ಬಿವಿಬಿ ಕಾಲೇಜು ವಿದ್ಯಾರ್ಥಿನಿ ನೇಹಾ ಹಿರೇಮಠ ಕೊಲೆಗೈದ ಆರೋಪಿಗೆ ಕಠಿಣ ಶಿಕ್ಷೆ ವಿಧಿಸುವಂತೆ ಹುಬ್ಬಳ್ಳಿ-ಧಾರವಾಡ ಅಂಜುಮನ್ ಸಂಸ್ಥೆ ಆಗ್ರಹಿಸಿ ಹುಬ್ಬಳ್ಳಿ-ಧಾರವಾಡ ಪೊಲೀಸ್ ಆಯ್ತರಿಗೆ ಮನವಿ ಸಲ್ಲಿಸಿದೆ.
ಹುಬ್ಬಳ್ಳಿಯ ಬಿವಿಬಿ ಕಾಲೇಜಿನಲ್ಲಿ ದಿ. 18, ಗುರುವಾರ ಕಾಂಗ್ರೆಸ್ ಪಕ್ಷದ ಹುಬ್ಬಳ್ಳಿಯ ಮಹಾನಗರ ಪಾಲಿಕೆ ಸದಸ್ಯರಾದ ನಿರಂಜನ ಹಿರೇಮಠ ಅವರ ಪುತ್ರಿ ನೇಹಾ ಹಿರೇಮಠ ಎಂಬುವವಳನ್ನು ಫಯಾಜ್ ಎಂಬ ಯುವಕ ಬರ್ಬರವಾಗಿ ಕೊಲೆ ಮಾಡಿದ್ದು, ಈ ಪ್ರಕರಣದ ಆರೋಪಿಗೆ ಕಠಿಣ ಶಿಕ್ಷೆ ನೀಡಬೇಕು ಎಂದು ಮನವಿ ಮಾಡಿದೆ.
ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಹುಬ್ಬಳ್ಳಿ ಧಾರವಾಡ ಅಂಜುಮನ್ ಸಂಸ್ಥೆಯ ಅಧ್ಯಕ್ಷ ಹಾಗೂ ಮಾಜಿ ಸಚಿವ ಎ.ಎಂ.ಹಿಂಡಸಗೇರಿ, ಕೂಲೆಗಾರನಿಗೆ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಧಾರವಾಡ ಅಂಜುಮನ್ ಸಂಸ್ಥೆಯ ಅಧ್ಯಕ್ಷ ಇಸ್ಮಾಯಿಲ್ ತಮಟಗಾರ ಮಾತನಾಡಿ, ವಿದ್ಯಾರ್ಥಿ ಮಾಡಿದ ಕೊಲೆಗೆ ಯಾವುದೇ ಜಾತಿ ಧರ್ಮಕ್ಕೆ ಸಂಬಂಧ ಇಲ್ಲ. ಕೊಲೆ ಪ್ರಕರಣವನ್ನು ತೀವ್ರವಾಗಿ ಖಂಡಿಸುತ್ತೇವೆ ಸಾವಿನ ಮನೆಯಲ್ಲಿ ರಾಜಕೀಯ ಮಾಡಬೇಡಿ ಎಂದು ಹೇಳಿದರು.
ಈ ವೇಳೆ ಹುಬ್ಬಳ್ಳಿ-ಧಾರವಾಡ ಅಂಜುಮನ್ ಸಂಸ್ಥೆಯ ಅಧ್ಯಕ್ಷರು, ಪದಾಧಿಕಾರಿಗಳು ಹಾಗೂ ನೂರಾರು ಸದಸ್ಯರು ಇದ್ದರು.
