ಧಾರವಾಡ ಜಿಲ್ಲೆಯಾದ್ಯಂತ ಕೇಂದ್ರ ಪುರಸ್ಕೃತ ಜಾನುವಾರು ಆರೋಗ್ಯ ಮತ್ತು ರೋಗ ನಿಯಂತ್ರಣ ಯೋಜನೆ ಅಡಿಯಲ್ಲಿ 7 ನೇ ಸುತ್ತಿನ ಕಾಲು ಬಾಯಿ ಬೇನೆ ಲಸಿಕೆ ಕಾರ್ಯಕ್ರಮವನ್ನು ಪಶುಪಾಲನೆ ಮತ್ತು ಪಶುವೈದ್ಯಕೀಯ ಇಲಾಖೆಯಿಂದ ಮೇ 26, 2025 ರಿಂದ ಪ್ರಾರಂಭವಾಗಲಿದೆ.
ಈ ಅಭಿಯಾನದಲ್ಲಿ 1.38 ಲಕ್ಷ ದನ, 47 ಸಾವಿರ ಎಮ್ಮೆಗಳಿಗೆ ಲಸಿಕೆ ಹಾಕುವ ಗುರಿ ಹೊಂದಲಾಗಿದ್ದು, ನಾಲ್ಕು ತಿಂಗಳ ಮೇಲ್ಪಟ್ಟ ದನ, ಎಮ್ಮೆಗಳಿಗೆ ಲಸಿಕೆ ಹಾಕಲಾಗುತ್ತದೆ. ಪ್ರಥಮ ಬಾರಿಗೆ ಲಸಿಕೆ ಪಡೆಯುವ ನಾಲ್ಕು ತಿಂಗಳ ಕರುಗಳಿಗೆ 21 ದಿನಗಳ ನಂತರ ಬೂಸ್ಟರ್ ಡೋಸ್ ಲಸಿಕೆ ಹಾಕಲಾಗುತ್ತದೆ.
ಈ ಲಸಿಕಾಕರಣ ಅಭಿಯಾನದಲ್ಲಿ 227 ಲಸಿಕೆದಾರರು, 45 ಮೇಲ್ವಿಚಾರಕರ ನೇತೃತ್ವದಲ್ಲಿ ಜಿಲ್ಲೆಯ ಎಲ್ಲ ಜಾನುವಾರು ಮಾಲೀಕರ ಮನೆಗಳಿಗೆ ತೆರಳಿ ಜೂನ್ 09, 2025 ರವರೆಗೆ ಲಸಿಕೆ ನೀಡಲಾಗುತ್ತದೆ. ಈ ಸುತ್ತಿನ ಲಸಿಕಾಕರಣಕ್ಕೆ 2.14 ಲಕ್ಷ ಡೋಸ್ ಲಸಿಕೆ ಸರಬರಾಜಾಗಿದೆ. ಪ್ರತಿ ಆರು ತಿಂಗಳಿಗೊಮ್ಮೆ ದನ, ಎಮ್ಮೆಗಳಿಗೆ ಲಸಿಕೆ ಹಾಕಲಾಗುತ್ತದೆ.
ಪ್ರತಿದಿನ ಬೆಳಿಗ್ಗೆ 7 ಗಂಟೆಗೆ ಲಸಿಕೆದಾರರು ನಿಗದಿಪಡಿಸಿದ ಗ್ರಾಮಗಳಿಗೆ ಭೇಟಿ ನೀಡಿ, ದನ, ಎಮ್ಮೆಗಳಿಗೆ ಲಸಿಕೆ ನೀಡುತ್ತಾರೆ. ಪ್ರತಿದಿನ 100 ರಿಂದ 150 ಹಸುಗಳಿಗೆ ಲಸಿಕೆ ಹಾಕುವ ಗುರಿಯನ್ನು ನಿಗದಿಗೊಳಿಸಲಾಗಿದೆ. ಲಸಿಕೆಯನ್ನು 2 ರಿಂದ 80 ಸೆಂಟಿಗ್ರೇಡ್‍ನಲ್ಲಿ ಶೇಖರಿಸಲು ಅಗತ್ಯವಿರುವ ಶೀತಲ ಸರಪಳಿ ವ್ಯವಸ್ಥೆ ಮಾಡಲಾಗಿದೆ.
ಇದನ್ನು ಓದಿದ್ದೀರಾ? ಹುಬ್ಬಳ್ಳಿ | ಸರ್.ಸಿದ್ದಪ್ಪ ಕಂಬಳಿ, ಉತ್ತರ ಕರ್ನಾಟಕದಲ್ಲಿ ಅಕ್ಷರಜ್ಯೋತಿ ಪ್ರಜ್ವಲಿಸಲು ಹೋರಾಡಿದವರು: ರಾಮಪ್ಪ ಬಡಿಗೇರ
ಹಳ್ಳಿಗಳಲ್ಲಿ ಲಸಿಕೆ ಹಾಕುವ ಕಾರ್ಯಕ್ಕೆ ಪಶುಸಖಿಯರು ಪ್ರಚಾರ ನೀಡುತ್ತಿದ್ದಾರೆ. ದೇಶದಲ್ಲಿ ಕಾಲು ಬಾಯಿ ಜ್ವರ ನಿರ್ಮೂಲನೆಗೊಂಡಲ್ಲಿ, ಹಾಲು ಹಾಗೂ ಹಾಲಿನ ಉತ್ಪನ್ನಗಳನ್ನು ಹೆಚ್ಚು ಹೆಚ್ಚು ರಪ್ತು ಮಾಡಲು ಅವಕಾಶವಿರುವುದರಿಂದ ರೈತರಿಗೆ ಹೈನುಗಾರಿಕೆಯಿಂದ ಹೆಚ್ಚಿನ ಆದಾಯ ನಿರೀಕ್ಷಿಸಬಹುದಾಗಿದೆ ಎಂದು ಪಶುಪಾಲನಾ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆಯ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.