ಶರಣ ಸಮಾಜದ ಶಾಂತಿ ಸ್ವಾಸ್ಥ್ಯ ಹಾಳು ಮಾಡಲೆಂದೇ ರಚನೆಯಾದ ‘ವಚನ ದರ್ಶನ’ ಕೃತಿಯು ಕಳಪೆ ಮಟ್ಟದಲ್ಲಿದೆ ಎಂದು ಪುಣೆಯ ಬಸವ ತಿಳುವಳಿಕೆ ಮತ್ತು ಸಂಶೋಧನಾ ಕೇಂದ್ರ ಅಧ್ಯಕ್ಷ ಡಾ ಶಶಿಕಾಂತ ಪಟ್ಟಣ ಹರಿಹಾಯ್ದರು.
ವಿವಿಧ ಬಸವಪರ ಸಂಘಟನೆಗಳು ಆಯೋಜಿಸಿದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, “ಬಸವ ತತ್ವವು ಜಗತ್ತಿನ ಪ್ರಗತಿಪರ ರಾಷ್ಟ್ರಗಳಲ್ಲಿ ಪ್ರಜಾಪ್ರಭುತ್ವದ ಮಾದರಿ ಎನಿಸಿದೆ. ಶರಣರ ಅನುಭವ ಮಂಟಪದ ಪರಿಕಲ್ಪನೆಯನ್ನು ಬುಡಮೇಲು ಮಾಡುವ ರೀತಿಯಲ್ಲಿ ಕೆಲ ಸಂಪ್ರದಾಯವಾದಿಗಳು ವಚನ ದರ್ಶನ ಕೃತಿ ರಚಿಸಿದ್ದಾರೆ. ಈ ಕೂಡಲೇ ಈ ಕೃತಿಯನ್ನು ಮುಟ್ಟುಗೋಲು ಹಾಕಬೇಕು ಎಂದು ಸರಕಾರವನ್ನು ಒತ್ತಾಯಿಸಿದರು.
ಬಸವಣ್ಣನವರು ವರ್ಗ, ವರ್ಣ, ಲಿಂಗಭೇದ ಮತ್ತು ಆಶ್ರಮ ರಹಿತ ಸಾಂಸ್ಥೀಕರಣವಲ್ಲದ ಬಂಡಾಯ ಧೋರಣೆ ಹೊಂದಿದ ಪುರೋಗಾಮಿ ವಿಚಾರಗಳಿಂದ ವಚನ ಚಳುವಳಿಯನ್ನು ಹುಟ್ಟು ಹಾಕಿದರು. ಎಲ್ಲ ಕಾಯಕದ ವರ್ಗದವರು ಇಂತಹ ಅಪೂರ್ವ ವೈಚಾರಿಕ ಕ್ರಾಂತಿಗೆ ತಮ್ಮನ್ನು ತೊಡಗಿಸಿಕೊಂಡರು. ಕಂಬಾರ, ಕುಂಬಾರ, ಅಗಸ, ಬೆಸ್ತ, ಮಾದಿಗ, ಮೇದಾರ ಹೀಗೆ ಬದುಕಿನಲ್ಲಿ ಅಗತ್ಯವಿರುವ ಶ್ರಮ ಸಂಸ್ಕೃತಿಯ ವಾರಸುದಾರರು ಶರಣರು ಎಂದು ತಿಳಿಸಿದರು.
ಶರಣರು ಹೊರಗಿನ ಭೌತಿಕ ದೇವರಗಳನ್ನು, ಗುಡಿ ಸಂಸ್ಕೃತಿ, ಕಂದಾಚಾರ, ಬಹುದೇವೋಪಾಸನೆ, ಸಾಂಪ್ರದಾಯಿಕ ಅಂಧಶ್ರದ್ಧೆಗಳ ವಿರುದ್ಧ ಬಂಡೆದ್ದಿದ್ದರು. ವಚನ ಚಳುವಳಿಗೆ ತನ್ನದೇ ಆದ ಸ್ವಾನುಭಾವದ ನೆಲೆ ಇದೆ. ಇಂತಹ ವಚನ ಸಾಹಿತ್ಯವು ಹನ್ನೆರಡನೆಯ ಶತಮಾನದ ಕಲ್ಯಾಣ ಕ್ರಾಂತಿಯ ನಂತರ ಸುಮಾರು 250 ವರ್ಷಗಳ ವರೆಗೆ ಕಾಲಗರ್ಭದಲ್ಲಿ ಹೂತು ಹೋಗಿತ್ತು. ಪ್ರಸ್ತುತ ಅಯೋಧ್ಯಾ ಪ್ರಕಾಶನದವರು ಸದಾಶಿವ ಸ್ವಾಮಿಗಳ ಪ್ರಧಾನ ಸಂಪಾದಕತ್ವದಲ್ಲಿ ಹೊರ ತಂದ ‘ವಚನ ದರ್ಶನ’ ಕೃತಿಯು ಲಿಂಗಾಯತ ಸಮಾಜ ಮತ್ತು ಬಸವ ಭಕ್ತರನ್ನು ದಿಕ್ಕು ತಪ್ಪಿಸುವ ಕೃತಿಯಾಗಿದೆ.
ಸಮಾಜದಲ್ಲಿ ಗೊಂದಲ ಸೃಷ್ಟಿಸುವ ಹುನ್ನಾರದಿಂದ ಬೇರೆ ಬೇರೆ ನಗರಗಳಲ್ಲಿ ವಚನ ದರ್ಶನ ಬಿಡುಗಡೆ ಮಾಡಿ ಪುಸ್ತಕವನ್ನು ಮಾರಾಟ ಮಾಡುತ್ತಿದ್ದಾರೆ. ಒಂದು ವೇಳೆ ಸರಕಾರವು ಈ ನಿಟ್ಟಿನಲ್ಲಿ ಸೂಕ್ತ ಕ್ರಮವನ್ನು ತೆಗೆದುಕೊಳ್ಳದಿದ್ದಲ್ಲಿ ಮುಂಬರುವ ದಿನಗಳಲ್ಲಿ ಉಗ್ರ ಹೋರಾಟ ಮಾಡುವದಾಗಿ ಎಚ್ಚರಿಸಿದರು.
ಇದನ್ನು ಓದಿದ್ದೀರಾ? ರಾಯಚೂರು | ಕ್ಷೌರ ನಿರಾಕರಿಸಿ ದಲಿತ ಯುವಕನ ಕೊಲೆ: ಆರೋಪಿಗೆ ಗಲ್ಲು ಶಿಕ್ಷೆ ನೀಡಲು ಆಗ್ರಹ
ಬಸವ ಕೇಂದ್ರದ ಅಧ್ಯಕ್ಷ ಸಿದ್ರಾಮಣ್ಣ ನಡಕಟ್ಟಿ, ಜಿ ವಿ ಕೊಂಗವಾಡ, ಶೇಖರ ಕುಂದಗೋಳ, ಉಮೇಶ ಕಟಗಿ. ಎಂ ಎಸ್ ಸಿರಿಯಣ್ಣವರ, ಎಂ ಎಸ್ ಚೌಧರಿ, ಶಿವರುದ್ರಗೌಡ, ಮಲ್ಲಿಕಾರ್ಜುನ ಹಳ್ಳಿಕೇರಿ, ಕುಂದರಗಿ, ಜಯಶ್ರೀ ಪಾಟೀಲ, ಸಿ ಜಿ ಪಾಟೀಲ ಮುಂತಾದವರು ಪಾಲ್ಗೊಂಡಿದ್ದರು.
ಪುಣೆಯ ಬಸವ ತಿಳುವಳಿಕೆ ಸಂಶೋಧನಾ ಕೇಂದ್ರ, ಲಿಂಗಾಯತ ಏಕತಾ ಸಮಿತಿ ಅನುಭವ ಮಂಟಪ ಯಾಲಕ್ಕಿ ಶೆಟ್ಟರ ಕಾಲೋನಿ, ಬಸವ ಸಮಿತಿ, ಶರಣ ಸಾಹಿತ್ಯ ಪರಿಷತ್, ಜೆಎಲ್ಎಂ, ರಾಷ್ಟ್ರೀಯ ಬಸವದಳ ಸಂಘಟನೆಗಳು ಭಾಗವಹಿಸಿದ್ದವು.