ಧರ್ಮಸ್ಥಳ ಗ್ರಾಮದ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಹಲವು ಶವಗಳನ್ನು ಹೂತು ಹಾಕಿಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ಆ.9 ರಂದು ಎಸ್‌ಐಟಿ ತಂಡ ಹೊಸ ಸ್ಥಳದಲ್ಲಿ ಪರಿಶೀಲನೆ ಆರಂಭಿಸಿದೆ.
ಧರ್ಮಸ್ಥಳ ಮುಖ್ಯ ದ್ವಾರದ ಸಮೀಪದ ಬಾಹುಬಲಿ ಬೆಟ್ಟದ ಕೆಳಭಾಗದ ಅರಣ್ಯದಲ್ಲಿ ಶೋಧ ಕಾರ್ಯಕ್ಕೆ ಮುಂದಾಗಿದೆ. ಸಕಲ ಸಿದ್ಧತೆಯೊಂದಿಗೆ ಆಗಮಿಸಿರುವ ಎಸ್.ಐ.ಟಿ. ತಂಡ, ಎಸಿ, ತಹಶೀಲ್ದಾರ್, ಅರಣ್ಯ ಸಹಿತ ಎಲ್ಲ ತಂಡ ಸ್ಥಳದಲ್ಲಿ ಮೊಕ್ಕಾಂ ಹೂಡಿದೆ.
ಶುಕ್ರವಾರ ಧರ್ಮಸ್ಥಳ ಗ್ರಾಮದ ಬೊಳಿಯಾರ್ ಗೋಂಕ್ರತಾರ್ ಪ್ರದೇಶದಲ್ಲಿ ಅನಾಮಿಕ ದೂರುದಾರನೊಂದಿಗೆ ಎಸ್.ಐ.ಟಿ ತಂಡ 16 ಮತ್ತು 16A ಎರಡು ಸ್ಥಳದಲ್ಲಿ ಶೋಧ ನಡೆಸಿತ್ತು. ಜತೆಗೆ ಇನ್ನೆರಡು ಸ್ಥಳ ಅಗೆದಿದೆ ಎಂಬ ಬಗ್ಗೆ ಮಾಹಿತಿ ಲಭ್ಯವಾಗಿದ್ದು, ಅಧಿಕೃತವಾಗಿ ಎಲ್ಲೂ ಎಸ್‌ಐಟಿ ಅಧಿಕಾರಿಗಳು ಮಾಹಿತಿ ನೀಡಿಲ್ಲ.

ಇದೀಗ ಹೊಸ ಸ್ಥಳಕ್ಕೆ ಸಾಕ್ಷಿ ದೂರುದಾರನನ್ನು ಶನಿವಾರ ಕರೆತಂದಿದ್ದಾರೆ. ಇಲ್ಲಿ ಸಾಕ್ಷಿ ದೂರುದಾರ ಎಷ್ಟು ಸ್ಥಳಗಳನ್ನು ಗುರುತಿಸುತ್ತಾನೆ ಎಂಬುದು ಕಾದು ನೋಡಬೇಕಿದೆ. 13ನೇ ಸ್ಥಳದ ಮಹಜರು ಪ್ರಕ್ರಿಯೆ ನಡೆಸಲಾಗಿದೆಯಾದರೂ, ಇನ್ನೂ ಕೂಡ ಆ ಸ್ಥಳದಲ್ಲಿ ಇನ್ನೂ ಉತ್ಖನನ ಕಾರ್ಯಾಚರಣೆ ಕೈಗೊಂಡಿಲ್ಲ. ಇದೀಗ ಹೊಸ ಸ್ಥಳದಲ್ಲಿ ಮಹಜರು ಪ್ರಕ್ರಿಯೆಗೆ ಎಸ್‌ಐಟಿ ಅಧಿಕಾರಿಗಳು ಆಗಮಿಸಿದ್ದಾರೆ.
ಇದನ್ನು ಓದಿದ್ದೀರಾ? ಮತಗಳ್ಳತನ | ಚುನಾವಣಾ ಆಯೋಗ ಬಿಜೆಪಿ ಏಜೆಂಟ್: ಪ್ರತಿಭಟನೆಯಲ್ಲಿ ಕಾಂಗ್ರೆಸ್ ಕಾರ್ಯಕರ್ತರ ಆಕ್ರೋಶ
ಅನಾಮಿಕ ಬೆಳಗ್ಗೆ 10.15 ಗಂಟೆ ಸುಮಾರಿಗೆ ಪೊಲೀಸ್ ಬಂದೋಬಸ್ತ್ ನಲ್ಲಿ ಬೆಳ್ತಂಗಡಿ ಎಸ್.ಐ.ಟಿ. ಕಚೇರಿಗೆ ಆಗಮಿಸಿದ್ದು, ಅಲ್ಲಿಂದ 12.05 ಗಂಟೆಗೆ ಬೆಳ್ತಂಗಡಿಯಿಂದ ಹೊರಟು 12.45 ಸುಮಾರಿಗೆ ಧರ್ಮಸ್ಥಳ ಗ್ರಾಮಕ್ಕೆ ಆಗಮಿಸಿದ್ದಾನೆ.

