139ನೇ ಅಂತರಾಷ್ಟ್ರೀಯ ಕಾರ್ಮಿಕ ದಿನದ ಅಂಗವಾಗಿ ಎಐಯುಟಿಯುಸಿ ಸಂಘಟನೆ ವತಿಯಿಂದ ಧಾರವಾಡದ ಕಲಾಭವನದಿಂದ ಬಸ್ ನಿಲ್ದಾಣ ವೃತ್, ಜುಬ್ಲಿ ವೃತ್ತದ ವರೆಗೆ ಕಾರ್ಮಿಕರ ಮೆರವಣಿಗೆ ನಡೆಯಿತು.
ಈ ಸಂಧರ್ಭದಲ್ಲಿ ಸಂಘಟನೆಯ ರಾಜ್ಯ ಉಪಾಧ್ಯಕ್ಷೆ ಡಿ ನಾಗಲಕ್ಷ್ಮಿ ಮಾತನಾಡಿ, 1 ಮೇ 1886ರಲ್ಲಿ ಅಮೇರಿಕಾದ ಹೇ ಮಾರುಕಟ್ಟೆಯಲ್ಲಿ, 8 ತಾಸು ದುಡಿಮೆಗಾಗಿ ಕಾರ್ಮಿಕರು ಪ್ರಾರಂಭಿಸಿದ ಹೋರಾಟ, ಇಡೀ ಜಗತ್ತಿನಾದ್ಯಂತ ಬಂಡವಾಳಶಾಹಿ ಮಾಲೀಕರ ಎದೆಯಲ್ಲಿ ನಡುಕ ಹುಟ್ಟಿಸಿತು. ಹೋರಾಟದಲ್ಲಿ ಅದೆಷ್ಟೋ ಕಾರ್ಮಿಕ ಮುಖಂಡರನ್ನು ಹಾಗೂ ಕಾರ್ಮಿಕರ ಕಗ್ಗೋಲೆಯಾಗಿ ರಸ್ತೆಗಳಲ್ಲಿ ಕಾರ್ಮಿಕರ ರಕ್ತ ಹರಿದು, ಬಿಳಿ ಧ್ವಜವು ಕೆಂಪು ಧ್ವಜವಾಯಿತು. ಅಂದಿನಿಂದ ಕೆಂಪು ಧ್ವಜವು ಕಾರ್ಮಿಕ ಹೋರಾಟದ ಸಂಕೇತವಾಗಿದೆ. ಈ ಐತಿಹಾಸಿಕ ಹೋರಾಟದ ಪರಿಣಾಮವಾಗಿ 8 ತಾಸು ದುಡಿಮೆ ಹಾಗೂ ಇನ್ನಿತರ ನ್ಯಾಯಸಮ್ಮತ ಹಕ್ಕುಗಳು ದೊರೆತವು.
ಆದರೆ ಇಂದು ಕನಿಷ್ಟ 10-14 ತಾಸುಗಳ ಕೆಲಸ ಸಾಮಾನ್ಯವಾಗಿದೆ. ಆಳುವ ಎಲ್ಲಾ ಸರ್ಕಾರಗಳು ಕಾರ್ಪೋರೆಟ್ ಮಾಲೀಕರ ತಾಳಕ್ಕೆ ತಕ್ಕಂತೆ ಕುಣಿಯುತ್ತಿದ್ದು, ಕಷ್ಟಾರ್ಜಿತ 29 ಕಾರ್ಮಿಕ ಪರವಾದ ಕಾನೂನುಗಳನ್ನು ನೆಲಸಮ ಮಾಡಿದೆ. ಸ್ಕೀಂ ಅಡಿಯಲ್ಲಿ ಆಶಾ, ಅಂಗನವಾಡಿ ಹಾಗೂ ಬಿಸಿಯೂಟ ಕಾರ್ಯಕರ್ತೆಯರನ್ನು ಕನಿಷ್ಟ ಪಕ್ಷ ಕಾರ್ಮಿಕರೆಂದು ಪರಿಗಣಿಸಲೂ ಸಿದ್ಧವಿಲ್ಲ. ನಮ್ಮ ಒಗ್ಗಟ್ಟನ್ನು ಮತ್ತಷ್ಟು ಗಟ್ಟಿಯಾಗಿಸುತ್ತಾ, ಜಾತಿ, ಧರ್ಮ, ಭಾಷೆ, ಜನಾಂಗದ ಹೆಸರಲ್ಲಿ ಕಾರ್ಮಿಕರನ್ನು ಒಡೆದಾಳುವ ಪಿತೂರಿಗಳನ್ನು ಸೋಲಿಸಬೇಕಿದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಘಟನೆಯ ಜಿಲ್ಲಾಧ್ಯಕ್ಷ ಗಂಗಾಧರ್ ಬಡಿಗೇರ್ ವಹಿಸಿದ್ದರು. ಉಪಾಧ್ಯಕ್ಷ ಭವನ ಬಳ್ಳಾರಿ ಕಾರ್ಯಕ್ರಮ ನಡೆಸಿಕೊಟ್ಟರು. ಎಐಯುಟಿಯುಸಿ ಮುಖಂಡ ಯೋಗಪ್ಪ ಜೋತೆಪ್ಪನವರ, ಶೈನಾಜ ಹುಡೇದಮನಿ, ಅಲ್ಲಾಭಕ್ಷ ಕಿತ್ತೂರ, ಜ್ಯೋತಿ ವಾಯಚಾಳ, ಲಲಿತಾ ಹೊಸಮನಿ, ಮಾರುತಿ ವಿಟ್ಟೋಜಿ, ನವೀದ ಲಕಮಾಪುರ, ಜಯರಾಮ್, ಗಂಗಮ್ಮ ನಾಗನಾಯಕ, ಮಂಜುಳಾ ಕಲ್ಲೇದ, ಬೀಬಿ ಆಯಿಷಾ, ರೇಣುಕಾ ಪುರದಣ್ಣವರ ಇದ್ದರು.
ಇದನ್ನು ಓದಿದ್ದೀರಾ? ಹುಬ್ಬಳ್ಳಿ | ಬಸವಣ್ಣನವರ ಹಾಡಿಗೆ ಹೆಜ್ಜೆ ಹಾಕಿದ ಮಹಿಳೆಯರು
ಕಾರ್ಯಕ್ರಮದಲ್ಲಿ ಆಶಾ, ಬಿಸಿಯೂಟ, ಹಾಸ್ಟೆಲ್ ಗುತ್ತಿಗೆ ಕಾರ್ಮಿಕರು, ಕಟ್ಟಡ ಕಾರ್ಮಿಕರು ಸೇರಿದಂತೆ ವಿವಿಧ ಸೆಕ್ಟರ್‌ಗಳ ಕಾರ್ಮಿಕರು ಪಾಲ್ಗೊಂಡಿದ್ದರು.