ಧರ್ಮಸ್ಥಳ ಗ್ರಾಮದ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಅಕ್ರಮವಾಗಿ ಶವಗಳನ್ನು ಹೂತು ಹಾಕಲಾಗಿದೆ ಎನ್ನಲಾದ ಪ್ರಕರಣಕ್ಕೆ ಸಂಬಂಧಿಸಿ ಸೋಮವಾರ(ಆ.11) ಕೂಡ ಉತ್ಖನನ ಪ್ರಕ್ರಿಯೆಯನ್ನು ಮುಂದುವರಿಸಲು ಎಸ್‌ಐಟಿ ಮುಂದಾಗಿದೆ. ಸಾಕ್ಷಿ ದೂರುದಾರ ಗುರುತಿಸಿದ್ದ 13ನೇ ಸ್ಥಳದಲ್ಲಿ ಕಾರ್ಯಾಚರಣೆ ನಡೆಸುವುದಕ್ಕೂ ಮುನ್ನ ಎಸ್‌ಐಟಿ ಅಧಿಕಾರಿಗಳು ಜಿಪಿಎಸ್ ಡ್ರೋನ್ ಯಂತ್ರ ಬಳಸಲು ಮುಂದಾಗಿದ್ದಾರೆ.
ಈ ನಡುವೆಯೇ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗದ ತಂಡದ ನಿಯೋಗವು ಉತ್ಖನನ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದೆ. ಇದಕ್ಕೂ ಮೊದಲು ಅಧಿಕಾರಿಗಳ ಈ ನಿಯೋಗವು, ಬೆಳ್ತಂಗಡಿ ಎಸ್‌ಐಟಿ ಕಚೇರಿಗೆ ಭೇಟಿ ನೀಡಿ, ಮಾಹಿತಿ ಪಡೆದುಕೊಂಡರು. ಬಳಿಕ ಧರ್ಮಸ್ಥಳಕ್ಕೆ ಬಂದ ತಂಡವು, ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿಯ ಜತೆಗೆ ಮಾತನಾಡಿ, ಕೆಲವೊಂದು ಮಾಹಿತಿಗಳನ್ನು ಸಂಗ್ರಹಿಸಿದರು.
ಆ ಬಳಿಕ ಪೊಲೀಸ್ ಬಂದೋಬಸ್ತ್‌ನಲ್ಲಿ ಧರ್ಮಸ್ಥಳ ಪೊಲೀಸ್ ಠಾಣೆ ಮತ್ತು ಶನಿವಾರ ಕಾರ್ಯಾಚರಣೆ ನಡೆಸಿದ್ದ ಬಾಹುಬಲಿ ಬೆಟ್ಟದ ಸಮೀಪದ ಸ್ಥಳಕ್ಕೆ ಭೇಟಿ ನೀಡಿ, ಸ್ಥಳ ಪರಿಶೀಲನೆ ನಡೆಸಿದರು.
ಇದನ್ನು ಓದಿದ್ದೀರಾ? ಧರ್ಮಸ್ಥಳ ಪ್ರಕರಣ | ವ್ಯಾಪಕ ಚರ್ಚೆಗೆ ಕಾರಣವಾದ ಕಾಂಗ್ರೆಸ್‌ನ ಮಾಜಿ ಸಂಸದ ಜನಾರ್ದನ ಪೂಜಾರಿ ಹೇಳಿಕೆ
ಈ ವೇಳೆ ಮಾಧ್ಯಮಗಳ ಪ್ರತಿನಿಧಿಗಳು ಮಾತನಾಡಿಸಲು ಪ್ರಯತ್ನಿಸಿದಾಗ, “ಘಟನಾ ಸ್ಥಳದ ಪರಿಶೀಲನೆಯ ಕಾರ್ಯಕ್ಕೆ ಬಂದಿದ್ದೇವೆ” ಎಂದಷ್ಟೇ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗದ ತಂಡದ ಅಧಿಕಾರಿ ಯುವರಾಜ್ ತಿಳಿಸಿದರು.
