸ್ಥಳೀಯರಿಂದ ವಿರೋಧ ಮತ್ತು ಹಲವು ವಿಘ್ನಗಳು ಎದುರಾಗಿದ್ದವು. ಸಭೆಗಳನ್ನು ನಡೆಸಿ ಹಾಗೂ ಸಾರ್ವಜನಿಕರನ್ನು ಸಾಣೇಹಳ್ಳಿಗೆ ಕರೆಸಿ ಯೋಜನೆಯ ಅಗತ್ಯತೆ ಕುರಿತು ಮನವರಿಕೆ ಮಾಡಿಕೊಟ್ಟು ಜಾಗೃತಿ ಮೂಡಿಸಲಾಗಿತ್ತು” ಎಂದು ವಿವರಿಸಿದರು.
“ಅನೇಕರ ಪರಿಶ್ರಮದ ಫಲವಾಗಿ ಇಂದು ಈ ಭಾಗಕ್ಕೆ ನೀರು ತಲುಪಿದೆ. ಸರ್ಕಾರಗಳು ರೈತರ ವಿಷಯದಲ್ಲಿ ನಿಧಾನಗತಿ ಧೋರಣೆ ಅನುಸರಿಸದೆ, ಸಮಯಕ್ಕೆ ಸರಿಯಾಗಿ ನೀರು ಮತ್ತು ವಿದ್ಯುತ್ ಒದಗಿಸಿದರೆ ರೈತರೇ ಸರ್ಕಾರಕ್ಕೆ ಸಾಲ ನೀಡುವಷ್ಟು ಆರ್ಥಿಕವಾಗಿ ಸಬಲರಾಗುತ್ತಾರೆ” ಎಂದು ಅಭಿಪ್ರಾಯಪಟ್ಟರು.
“ಕೊನೆಯ ಹಂತದವರೆಗೂ ನೀರು ತಲುಪಿಸುವ ಜವಾಬ್ದಾರಿಯನ್ನು ಸರ್ಕಾರ ವಹಿಸಬೇಕು. ದಾವಣಗೆರೆ ಭಾಗದ ಕೆಲವರು ನೀರಿನ ವಿಚಾರದಲ್ಲಿ ಅನಗತ್ಯವಾಗಿ ನಮ್ಮ ವಿರುದ್ಧ ಅಪಪ್ರಚಾರ ಮಾಡುತ್ತಿದ್ದಾರೆ. ನಾವು ಯಾರ ಹಕ್ಕನ್ನೂ ಕಸಿದುಕೊಳ್ಳುತ್ತಿಲ್ಲ. ಬದಲಾಗಿ ನಮ್ಮ ಹಕ್ಕಿನ ಸೌಲಭ್ಯವನ್ನು ಕೇಳುತ್ತಿದ್ದೇವೆ. ಸಾರ್ವಜನಿಕರು ಪರಸ್ಪರ ಆರೋಪ– ಪ್ರತ್ಯಾರೋಪ ಮಾಡುವ ಬದಲು ಸರ್ಕಾರದ ವಿರುದ್ಧ ಹೋರಾಟ ನಡೆಸುವುದು ಸೂಕ್ತ” ಎಂದು ಅವರು ಹೇಳಿದರು.
“ಹರಿದುಬಂದಿರುವ ಗಂಗೆಯಂತ ಪವಿತ್ರ ನೀರಿಗೆ ಬಾಟಲಿ, ಚರಂಡಿ ತ್ಯಾಜ್ಯ ಹಾಗೂ ಕೊಳೆಯನ್ನು ಎಸೆಯುವ ಮೂಲಕ ಕಲುಷಿತಗೊಳಿಸಬಾರದು. ಜನರು ನೀರನ್ನು ಸಂರಕ್ಷಿಸಿ, ಅದರ ಸಂಪೂರ್ಣ ಸದುಪಯೋಗ ಪಡೆದುಕೊಳ್ಳಬೇಕು” ಎಂದು ಶ್ರೀಗಳು ಮನವಿ ಮಾಡಿದರು.





