ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿಎಲ್ ಸಂತೋಷ್ ವಿರುದ್ಧ ಅವಹೇಳನಾಕಾರಿ ಹೇಳಿಕೆ ನೀಡಿದ ಆರೋಪದಲ್ಲಿ ಬಂಧಿತರಾಗಿದ್ದ ಸೌಜನ್ಯಪರ ಹೋರಾಟಗಾರ ಮಹೇಶ್ ಶೆಟ್ಟಿ ತಿಮರೋಡಿ ಅವರಿಗೆ ನ್ಯಾಯಾಲಯವು ಷರತ್ತುಬದ್ಧ ಜಾಮೀನು ಮಂಜೂರು ಮಾಡಿದೆ. ಜಾಮೀನು ಸಿಕ್ಕ ಬೆನ್ನಲ್ಲೇ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿರುವ ಮಹೇಶ್ ಶೆಟ್ಟಿ ತಿಮರೋಡಿ, “ಸೌಜನ್ಯ ಹೋರಾಟ ಮುಂದುವರಿಯಲಿದೆ” ಎಂದು ಪ್ರತಿಕ್ರಿಯೆ ನೀಡಿದ್ದಾರೆ.
ಉಡುಪಿಯ ಜಿಲ್ಲಾ ನ್ಯಾಯಾಲಯದ ಆವರಣದಲ್ಲಿ ಪೊಲೀಸ್ ವಾಹನದಲ್ಲಿ ಕುಳಿತಿದ್ದಾಗಲೇ ಮಾತನಾಡಿದ ಅವರು, “ಜಾಮೀನು ನೀಡಲು ಶ್ರಮಿಸಿದ ಎಲ್ಲ ವಕೀಲರಿಗೆ ಧನ್ಯವಾದಗಳು. ಅನಾಮಿಕ ದೂರುದಾರನ ಬಂಧನದ ಬಗ್ಗೆ ನನಗೆ ಮಾಹಿತಿ ಇಲ್ಲ. ಸುಜಾತ ಭಟ್ ಬಗ್ಗೆ ನನಗೆ ಏನೂ ಹೇಳುವುದಕ್ಕಿಲ್ಲ. ಅವರು ನಮ್ಮ ಹೋರಾಟದಲ್ಲೇ ಇಲ್ಲ. ಅವರಿಗೆ ಅನ್ಯಾಯ ಆಗಿದೆ ಅಂತ ಬಂದಿದ್ದಾರೆ” ಎಂದು ತಿಳಿಸಿದರು.
ಸುಜಾತ ಭಟ್ ನಿಮ್ಮನ್ನು ದಿಕ್ಕು ತಪ್ಪಿಸಿದ್ದಾರೆಯೇ ಎಂದು ಪ್ರಶ್ನಿಸಿದಾಗ, “ಜಾಮೀನು ಸಿಕ್ಕಿದೆ. ಜೈಲಿನಿಂದ ಹೊರಬಂದ ಬಳಿಕ ಮಾತನಾಡುತ್ತೇನೆ. ಸುಜಾತ ಭಟ್ ಬಗ್ಗೆ ಹೇಳುವುದಕ್ಕೇನೂ ಇಲ್ಲ. ನಮ್ಮನ್ನು ದಿಕ್ಕು ತಪ್ಪಿಸಿದರೆ ಅಣ್ಣಪ್ಪ ಮಂಜುನಾಥ ಸ್ವಾಮಿಯಿಂದ ಮಾತ್ರ. ಬೇರೆ ಯಾರಿಂದಲೂ ದಿಕ್ಕು ತಪ್ಪಿಸಲು ಆಗುವುದಿಲ್ಲ. ಸುಜಾತ ಭಟ್ ಅವರನ್ನು ನಾವು ನಂಬಿಲ್ಲ. ನಮ್ಮದು ಸೌಜನ್ಯಳ ನ್ಯಾಯಕ್ಕಾಗಿರುವ ಹೋರಾಟ. ಅದನ್ನು ಇನ್ನಷ್ಟು ಮುಂದುವರಿಸುತ್ತೇವೆ” ಎಂದು ಮಹೇಶ್ ಶೆಟ್ಟಿ ತಿಮರೋಡಿ ತಿಳಿಸಿದರು.
“ಮುಖ್ಯ ವಾಹಿನಿ ಮಾಧ್ಯಮಗಳು ತಮಗೆ ಬೇಕಾದವರ ಜೊತೆಗೆ ಡೀಲ್ ಮಾಡಿಕೊಂಡಿದೆ. ಹಾಗಾಗಿ, ಮಾಧ್ಯಮಗಳ ಬಗ್ಗೆ ಏನೂ ಮಾತನಾಡುವುದಿಲ್ಲ” ಎಂದು ಮಹೇಶ್ ಶೆಟ್ಟಿ ತಿಮರೋಡಿ ಅಸಮಾಧಾನ ಹೊರಹಾಕಿದರು.
ಹೆಂಡತಿಗೆ ನೋಟಿಸ್ ನೀಡಿ, ಗಂಡನನ್ನು ಬಂಧಿಸಿದ್ದರು: ತಿಮರೋಡಿ ಪರ ವಕೀಲ ವಿಜಯ ವಾಸು ಪೂಜಾರಿ
ಮಹೇಶ್ ಶೆಟ್ಟಿ ತಿಮರೋಡಿ ಅವರಿಗೆ ಜಾಮೀನು ಸಿಕ್ಕ ಬಳಿಕ ಈದಿನ ಡಾಟ್ ಕಾಮ್ ಜೊತೆಗೆ ಮಾತನಾಡಿದ ತಿಮರೋಡಿ ಪರ ವಕೀಲರಾದ ವಿಜಯ ವಾಸು ಪೂಜಾರಿ, “ಉಡುಪಿಯ ಜೆಎಂಎಫ್ಸಿ ನ್ಯಾಯಾಲಯ ತಿಮರೋಡಿ ಅವರಿಗೆ ಜಾಮೀನು ಮಂಜೂರು ಮಾಡಿದೆ. ಇದು ಅವರ ಕಾನೂನು ಹೋರಾಟಕ್ಕೆ ಸಿಕ್ಕ ಬಹುದೊಡ್ಡ ಜಯ. ಅವರ ವಿರೋಧಿಗಳಿಗೆ ಪಾಠ” ಎಂದು ತಿಳಿಸಿದರು.
ಇದನ್ನು ಓದಿದ್ದೀರಾ? ಬ್ರಹ್ಮಾವರ | ಮಹೇಶ್ ಶೆಟ್ಟಿ ತಿಮರೋಡಿಗೆ ಜಾಮೀನು
“ಅತ್ಯಾಚಾರಕ್ಕೊಳಗಾಗಿ ಕೊಲೆಗೀಡಾದ ಓರ್ವ ಅಮಾಯಕಿ ಹುಡುಗಿಯ ಪರ ತಿಮರೋಡಿ ಕಳೆದ 13 ವರ್ಷಗಳಿಂದ ನ್ಯಾಯಕ್ಕಾಗಿ ಹೋರಾಡುತ್ತಿದ್ದಾರೆ. ಇವತ್ತು ನ್ಯಾಯಾಲಯದಲ್ಲಿ ಸರ್ಕಾರಿ ಅಭಿಯೋಜಕರು ಆಕ್ಷೇಪಣೆ ಸಲ್ಲಿಸಿದ್ದರು. ನ್ಯಾಯಾಲಯವು ಕೇವಲ ಮೂರು ಗಂಟೆಗಳ ಕಾಲ ಪೊಲೀಸ್ ಕಸ್ಟಡಿಗೆ ನೀಡಿತ್ತು. ನಂತರ ಜಾಮೀನು ನೀಡುವಂತೆ ಬಲವಾದ ವಾದ ಮಂಡಿಸಿದ್ದೆವು. ನ್ಯಾಯಾಲಯವು ನಮ್ಮ ಮನವಿಯನ್ನು ಪುರಸ್ಕರಿಸಿದೆ” ಎಂದು ತಿಳಿಸಿದರು.
“ತಿಮರೋಡಿ ಬಂಧನದ ವೇಳೆ ಕಾನೂನು ಉಲ್ಲಂಘನೆಯಾಗಿದ್ದನ್ನು ನ್ಯಾಯಾಲಯಕ್ಕೆ ತಿಳಿಸಿದ್ದೇವೆ. ನೋಟಿಸ್ ಅನ್ನು ತಿಮರೋಡಿ ಅವರ ಪತ್ನಿಗೆ ನೀಡಿ, ತಿಮರೋಡಿ ಅವರನ್ನು ಬಂಧಿಸಲಾಗಿತ್ತು. ಹೆಂಡತಿಗೆ ನೋಟಿಸ್ ನೀಡಿ, ಗಂಡನನ್ನು ಬಂಧಿಸಿದ್ದರು. ಇಂಥದ್ದೆಕ್ಕೆಲ್ಲ ಯಾವುದೇ ಕಾನೂನಿನಲ್ಲಿ ಅವಕಾಶ ಇಲ್ಲ. 2ನೇ ನೋಟಿಸ್ ಜಾರಿ ಮಾಡಿ, ಕೇವಲ 24 ಗಂಟೆಯೊಳಗೆ ಬಂಧಿಸಿದ್ದಾರೆ. ಈ ಎಲ್ಲ ಹಿನ್ನೆಲೆಯಲ್ಲಿ ನ್ಯಾಯಾಲಯವು ಜಾಮೀನು ನೀಡಿದೆ” ಎಂದು ತಿಮರೋಡಿ ಪರ ವಕೀಲರಾದ ವಿಜಯ ವಾಸು ಪೂಜಾರಿ ತಿಳಿಸಿದರು.
