ಗ್ರಾಮೀಣ ಭಾಗದ ಜನರಿಗೆ ಆರೋಗ್ಯ ಸೌಲಭ್ಯಗಳು ತಲುಪುವಂತೆ ಆರೋಗ್ಯ ಇಲಾಖೆಯಿಂದ ಆಶಾ ಕಾರ್ಯಕರ್ತೆಯರನ್ನು ನೇಮಿಸಿದಂತೆ, ಜಾನುವಾರು ಮತ್ತು ಇತರೇ ಪ್ರಾಣಿಗಳ ಆರೋಗ್ಯ ರಕ್ಷಣೆಗೆ ಸರ್ಕಾರ ಪಶು ಸಖಿಗಳನ್ನು ನೇಮಿಸಿದೆ.
ಈಗಾಗಲೇ ಧಾರವಾಡ ಜಿಲ್ಲೆಯಲ್ಲಿ 144 ಪಶು ಸಖಿಯರನ್ನು ನೇಮಿಸಲಾಗಿದ್ದು, ಜಾನುವಾರುಗಳ ಕಲ್ಯಾಣಕ್ಕಾಗಿ ಸರ್ಕಾರದ ವಿವಿಧ ಯೋಜನೆಗಳು ಮತ್ತು ಪಶುಸಂಗೋಪನಾ ಇಲಾಖೆಯಿಂದ ಒದಗಿಸಲಾದ ಸೌಲಭ್ಯಗಳ ಬಗ್ಗೆ ಅವರು ಮಾಹಿತಿಯನ್ನು ರೈತರು,ಜಾನುವಾರು ಮಾಲೀಕರುಗಳಿಗೆ ತಲುಪಿಸಲಿದ್ದಾರೆ.
ಪ್ರತೀ ಗ್ರಾಮ ಪಂಚಾಯಿತಿಗೆ ಒಬ್ಬ ಪಶು ಸಖಿಯನ್ನು ನೇಮಿಸಲಾಗುತ್ತದೆ. ಇವರು ರೈತರು ಮತ್ತು ಪಶುಸಂಗೋಪನಾ ಇಲಾಖೆಯ ನಡುವೆ ಸೇತುವೆಯಾಗಿ ಕಾರ್ಯನಿರ್ವಹಿಸಲಿದ್ದಾರೆ. ಇಲಾಖೆಯ ಇತರ ಚಟುವಟಿಕೆಗಳಲ್ಲಿಯೂ ಭಾಗವಹಿಸಲಿದ್ದಾರೆ.
ಇಲಾಖೆಯಲ್ಲಿ ಅನೇಕ ಖಾಲಿ ಹುದ್ದೆಗಳು ಭರ್ತಿಯಾಗದೆ ಉಳಿದಿರುವುದರಿಂದ, ಸಿಬ್ಬಂದಿ ಕೊರತೆಯಿಂದ ಗ್ರಾಮೀಣ ಜನರ ಸೇವೆಗಳ ಮೇಲೆ ಪರಿಣಾಮ ಬೀರುತ್ತಿದೆ. ಈ ಸಮಸ್ಯೆಯನ್ನು ನಿವಾರಿಸುವ ನಿಟ್ಟಿನಲ್ಲಿ ಪಶು ಸಖಿಯರನ್ನು ನೇಮಿಸಲಾಗಿದೆ ಎಂದು ಪಶುಸಂಗೋಪನಾ ಇಲಾಖೆಯ ಉಪ ನಿರ್ದೇಶಕ ರವಿ ಸಾಲಗೌಡರ್ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ.
ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸ್ವ-ಸಹಾಯ ಗುಂಪುಗಳ ಒಕ್ಕೂಟವು ಪಶು ಸಖಿಯಾಗಿ ಸೇವೆ ಸಲ್ಲಿಸಲು ಒಬ್ಬರನ್ನು ಆಯ್ಕೆ ಮಾಡುತ್ತದೆ. ಅವರಿಗೆ ಇಲಾಖೆಯಿಂದ ಮೂರು ಹಂತಗಳಲ್ಲಿ ತರಬೇತಿ ನೀಡಲಾಗುತ್ತದೆ. ಪಶು ಸಖಿಗಳು ತಿಂಗಳಲ್ಲಿ 15 ದಿನ ಕೆಲಸ ಮಾಡಲಿದ್ದು, ಅವರಿಗೆ ಗೌರವ ಧನ ನೀಡಲಾಗುತ್ತದೆ.
ಗ್ರಾಮೀಣ ಜನರಿಗೆ ಬ್ಯಾಂಕ್‌ಗಳಿಂದ ಸಾಲ ಪಡೆಯಲು ಪಶು ಸಖಿಗಳು ನೆರವಾಗಲಿದ್ದಾರೆ. ಅವರು ಜಾನುವಾರುಗಳಿಗೆ ಪ್ರಥಮ ಚಿಕಿತ್ಸೆ ನೀಡುತ್ತಾರೆ, ಮೇವಿನ ತರ್ಕಬದ್ಧ ಬಳಕೆ, ಲಸಿಕೆ ಮತ್ತು ಸಾಕುಪ್ರಾಣಿಗಳ ಆರೋಗ್ಯಕ್ಕೆ ಸಂಬಂಧಿಸಿದ ಇತರ ವಿಷಯಗಳ ಬಗ್ಗೆ ರೈತರಿಗೆ ಜಾಗೃತಿ ಮೂಡಿಸುತ್ತಾರೆ.
ಧಾರವಾಡ ತಾಲೂಕಿನಲ್ಲಿ 35 ಪಶು ಸಖಿಯರಿದ್ದರೆ, ಅಳ್ನವನರ 4, ಕಲಘಟಗಿ 28, ಹುಬ್ಬಳ್ಳಿ 26, ಕುಂದಗೋಳ 26, ಅಣ್ಣಿಗೇರಿ ತಾಲೂಕಿನಲ್ಲಿ ಒಂಬತ್ತು ಮತ್ತು ನವಲಗುಂದ ತಾಲೂಕಿನಲ್ಲಿ 16 ಮಂದಿ ಪಶು ಸಖಿ ಕಾರ್ಯನಿರ್ವಹಿಸುತ್ತಿದ್ದಾರೆ.
ಜನರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು. ಈ ಮೊದಲು ಕೇಳಿ ಬರುತ್ತಿದ್ದ ದೂರುಗಳು ಗಣನೀಯವಾಗಿ ಇಳಿಮುಖವಾಗಿವೆ ಎನ್ನುತ್ತಿದ್ದಾರೆ ಅಧಿಕಾರಿಗಳು.