ಸಿಬ್ಬಂದಿ ಒತ್ತಡ ಸಹಿಸಲಾಗದೆ ಕೆಲವರು ಆತ್ಮಹತ್ಯೆಯಂತಹ ದುಡುಕಿನ ನಿರ್ಧಾರ ಕೈಗೊಳ್ಳುತ್ತಿದ್ದಾರೆ. ಅಂತಹ ನಿರ್ಧಾರಗಳಿಂದ ಹೊರಬರುವಂತೆ ಮಾನಸಿಕ ತಜ್ಞರು ತಿಳವಳಿಕೆ ನೀಡಬೇಕೆಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಸ್ವರೂಪ ಟಿ.ಕೆ ಅವರು ಹೇಳಿದ್ದಾರೆ.
ಗುರುವಾರ ಧಾರವಾಡ ಜಿಲ್ಲಾ ಪಂಚಾಯತಿ ಸಭಾ ಭವನದಲ್ಲಿ ನಡೆದ ಮಾನಸಿಕ ಒತ್ತಡ ನಿವಾರಣೆಯ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ತಜ್ಞ ವೈದ್ಯರುಗಳಿಂದ ಅವಸರದ ನಿರ್ಧಾರ ತಡೆಗಟ್ಟುವ ನಿಟ್ಟಿನಲ್ಲಿ ಅರಿವು ಮೂಡಿಸುವ ಕೆಲಸವಾಗಬೇಕಿದೆ. ಜಿಲ್ಲೆಯಲ್ಲಿ ನಡೆಯುತ್ತಿರುವ ಕೆಲವೊಂದು ಅಹಿತಕರ ಘಟನೆಗಳನ್ನು ತಡೆಯಬೇಕಿದೆ. ಸಿಬ್ಬಂದಿ ಮಾನಸಿಕ ಒತ್ತಡದಿಂದ ತೆಗೆದುಕೊಳ್ಳುತ್ತಿರುವ ಆತುರದ ನಿರ್ಧಾರದಿಂದ ಜೀವವನ್ನೇ ಕಳೆದುಕೊಳ್ಳುತ್ತಾರೆ. ಅಂತಹ ಸಿಬ್ಬಂದಿಗಳನ್ನು ಗುರುತಿಸಿ ಚಿಕಿತ್ಸೆ ಕೊಡಿಸಬೇಕೆಂದರು.
ಕೆಲಸದ ನಿಮಿತ್ಯ ಮಾನಸಿಕ ಒತ್ತಡವು ಹೆಚ್ಚಿದಲ್ಲಿ ಹಿರಿಯ ಅಧಿಕಾರಿಗಳೊಂದಿಗೆ ಚರ್ಚಿಸಿ. ದೂರವಾಣಿ ಸಂಖ್ಯೆಗೆ ಕರೆ ಮಾಡಿ ನಿಮ್ಮ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬೇಕೆಂದು ಅವರು ಸಲಹೆ ನೀಡಿದರು.
ಡಿಮಾನ್ಸ್ ಮಾನಸಿಕ ವಿಭಾಗದ ಸಹಾಯಕ ಪ್ರಾಧ್ಯಾಪಕಿ ಡಾ. ಮೇಘಮಾಲಾ ಎಸ್. ತಾವರಗಿ ಅವರು ತರಬೇತಿ ಕುರಿತಾಗಿ ಕೆಲಸದ ಸ್ಥಳಗಳಲ್ಲಿ ಒತ್ತಡ ನಿರ್ವಹಣೆ ಹಾಗೂ ಕೌಟುಂಬಿಕ ಕಲಹಗಳು ನಿರ್ವಹಣೆ ಎಲ್ಲ ವಿಷಯಗಳ ಕುರಿತಾಗಿ ಸವಿಸ್ತಾರವಾಗಿ ಮಾತನಾಡಿದರು.
ವಿವಿಧ ರೀತಿಯ ಒತ್ತಡಗಳು. ಸಮಸ್ಯೆ ಆಧಾರಿತ ಒತ್ತಡಗಳು, ಒತ್ತಡಗಳಿಂದ ಆರೋಗ್ಯದ ಮೇಲೆ ಆಗುವಂತ ಸಮಸ್ಯೆಗಳು, ಕೆಲಸದ ಒತ್ತಡಗಳನ್ನು ಹೇಗೆ ನಿರ್ವಹಣೆ ಮಾಡಬೇಕು. ಕುಟುಂಬ ನಿರ್ವಹಣೆ ಮಾಡುವಾಗ ಬರುವಂತಹ ಸಮಸ್ಯೆಗಳು ಹೇಗೆ ನಿಭಾಯಿಸಬೇಕು ಮತ್ತು ಪರಿಹರಿಸಿಕೊಳ್ಳಬೇಕು ಹಾಗೂ ಕುಟುಂಬದೊಂದಿಗೆ ಕಳೆಯುವಂತಹ ಸಮಯ ಮೌಲ್ಯವಾಗಿರಬೇಕು ಮತ್ತು ಆರೋಗ್ಯಕರವಾಗಿರುವಂತಹ ವಾತಾವರಣವನ್ನು ಸೃಷ್ಟಿ ಮಾಡಿಕೊಳ್ಳುವ ಕುರಿತು ಹಾಗೂ ಕುಟುಂಬದ ಸದಸ್ಯರೊಂದಿಗೆ ಸಮಸ್ಯೆಗಳನ್ನು ಹಂಚಿಕೊಳ್ಳುವ ಕುರಿತು ಸವಿಸ್ತಾರವಾಗಿ ತಿಳಿಸಿದರು.
ಡಿಮ್ಹಾನ್ಸ್ ಮನೋವೈದ್ಯ ಡಾ. ರಾಘವೇಂದ್ರ ಪಾಟೀಲ್ ಅವರು ಆತ್ಮೀಯತೆ ತಡೆಗಟ್ಟುವಿಕೆ ಮತ್ತು ವ್ಯಸನದಿಂದ ಆಗುವ ಮಾನಸಿಕ ತೊಂದರೆಗಳು ಈ ವಿಷಯಗಳ ಕುರಿತು ಮಾತನಾಡಿದರು. ಭಾರತ ದೇಶದಲ್ಲಿ ಆಗುತ್ತಿರುವಂತಹ ಆತ್ಮಹತ್ಯೆ ವರ್ಷದಿಂದ ವರ್ಷಕ್ಕೆ ಹೆಚ್ಚಾಗುತ್ತಿರುವ ಸಮಸ್ಯೆಗಳ ಕುರಿತು ಆತ್ಮಹತ್ಯೆಯಲ್ಲಿ ವಿವಿಧ ರೀತಿಯ ಪ್ರಕರಣಗಳು ಬೆಳಕಿಗೆ ಬಂದಿವೆ. ಇತ್ತೀಚಿನ ಆಧುನಿಕ ಯುಗದಲ್ಲಿ ಯುವಜನರು ಆತ್ಮಹತ್ಯೆ ಮಾಡಿಕೊಳ್ಳಬಾರದು.
ಆತ್ಮಹತ್ಯೆ ತಡೆಗಟ್ಟುವಲ್ಲಿ ಸರ್ಕಾರದಿಂದ ಇರುವಂತ ಕಾರ್ಯಕ್ರಮಗಳು ಮತ್ತು ಕಾನೂನು ವ್ಯವಸ್ಥೆಗಳು, ಮತ್ತು ಟೆಲಿ ಮಾನಸ ಸಹಾಯವಾಣಿ 14416 ದಿನದ 24 ಗಂಟೆ ಕಾರ್ಯನಿರ್ವಹಿಸುತ್ತವೆ. ಇದರ ಪ್ರಯೋಜನವನ್ನು ಪಡೆದುಕೊಳ್ಳುವಂತೆ ಅವರು ತಿಳಿಸಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಅಧಿಕಾರಿ ಡಾ. ಶಶಿ ಪಾಟೀಲ್, ಜಿಲ್ಲಾ ಪಂಚಾಯತ್ ಉಪಕಾರ್ಯದರ್ಶಿ ಬಸವಲಿಂಗಯ್ಯ ಮೂಗನೂರಮಠ, ಜಿಲ್ಲಾ ಕುಷ್ಠರೋಗ ನಿಯಂತ್ರಣಧಿಕಾರಿ ಹಾಗೂ ಜಿಲ್ಲಾ ಮಾನಸಿಕ ಆರೋಗ್ಯ ಅನುಷ್ಠಾನಾಧಿಕಾರಿ ಡಾ. ಎಸ್.ಬಿ. ಕಳಸೂರಮಠ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಪ್ಯಾನಲ್ ವಕೀಲರಾದ ಸೋಮಶೇಖರ ಜಾಡರ, ಡಿವೈಎಸ್‌ಪಿ ನಾಗರಾಜ ಎಸ್.ಎಂ ಹಾಗೂ ಇತರರು ಉಪಸ್ಥಿತರಿದ್ದರು.