ಧಾರವಾಡ ಕೃಷಿ ವಿಶ್ವವಿದ್ಯಾಲಯ ತನ್ನ ಹೈನುಗಾರಿಕಾ ಘಟಕದಲ್ಲಿ ಹೆಚ್ಚುವರಿಯಾಗಿರುವ 56 ಜಾನುವಾರುಗಳನ್ನು ಇದೇ ನವೆಂಬರ್ 6ರಂದು ಬಹಿರಂಗ ಹರಾಜಿನ ಮೂಲಕ ಮಾರಾಟ ಮಾಡಲು ಮುಂದಾಗಿದೆ. ಆದರೆ, ಈ ಹರಾಜು ಪ್ರಕ್ರಿಯೆಗೆ ಬಜರಂಗ ದಳ ವಿರೋಧ ವ್ಯಕ್ತಪಡಿಸಿದೆ.
ರಾಜ್ಯದಲ್ಲಿಯೇ ಮೇಲ್ದರ್ಜೆಯಲ್ಲಿರುವ ಧಾರವಾಡ ಕೃಷಿ ವಿಶ್ವವಿದ್ಯಾಲಯ ಕೃಷಿ ಸಂಶೋಧನೆಯ ಜೊತೆಗೆ ಕೃಷಿ ಉಪ ಕಸುಬುಗಳಲ್ಲಿಯೂ ತೊಡಗಿಸಿಕೊಂಡಿದೆ. ಅದರಲ್ಲಿ ಹೈನುಗಾರಿಕೆ ಘಟಕ ಪ್ರಮುಖವಾಗಿದೆ. ಧಾರವಾಡಿ ಎಮ್ಮೆ ತಳಿ ಸೇರಿ ವಿವಿಧ ತಳಿಯ ರಾಸು ಹಾಗೂ ಹಲವು ಬಗೆಯ ನೂರಾರು ಜಾನುವಾರುಗಳು ಇಲ್ಲಿವೆ. ಆ ಪೈಕಿ ಹೆಚ್ಚುವರಿ ಜಾನುವಾರುಗಳ ಹರಾಜಿಗೆ ಕೃಷಿ ವಿವಿ ಮುಂದಾಗಿತ್ತು. ಈ ಸಂಬಂಧ ಜಾಹೀರಾತು ಪ್ರಕಟಣೆ ಕೂಡ ನೀಡಿತ್ತು.
ಆದರೆ, ಇಲ್ಲಿ ಜಾನುವಾರುಗಳು ಹರಾಜಿನ ಮೂಲಕ ಕಸಾಯಿಖಾನೆ ಸೇರುತ್ತವೆ. ಹೀಗಾಗಿ ಈ ಹರಾಜು ಯಾವುದೇ ಕಾರಣಕ್ಕೂ ನಡೆಯಬಾರದು ಎಂದು ಬಜರಂಗದಳ ಆಕ್ಷೇಪಿಸಿದೆ. ವಿವಿಗೆ ಈ ಜಾನುವಾರುಗಳು ಹೆಚ್ಚುವರಿ ಆಗಿದ್ದು, ಪಾಲನೆ ಮಾಡುವುದಕ್ಕೆ ಆಗದೇ ಹೋದಲ್ಲಿ ಸರ್ಕಾರಿ ಗೋಶಾಲೆಗಳಿಗೆ ನೀಡಲಿ. ಈ ಕೂಡಲೇ ಹರಾಜು ಪ್ರಕ್ರಿಯೆ ರದ್ದುಪಡಿಸಬೇಕು ಎಂದು ಆಗ್ರಹಿಸಿ ಕೃಷಿ ವಿವಿ ಕುಲಪತಿಗೆ ಬಜರಂಗದಳ ಮನವಿ ಸಲ್ಲಿಸಿದೆ.
ಆದರೆ, ಕೃಷಿ ವಿವಿ ಸದ್ಯ ನಡೆಯಲಿರುವ ಹರಾಜಿನಲ್ಲಿ ರೈತರು ಮತ್ತು ಹಾಲು ಉತ್ಪಾದಕರೇ ಕಡ್ಡಾಯವಾಗಿ ಪಾಲ್ಗೊಳ್ಳಬೇಕು ಎನ್ನುವ ನಿಯಮವನ್ನು ಹಾಕಿದೆ. ರೈತರ ಕೃಷಿ ಜಮೀನಿನ ಪಹಣಿ ಪತ್ರ ಇಲ್ಲವೇ, ಹಾಲು ಉತ್ಪಾದಕರ ಸಂಘದಲ್ಲಿ ಸದಸ್ಯರಾಗಿದ್ದಲ್ಲಿ ಸದಸ್ಯತ್ವದ ಪ್ರಮಾಣ ಪತ್ರ ನೀಡಬೇಕು ಎಂದು ಷರತ್ತು ವಿಧಿಸಲಾಗಿದೆ. ಇಷ್ಟಾದರೂ ಭಜರಂಗದಳ ಹರಾಜು ಪ್ರಕ್ರಿಯೆ ನಡೆಸದಂತೆ ಆಕ್ಷೇಪಿಸಿದೆ. ಒಂದು ವೇಳೆ ಹರಾಜು ಹಾಕಿದರೆ ನಾವು ಮುತ್ತಿಗೆ ಹಾಕಿ ತಡೆಯುತ್ತೇವೆ ಎಂದು ಬಜರಂಗದಳ ಎಚ್ಚರಿಕೆ ನೀಡಿದೆ.