ಹುಬ್ಬಳ್ಳಿಯ ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ಕಳ್ಳತನಗಳ ಹಾವಳಿ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ರಾತ್ರಿ ಹೊತ್ತಿನಲ್ಲಿ ಹೆಚ್ಚಿನ ಪೊಲೀಸ್ ಸಿಬ್ಬಂದಿ ನಿಯೋಜಿಸಬೇಕು ಎಂದು ಒತ್ತಾಯಿಸಿ ವ್ಯಾಪಾರಸ್ಥರ ಸಂಘದ ವತಿಯಿಂದ ಹುಬ್ಬಳ್ಳಿ ಧಾರವಾಡ ಪೊಲೀಸ್ ಆಯುಕ್ತ ಎನ್.ಶಶಿಕುಮಾರ್ ಅವರಿಗೆ ಎಪಿಎಂಸಿ ಕಚೇರಿಯಲ್ಲಿ ಮನವಿ ಸಲ್ಲಿಸಿದರು.
ಈ ಕುರಿತು ಸಂಘದ ಅಧ್ಯಕ್ಷ ರಾಜಕಿರಣ ಬಿ.ಮೆಣಸಿನಕಾಯಿ ಮಾತನಾಡಿ, ಮಾರುಕಟ್ಟೆಯ ಮುಖ್ಯ ದ್ವಾರದಲ್ಲಿ ಸಂಚಾರಿ ಪೊಲೀಸರನ್ನು ನಿಯೋಜಿಸಬೇಕು. ರೈತರು ತಮ್ಮ ಕೃಷಿ ಉತ್ಪನ್ನಗಳನ್ನು ಲಾರಿ, ಇನ್ನಿತರ ವಾಹನಗಳಲ್ಲಿ ತುಂಬಿಕೊಂಡು ರಾತ್ರಿ ಹೊತ್ತು ವಿವಿಧ ಜಿಲ್ಲೆಗಳಿಂದ ಬರುವ ವಾಹನಗಳನ್ನು ಪೊಲೀಸ್ ಅಧಿಕಾರಿಗಳು ಅನವಶ್ಯಕವಾಗಿ ತಡೆಯುವುದನ್ನು ತಪ್ಪಿಸಲು ಸೂಕ್ತಕ್ರಮ ವಹಿಸುವುದು ಮತ್ತು ರಾತ್ರಿ ಹೊತ್ತಿನಲ್ಲಿ ಲೋಡಿಂಗ್ ಮತ್ತು ಅನ್‌ಲೋಡಿಂಗ್ ಕಾರ್ಯದಲ್ಲಿ ನಿರತರಾಗಿರುವ ಹಮಾಲರಿಗೆ ರಕ್ಷಣೆ ಬೇಕಿದೆ ಎಂದು ಮನವಿಯಲ್ಲಿ ತಿಳಿಸಿದ್ದಾರೆ.