ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯಲ್ಲಿ ಸ್ವಚ್ಛತಾ ಕಾರ್ಯ ನಿರ್ವಹಿಸಿದ್ದ ಸಂದರ್ಭದಲ್ಲಿ ಇನ್ನುಳಿದ 44 ಜನ ನೇರವೇತನ ಪೌರಕಾರ್ಮಿಕರ ಕುಟುಂಬದವರಿಗೆ ಸರ್ಕಾರದ ಆದೇಶದಂತೆ ತಲಾ ರೂ.10 ಲಕ್ಷ ಪರಿಹಾರ ನೀಡಬೇಕು ಎಂದು ಒತ್ತಾಯಿಸಿ ಪೌರಕಾರ್ಮಿಕರು ಪಾಲಿಕೆ ಮಹಾಪೌರ ರಾಮಪ್ಪ ಬಡಿಗೇರ ಮತ್ತು ಪಾಲಿಕೆ ಆಯುಕ್ತರಿಗೆ ಮನವಿ ಸಲ್ಲಿಸಿದರು.
ಈ ಕುರಿತು ಡಾ.ವಿಜಯ ಗುಂಟ್ರಾಳ ಮಾತನಾಡಿ, ಸರ್ಕಾರದ ಆದೇಶ ಪತ್ರದ ಉಲ್ಲೇಖದಂತೆ ರಾಜ್ಯದ ನಗರ ಸ್ಥಳೀಯ ಸಂಸ್ಥೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ನೇರವೇತನ ಪಾವತಿ ಪೌರಕಾರ್ಮಿಕರು ಸೇವೆಯಲ್ಲಿದ್ದಾಗಲೇ ಮೃತರಾದಲ್ಲಿ ಅವರ ಕುಟುಂಬದವರಿಗೆ ರೂ.10 ಲಕ್ಷ ಪರಿಹಾರವನ್ನು ನಗರ ಸ್ಥಳೀಯ ಸಂಸ್ಥೆಗಳ ಸ್ವಂತ ಸಂಪನ್ಮೂಲದಿಂದ ಭರಿಸಲು ಅನುಮೋದನೆ ನೀಡಿ ದಿನಾಂಕ 10.09.2024 ರಂದು ರಾಜ್ಯ ಸರ್ಕಾರ ಆದೇಶ ಹೊರಡಿಸಿ, ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯಲ್ಲಿ 1001 ಪೌರಕಾರ್ಮಿಕರನ್ನು 2020 ಡಿಸೆಂಬರ್ 1 ರಿಂದ ನೇರವೇತನ ಪಾವತಿಗೆ ಅಳವಡಿಸಿದೆ.
ಇದನ್ನು ಓದಿದ್ದೀರಾ? ಹುಬ್ಬಳ್ಳಿ | ಕಸ ವಿಲೇವಾರಿ ವಾಹನ ಹರಿದು 6 ವರ್ಷದ ಬಾಲಕಿ ಸಾವು
ಪ್ರಸ್ತುತ 2025 ಏಪ್ರಿಲ್ 24 ರವರೆಗೆ ಪಾಲಿಕೆಯಲ್ಲಿ ಸ್ವಚ್ಛತಾ ಕಾರ್ಯ ನಿರ್ವಹಿಸುತ್ತಾ ಸೇವೆಯಲ್ಲಿದ್ದಾಗಲೇ ಒಟ್ಟು 45 ಜನ ನೇರವೇತನ ಪೌರಕಾರ್ಮಿಕರು ಮೃತಪಟ್ಟಿದ್ದಾರೆ. ಅದರಲ್ಲಿ ಮಂಜುಳಾ ಜಂಗಪ್ಪ ಕಬ್ಬಿನ ಕುಟುಂಬದವರಿಗೆ ರೂ.10 ಲಕ್ಷ ಪರಿಹಾರ ನೀಡಿದ್ದಾರೆ ಎಂದರು.