ಧಾರವಾಡದ ರಾಯಪುರದಲ್ಲಿರುವ ಧರ್ಮಸ್ಥಳ ಗ್ರಾಮಾಭಿವೃದ್ಧಿ ಟ್ರಸ್‌ನ ತಾಲೂಕು ಕಚೇರಿಯಲ್ಲಿ ಅಕ್ಟೋಬರ್ 24ರಂದು ನಡೆದಿದ್ದ ಕಳ್ಳತನ ಪ್ರಕರಣವನ್ನು ಪೊಲೀಸರು ಭೇದಿಸಿದ್ದು, 10 ಮಂದಿ ಆರೋಪಿಗಳನ್ನು ಬಂಧಿಸಿದ್ದಾರೆ.
ಈ ಬಗ್ಗೆ ಹುಬ್ಬಳ್ಳಿ-ಧಾರವಾಡ ಪೊಲೀಸ್ ಆಯುಕ್ತೆ ರೇಣುಕಾ ಸುಕುಮಾರ್ ಧಾರವಾಡದಲ್ಲಿ ಮಾದ್ಯಮಗಳಿಗೆ ಮಾಹಿತಿ ನೀಡಿದ್ದಾರೆ. ಟ್ರಸ್ಟ್‌ನ ನೌಕರರಾಗಿದ್ದ ಕುಶಾಲ್ ಕುಮಾರ್, ಬಸವರಾಜ್, ಮಹಾಂತೇಶ್ ಪ್ರಮುಖ ಆರೋಪಿಗಳು. ಪ್ರಾಥಮಿಕವಾಗಿ ಇವರು ಕಳ್ಳತನಕ್ಕೆ ಯೋಜನೆ ರೂಪಿಸಿದ್ದು, ಇತರೆ ಏಳು ಮಂದಿ ಆರೋಪಿಗಳನ್ನು ಜೊತೆ ಸೇರಿಕೊಂಡು ಈ ಕೃತ್ಯ ಎಸಗಿದ್ದಾರೆ. ಜಿಲಾನಿ, ಪರಶುರಾಮ, ರಂಗಪ್ಪ, ಮಂಜುನಾಥ, ಕಿರಣ, ರಜಾಕ ಅಜ್ಯದ ಹಾಗೂ ವೀರೇಶ ಆ ಏಳುಜನ ಆರೋಪಿಗಳು.
ಆರೋಪಿಗಳನ್ನು ಬಂಧಿಸಿ 79,89ಲಕ್ಷ ನಗದು ಮತ್ತು ಅಪರಾಧಕ್ಕಾಗಿ ಬಳಸಿದ್ದ ಕಾರು, ಎರಡು ದ್ವಿಚಕ್ರವಾಹನ, ನಾಲ್ಕು ಮೊಬೈಲ್ ಗಳನ್ನು ಬಂಧಿತರಿಂದ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಈ ಪ್ರಕರಣ ಪೊಲೀಸರಿಗೆ ಸವಾಲಾಗಿತ್ತು. ಘಟನಾ ಸ್ಥಳ ಪರಿಶೀಲನೆ ಮಾಡಿದಾಗ ಸಿಸಿಟಿವಿ ಕ್ಯಾಮೆರಾ ಸೇರಿದಂತೆ ಯಾವುದೇ ಕುರುಹು ಪೊಲೀಸರಿಗೆ ಸಿಕ್ಕಿರಲಿಲ್ಲ. ವಿದ್ಯಾನಗರ ಸಬ್ ಇನ್ಸ್ಪೆಕ್ಟರ್ ಸಂಗಮೇಶ್ ನೇತೃತ್ವದಲ್ಲಿ ತನಿಖೆಗಾಗಿ ವಿಶೇಷ ತಂಡವೊಂದನ್ನು ರಚಿಸಿ, ಈ ಪ್ರಕರಣವನ್ನು ವೈಜ್ಞಾನಿಕವಾಗಿ ಭೇದಿಸುವಲ್ಲಿ ತಂಡ ಯಶಸ್ವಿಯಾಗಿದೆ ಎಂದು ಆಯುಕ್ತೆ ರೇಣುಕಾ ಸುಕುಮಾರ್ ಮಾಹಿತಿ ನೀಡಿದರು.