“ಪಂಚಮಸಾಲಿ ಸಮಾಜದ ಟ್ರಸ್ಟಿನಿಂದ ನಿರ್ಣಯ ಕೈಗೊಂಡು ಪೀಠದಿಂದ ಉಚ್ಚಾಟಸಿರುವ ವಚನಾನಂದಶ್ರೀ ವಾರದೊಳಗೆ ಮಠ ಖಾಲಿ ಮಾಡಿ ಹೊರಹೋಗಲಿ. ಮಠ ತೊರೆಯದಿದ್ದರೆ ನಾವೇ ಸಮಾಜದ ಸಾವಿರಾರು ಜನರೊಂದಿಗೆ ಮಠಕ್ಕೆ ಬಂದು ವಚನಾನಂದಶ್ರೀ ಹೊರಗೆ ಕಳುಹಿಸಬೇಕಾಗುತ್ತದೆ” ಎಂದು ಪಂಚಮಸಾಲಿ ಸಮಾಜದ ಮುಖಂಡ ಎಚ್.ಎಸ್. ನಾಗರಾಜ್ ದಾವಣಗೆರೆಯಲ್ಲಿ ಸುದ್ದಿಗೋಷ್ಠಿ ನಡೆಸಿ ಎಚ್ಚರಿಕೆ ನೀಡಿದರು.
ಗುರುವಾರ ದಾವಣಗೆರೆಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, “ಪಂಚಮಸಾಲಿ ಸಮಾಜದ ಏಳಿಗೆಗಾಗಿ ಕಟ್ಟಿರುವ ಟ್ರಸ್ಟನ್ನು ನೀವು ನಿಮ್ಮ ಸ್ವಂತಕ್ಕೆ ಬಳಸಿಕೊಳ್ಳುವ ಮೂಲಕ ಸಮಾಜಕ್ಕೆ ದ್ರೋಹ ಎಸಗಿದ್ದೀರಿ. ಅಲ್ಲದೆ, ಲೆಕ್ಕ ಕೊಡುವ ವಿಚಾರದಲ್ಲಿ ನಿಮ್ಮ ವರ್ತನೆ ಸಹಿಸಲು ಸಾಧ್ಯವಿಲ್ಲ. ಮುಂದಿನ ವಾರದೊಳಗೆ ಮಠ ಖಾಲಿ ಮಾಡದಿದ್ದರೆ ಪರಿಣಾಮ ನೆಟ್ಟಗಿರುವುದಿಲ್ಲ” ಎಂದು ಎಚ್ಚರಿಸಿದರು.

“ಪಂಚಮಸಾಲಿ ಸಮಾಜದ ಉದ್ಧಾರಕ್ಕಾಗಿ ಪೀಠಕ್ಕೆ ಶ್ರೀಗಳನ್ನು ನೇಮಿಸಲಾಗಿತ್ತು. ಆದರೆ, ಅವರು ತಮ್ಮ ಸ್ವಂತ ಬೆಳವಣಿಗೆಗೆ ಮಠ ಬಳಸಿಕೊಂಡರೇ ವಿನಾ ಸಮಾಜದ ಉದ್ಧಾರಕ್ಕಾಗಿ ಏನು ಮಾಡಲಿಲ್ಲ. ಮಠಕ್ಕಾಗಿ ಮುರುಗೇಶ್ ನಿರಾಣಿ ಅವರು ನೀಡಿದ ೨ ಕೋಟಿ ಹಣ ತಮ್ಮ ಐಷಾರಾಮಿ ಜೀವನಕ್ಕಾಗಿ ಬಳಸಿದ್ದಾರೆ” ಎಂದು ಅವರು ಆರೋಪಿಸಿದರು.
“ವಚನಾನಂದ ಸ್ವಾಮಿಗೆ ದುಡ್ಡು ಯಾಕೆ ಬೇಕು? ಟ್ರಸ್ಟ್ ಮೂಲಕವೇ ಎಲ್ಲ ವ್ಯವಹಾರಗಳನ್ನು ನೋಡಿಕೊಳ್ಳಲಾಗುತ್ತದೆ. ಆದರೆ, ಸ್ವಾಮಿಗಳಿಗೆ ಹಣ ಏಕೆ ಬೇಕು ಎಂದು ತಿಳಿಯುತ್ತಿಲ್ಲ” ಎಂದು ಅಸಮಾಧಾನ ವ್ಯಕ್ತಪಡಿಸಿದರು.
“ಈಗ ಸ್ವಾಮೀಜಿಗಳ ಪರವಾಗಿ ಲೆಕ್ಕ ಕೊಡಿ ಚಳುವಳಿ ಆರಂಭಿಸಿರುವ ಎಲ್ಲರ ಇತಿಹಾಸಗಳು ನಮಗೆ ಗೊತ್ತಿವೆ. ಅವರೆಲ್ಲರೂ ಹತ್ತಿದ ಏಣಿಯನ್ನು ಒದೆಯುವಂತಹ ಜಾಯಮಾನದವರು. ಈ ಹಿನ್ನೆಲೆಯಲ್ಲಿ ಅವರ ಬಗ್ಗೆ ಮಾತನಾಡದೆ ಇರುವುದೇ ಸೂಕ್ತ” ಎಂದು ಹೇಳಿದರು.
“ಪಂಚಮಸಾಲಿ ಸಮಾಜಕ್ಕೆ 2ಎ ಮೀಸಲಾತಿ ಹೋರಾಟ ಸಂದರ್ಭ ಸಾವಿರಾರು ಕ್ವಿಂಟಲ್ ಸಂಗ್ರಹವಾಗಿದ್ದ ಅಕ್ಕಿ, ದವಸ ಧಾನ್ಯವನ್ನು ಮಾರಾಟ ಮಾಡಿದ ಹಣ ಎಲ್ಲಿ ಹೋಯ್ತು? ಕೂಡಲ ಸಂಗಮ ಪೀಠಕ್ಕಾಗಿ ಈ ಭಾಗದಿಂದ ಸಂಗ್ರಹಿಸಿದ ಹಣ, ಅಕ್ಕಿ ಸೇರಿದಂತೆ ಕೋಟ್ಯಂತರ ರೂ. ಗಳನ್ನು ದುರುಪಯೋಗಪಡಿಸಿಕೊಂಡವರ ಬಗ್ಗೆ ನಾವೂ ಶೀಘ್ರದಲ್ಲಿಯೇ ಲೆಕ್ಕ ಕೊಡಿ ಚಳುವಳಿ ಆರಂಭಿಸಲಿದ್ದೇವೆ” ಎಂದು ಎಸ್.ಎಚ್. ನಾಗರಾಜ್ ಪ್ರತಿ ಸವಾಲು ಹಾಕಿದರು.
“ವಚನಾನಂದಶ್ರೀ ತಮ್ಮ ತಪ್ಪುಗಳನ್ನು ಮರೆಮಾಚಲು ಕೆಲವರನ್ನಿಟ್ಟುಕೊಂಡು ಲೆಕ್ಕ ಕೊಡಿ ಚಳುವಳಿ ಆರಂಭಿಸುವ ಮೂಲಕ ಸಮಾಜದಲ್ಲಿ ಗೊಂದಲ ಸೃಷ್ಟಿಸಿ ಸಮಾಜ ಒಡೆಯುತ್ತಿದ್ದಾರೆ. ದೊಡ್ಡ ದೊಡ್ಡ ರಾಜಕೀಯ ನಾಯಕರು ಮಾಡಿದ ದೂರವಾಣಿ ಕರೆಗಳನ್ನು ರೆಕಾರ್ಡ್ ಮಾಡಿಟ್ಟುಕೊಳ್ಳುವ ಕ್ರಿಮಿನಲ್ ಮನಸ್ಥಿತಿ ವಚನಾನಂದಶ್ರೀಗಿದೆ. ಇಂತಹ ಅಪಾಯಕಾರಿ ಸ್ವಾಮೀಜಿಯನ್ನು ಮಠದಿಂದ ಗಂಟು ಮೂಟೆ ಕಟ್ಟಿ ಕಳಿಸುವುದಂತು ಸತ್ಯ” ಎಂದು ಸ್ಪಷ್ಟಪಡಿಸಿದರು.
ಟ್ರಸ್ಟಿನ ಧರ್ಮದರ್ಶಿ ಉಮಾಪತಿಯವರು ಸಮಾಜಕ್ಕೆ ಸಾಕಷ್ಟು ತ್ಯಾಗ, ಸಹಕಾರ ಮಾಡಿದ್ದಾರೆ. ಸಮಾಜದ ಬೆಳವಣಿಗೆಗೆ ಅವರ ಕೊಡುಗೆ ಅನನ್ಯ. ಇಂಥವರನ್ನು ಲೆಕ್ಕ ಕೊಡಿ ಎಂದು ಪ್ರಶ್ನಿಸುವ ನಿಮಗೆ ನೈತಿಕತೆ ಇದೆಯೇ? ಎಂದು ಪ್ರಶ್ನಿಸಿದರು.
“ವಚನಶ್ರೀಗಳ ವಿರುದ್ಧವೇ ಈ ಹಿಂದೆ ಏಕವಚನದಲ್ಲಿ ವಾಗ್ದಾಳಿ ನಡೆಸಿದ್ದ ಮಠದತ್ತ ಎಂದೂ ಬಾರದಿದ್ದ ಹರಿಹರ ಮಾಜಿ ಶಾಸಕ ಎಚ್.ಎಸ್. ಶಿವಶಂಕರ್ ಈಗ ದಿಡೀರ್ ಸ್ವಾಮಿಗಳ ಪರ, ಮಠದ ಪರ ಹೋರಾಟಕ್ಕಿಳಿದಿರುವುದು ಅವರ ಬೇಳೆ ಬೇಯಿಸಿಕೊಳ್ಳುವ ಉದ್ದೇಶವೇ ಹೊರತು ಮತ್ತೆನಿಲ್ಲ. ಅವರ ಪಟಾಲಂನೊಂದಿಗೆ ಮನಬಂದಂತೆ ಮಾತನಾಡುವ ಮಾಜಿ ಶಾಸಕ ಈಗಾಗಲೇ ಕೂಡಲ ಸಂಗಮ ಪೀಠದ ಸ್ವಾಮೀಜಿಯನ್ನು ಬೀದಿಗೆ ತಂದಿದ್ದಾರೆ. ಅಲ್ಲಿನ ಟ್ರಸ್ಟ್ನಿಂದಲೂ ಹೊರದಬ್ಬಿಸಿಕೊಂಡಿದ್ದು, ಇದೀಗ ಹರಿಹರ ಮಠಕ್ಕೆ ಬಂದಿದ್ದಾರೆ. ನಿಮಗೆ ಅಷ್ಟು ತಾಕತ್ತಿದ್ದರೆ ಬೇರೊಂದು ಮಠ ಕಟ್ಟಿ, ಇದೇ ವಚನಶ್ರೀಗಳನ್ನು ಅಲ್ಲಿನ ಪೀಠಕ್ಕೆ ನೇಮಿಸಿ” ಎಂದು ಸವಾಲು ಹಾಕಿದರು.
ಈ ಸುದ್ದಿ ಓದಿದ್ದೀರಾ? ದಾವಣಗೆರೆ | ಅಂಬೇಡ್ಕರ್ ಭವನ ವಿಳಂಬ; ದಲಿತ ಮುಖಂಡರಿಂದ ಅಂಬೇಡ್ಕರ್ ಜಯಂತಿ ಬಹಿಷ್ಕಾರ
ಸುದ್ದಿಗೋಷ್ಠಿಯಲ್ಲಿ ಪಂಚಮಸಾಲಿ ಸಮಾಜದ ಅಶೋಕ ಗೋಪನಾಳು, ಹಾಲೇಶ್ ಕಾಯಿಪೇಟೆ, ರುದ್ರಣ್ಣ ಸೋಗಿ, ಚನ್ನಬಸಪ್ಪ, ಜಗದೀಶ್ ಇದ್ದರು.





