ಜೂಜಾಟ ಅಡುತ್ತಿದ್ದ ಜೂಜು ಅಡ್ಡೆಯ ಮೇಲೆ ಪೊಲೀಸರು ದಾಳಿ ಮಾಡಿದ್ದು, ಆ ವೇಳೆ ಜಾಜಾಡುತ್ತಿದ್ದ ಗುಂಪು ಪೊಲೀಸರ ಮೇಲೆಯೇ ದಾಳಿ ಮಾಡಿರುವ ಘಟನೆ ಧಾರವಾಡ ಜಿಲ್ಲೆಯಲ್ಲಿ ನಡೆದಿದೆ.
ಜಿfಲೆಯ ನರೇಂದ್ರ ಗ್ರಾಮದಲ್ಲಿ ಘಟನೆ ನಡೆದಿದ್ದು, ಗಾಯಗೊಂಡಿದ್ದ ಪೊಲೀಸ್ ಸಿಬ್ಬಂದಿಗಳನ್ನು ಧಾರವಾಡ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ಪೊಲೀಸರ ಮೇಲೆ ಹಲ್ಲೆ ಮತ್ತು ಜೂಜಾಟ ಪ್ರಕರಣದಲ್ಲಿ ಎಂಟು ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ. ಉಳಿದವರಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ ಎಂದು ತಿಳಿದುಬಂದಿದೆ.
ಗ್ರಾಮದಲ್ಲಿ ಜೂಜಾಟ ನಡೆಯುತ್ತಿದೆ ಎಂಬ ಖಚಿತ ಮಾಹಿತಿ ಪಡೆದ ಧಾರವಾಡ ಗ್ರಾಮೀಣ ಠಾಣೆಯ ಪೊಲೀಸರು ಪಿಎಸ್‌ಐ ನಾಗರಾಜ್ ಪಾಟೀಲ ನೇತೃತ್ವದಲ್ಲಿ ದಾಳಿ ನಡೆಸಿದ್ದಾರೆ. ಈ ವೇಳೆ, ಜೂಜುಕೋರರು ಪೊಲೀಸ್ ಸಿಬ್ಬಂದಿಗಳ ಮೇಲೆ ಹಲ್ಲೆ ಮಾಡಿದ್ದಾರೆ.
“ಸೋಮವಾರ ತಡರಾತ್ರಿ 1 ಗಂಟೆಗೆ ನರೇಂದ್ರ ಗ್ರಾಮದ ಶಾಲೆ ಬಳಿಯಲ್ಲಿ ಜೂಜಾಟ ನಡೆಯುತ್ತಿರುವ ಮಾಹಿತಿ ಬಂದಿತ್ತು. ಆಗ ನಮ್ಮ ಸಿಬ್ಬಂದಿ ದಾಳಿ ಮಾಡಿದ್ದರು. ಆಗ ಪಿಎಸ್‌ಐ ಮತ್ತು ಸಿಬ್ಬಂದಿ ಮೇಲೆ ಕೆಲವರು ದಾಳಿ ಮಾಡಿದ್ದಾರೆ. ಪ್ರಕರಣದಲ್ಲಿ ಎಂಟು ಮಂದಿಯನ್ನು ಬಂಧಿಸಲಾಗಿದೆ. ಉಳಿದವರನ್ನು ಪತ್ತೆ ಮಾಡಿ, ಬಂಧಿಸಲಾಗುತ್ತದೆ” ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಗೋಪಾಲ ಬ್ಯಾಕೋಡ್ ತಿಳಿಸಿದ್ದಾರೆ.
“ಘಟನೆಯಲ್ಲಿ ಕಾನ್ಸ್ಟೇಬಲ್ ನಾಗರಾಜ್ ಅವರ ತಲೆಗೆ ಪೆಟ್ಟಾಗಿದೆ. ಪಿಎಸ್‌ಐ ಬಸನಗೌಡರಿಗೆ ಕೈ ಮತ್ತು ಕುತ್ತಿಗೆಗೆ ಗಾಯವಾಗಿದೆ. ಇಬ್ಬರೂ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ” ಎಂದು ಅವರು ತಿಳಿಸಿದ್ದಾರೆ.