ಧಾರವಾಡ ಜಿಲ್ಲೆಯ ನವಲಗುಂದ ತಾಲೂಕು ಮೊರಬ ದೊಡ್ಡ ಗ್ರಾಮವಾಗಿದೆ. ಸಬಲರಾಗಿ ಸಂಖ್ಯೆ ಬಹು ಸಂಖ್ಯೆಯ ಜನರಿದ್ದರೂ ಕೂಡ ಆರ್ಥಿಕವಾಗಿ ಹಿಂದುಳಿದವರ ಪಟ್ಟಿಯೂ ಕಾಣಸಿಗುತ್ತದೆ.
ಸರ್ಕಾರದ ಯೋಜನೆಗಳ ಫಲ ತೆಗೆದುಕೊಳ್ಳುವಲ್ಲಿ ಉಳ್ಳವರೇ ಎತ್ತಿದ ಕೈ ಎಂದರೂ ತಪ್ಪಾಗದು. ಆರ್ಥಿಕವಾಗಿ ಮುಂದಿರುವವರಿಗೇ ಸರ್ಕಾರದ ಯೋಜನೆಗಳು ಲಾಭ ಸಿಗುತ್ತವೆಯೊ? ಏನೋ ಅನಿಸುತ್ತದೆ ಎಂದು ಸ್ಥಳೀಯ ಹಿರಿಯರೊಬ್ಬರು ಮಾತನಾಡುತ್ತಿದ್ದರು. ಆ ಹಿನ್ನೆಲೆಯಲ್ಲಿ ಮೊರಬ ಗ್ರಾಮದ ನಿವಾಸಿ ಮಹಾದೇವಿ ಮರೆಪ್ಪ ಕಾಳೆ. ಇವರಿಗೆ ವಯಸ್ಸು ಸುಮಾರು 70ರ ಆಸುಪಾಸು. ಕಳೆದ 25 ವರ್ಷಗಳಿಂದ ಕುಸಿದು ಬೀಳುವ ಹಂತದಲ್ಲಿರುವ ಹಂಚಿನ ಮನೆಯಲ್ಲಿಯೇ ಮಗ, ಸೊಸೆ, ಮೊಮ್ಮಕ್ಕಳು ಸೇರಿ ಒಟ್ಟು 5 ಜನ ವಾಸವಾಗಿದ್ದಾರೆ.

ನವಲಗುಂದ ತಾಲೂಕು ಮೊರಬ ಗ್ರಾಮದ ಅಂಬೇಡ್ಕರ್ ನಗರದಲ್ಲಿ ವಾಸವಿರುವ ಇವರ ಮನೆ ಪಕ್ಕದಲ್ಲೇ ದೊಡ್ಡ ಚರಂಡಿ ಹೊಂದಿಕೊಂಡಿರುವ ಕಾರಣ, ನೆರೆ ಬಂದಾಗ ನೀರು ಮನೆಯೊಳಗೆ ಬರುತ್ತದೆ. ಪರಿಣಾಮ ಕೊಳಚೆ ನೀರು ಈ ಪ್ರದೇಶವನ್ನೆಲ್ಲಾ ತುಂಬಿಕೊಳ್ಳುತ್ತದೆ.
ಜೋತು ಬಿದ್ದಿರುವ ಮೇಲ್ಛಾವಣಿ. ಕುಸಿಯುವ ಸ್ಥಿತಿಯಲ್ಲಿರುವ ಗೋಡೆಗಳು. ಒಡೆದುಹೋದ ಹಂಚುಗಳು. ಮನೆಯಲ್ಲಿ ಕಾಲಿಟ್ಟರೆ ಬೇಸಿಗೆಯಲ್ಲೂ ಝುಣು ಝುಣು ಎನ್ನುವಂತಿರುವ, ಸಗಣಿ ಸಾರಿಸಿರುವ ನೆಲ. ಭಯದ ವಾತಾವರಣದಲ್ಲೇ ಮನೆಯಲ್ಲಿ ಬದುಕುವ ಪರಿಸ್ಥಿತಿ ಈ ಕುಟುಂಬಸ್ಥರಿಗೆ ಎದುರಾಗಿದೆ.
“ಕಳೆದ ವರ್ಷ ನಮ್ಮ ಮನೆಯ ಸಮಸ್ಯೆಯ ಕುರಿತು ಗ್ರಾಮ ಲೆಕ್ಕಾಧಿಕಾರಿ ಹಾಗೂ ಪಿಡಿಓ ಅವರ ಗಮನಕ್ಕೆ ತಂದರೂ ಉಪಯೋಗವಾಗಿಲ್ಲ. ಸತತ ಮೂರು ವರ್ಷಗಳ ಕಾಲ ಮಳೆಗಾಲದಲ್ಲಿ ನೆರೆ ಬಂದಾಗಲೂ ಒಂದು ರೂಪಾಯಿ ಸಹಿತ ನಮಗೆ ಪರಿಹಾರ ಸಿಕ್ಕಿಲ್ಲ. ಮನೆ ಇವತ್ತೊ-ನಾಳೆ ಬೀಳುವ ಸ್ಥಿತಿಯಲ್ಲಿದೆ. ಒಂದು ವೇಳೆ ಕುಸಿದು ಬಿದ್ದರೆ ಶಿವಾ ಎಂದು ಸಾಯುವುದೊಂದೇ ದಾರಿ” ಎನ್ನುತ್ತಿದ್ದಾರೆ ಹಿರಿಯ ಜೀವ ಮಹಾದೇವಿ ಕಾಳೆ.

ಈ ಬಗ್ಗೆ ಡಿಎಸ್ಎಸ್ ಸಂಚಾಲಕ ನಾಗರಾಜ ಕಾಳೆ ಮಾತನಾಡಿ, ಪದೇ ಪದೆ ಅಧಿಕಾರಿಗಳ ಗಮನಕ್ಕೆ ತಂದರೂ ಪ್ರಯೋಜವಾಗಿಲ್ಲ. ಬಹುತೇಕವಾಗಿ ಶಿಥಿಲಗೊಳ್ಳದ ಮನೆಗಳಿಗೆ ಪರಿಹಾರ ದೊರಕಿದೆ. ಶಿಥಿಲಾವಸ್ಥೆಯಲ್ಲಿ ಇರುವ ಮನೆಗಳಿಗೆ ಯಾವ ಪರಿಹಾರವೂ ದೊರೆತಿಲ್ಲ. ಮನುಷ್ಯರು ಬದುಕಿದ್ದಾಗಲೇ ಗಮಹರಿಸಿ ಪರಿಹಾರ ಕೊಡಬೇಕೆ ಹೊರತು ಸತ್ತಮೇಲೆ ಕೊಡುವುದಲ್ಲ. ಈ ನಿಟ್ಟಿನಲ್ಲಿ ಗ್ರಾಮ ಲೆಕ್ಕಾಧಿಕಾರಿ ನಿರ್ಲಕ್ಷ್ಯವೇ ಈ ಸ್ಥಿತಿಗೆ ಕಾರಣವಾಗಿದೆ” ಎಂದು ದೂರಿದರು.
ಪರಿಹಾರ ದೊರಕಿಸಿ ಕೊಡುವ ಭರವಸೆ ಕೊಡುತ್ತಾರೆ. ಪರಿಹಾರಕ್ಕಾಗಿ ಅಧಿಕಾರಿ, ರಾಜಕಾರಣಿಗಳ ಕಾಲು ಬೀಳುವುದೂ ಆಗಿದೆ. ಆದರೂ ನಮ್ಮನ್ನು ಯಾರೂ ಗಮನಿಸುತ್ತಿಲ್ಲ. ನಮಗೆ ಮನೆ ಕಟ್ಟಿಸಿಕೊಟ್ಟರೆ ಸರ್ಕಾರಕ್ಕೆ ಪುಣ್ಯ ಬರುತ್ತದೆ. ಒಂದು ವೇಳೆ ಯಾರೂ ಸ್ಪಂದಿಸದೆ ಹೋದರೆ, ಮನೆ ಬಿದ್ದರೆ ದೇವರೇ ಗತಿ ಎನ್ನುತ್ತಾರೆ ಮನೆ ಯಜಮಾನಿ ಲಕ್ಷ್ಮವ್ವ.
ಈ ಸುದ್ಧಿ ಓದಿದ್ದೀರಾ ಧಾರವಾಡ | ಕುಸುಗಲ್ ಸರ್ಕಾರಿ ಶಾಲೆಯೆಂದರೆ ಅಧಿಕಾರಿಗಳಿಗೆ ತಾತ್ಸಾರ: ಗ್ರಾಮಸ್ಥರ ಆಕ್ರೋಶ
ಇವರ ಕುಟುಂಬ ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಸಂಬಂಧಿಸಿದ ಅಧಿಕಾರಿಗಳು, ಶಾಸಕರು, ಸರ್ಕಾರ ಈ ಸಮಸ್ಯೆಗೆ ಸ್ಪಂದಿಸಿ ನೊಂದ ಕುಟುಂಬಸ್ಥರಿಗೆ ಸೂರುಕಲ್ಪಿಸಿ ಆಸರೆ ಆಗಬೇಕಿದೆ. ಈ ಬಗ್ಗೆ ಕ್ರಮ ಕೈಗೊಳ್ಳುತ್ತಾರಾ ಎಂಬುದನ್ನು ಕಾದು ನೋಡಬೇಕಿದೆ.