ಹುಬ್ಬಳ್ಳಿ-ಧಾರವಾಡ ಅವಳಿನಗರದ ಪೊಲೀಸ್ ಕಮಿಷನರೇಟ್ ಇತಿಹಾಸದಲ್ಲೇ ಮೊದಲ ಬಾರಿಗೆ, ಅಪರಾಧಿ ಹಿನ್ನೆಲೆ ಹೊಂದಿದವರ 45 ಮಂದಿ ಆರೋಪಿಗಳನ್ನು ಒಂದೇ ಬಾರಿಗೆ ಗಡಿಪಾರು ಮಾಡಲು ಆದೇಶ ಹೊರಡಿಸಿದ್ದಾರೆ.
ಧಾರವಾಡ ಎಸ್‌ಪಿ ಸುದ್ದಿಗೋಷ್ಟಿ ನಡೆಸಿದ್ದು, “ಹುಬ್ಬಳ್ಳಿ-ಧಾರವಾಡ ಅವಳಿ ನಗರಗಳಲ್ಲಿ ನಡೆದಿರುವ ಕೊಲೆ, ಸುಲಿಗೆ, ಕೊಲೆಗೆ ಪ್ರಯತ್ನ, ಸರಗಳ್ಳತನ, ಮಾದಕ ವಸ್ತು ಮಾರಾಟ/ಸೇವನೆ, ಭೂ ಮಾಫಿಯಾ, ಮಹಿಳೆ ಮತ್ತು ವಿದ್ಯಾರ್ಥಿನಿಯರ ಅಪಹರಣ, ಚುಡಾಯಿಸುವುದು ಅಲ್ಲದೆ ಸಂಘಟಿತ ಅಪರಾಧಗಳಾದ ಮಟಕಾ, ಗ್ಯಾಂಬ್ಲಿಂಗ್, ಕ್ರಿಕೆಟ್ ಬೆಟ್ಟಿಂಗ್ ಸೇರಿದಂತೆ ಇತರೆ ಕಾನೂನು ಬಾಹಿರ ಚಟುವಟಿಕೆಗಳಲ್ಲಿ ಭಾಗಿಯಾಗಿ ಸಮಾಜದ ಸ್ವಾಸ್ಥ್ಯ ಹಾಳುಮಾಡುವ ಪುಂಡ ಹುಡುಗರ/ರೌಡಿ, ಜನರ ಗುಂಪು ಕಟ್ಟಿಕೊಂಡು ತಿರುಗಾಡುತ್ತ ಸಾರ್ವಜನಿಕರಲ್ಲಿ ಭಯಭೀತಿಯನ್ನು ಹುಟ್ಟುಹಾಕಿ ಕಾನೂನು ಸುವ್ಯವಸ್ಥೆಗೆ ಧಕ್ಕೆ ಮಾಡಬಲ್ಲ ಹಾಗೂ ಅಪಾಯಕಾರಿ ಮನುಷ್ಯರಾಗಿ ಸಮಾಜಕ್ಕೆ ಗಂಡಾಂತರಕಾರಿಯಾಗಿರುವ ಆರೋಪಿಗಳ ವಿರುದ್ಧ ಮುಂಜಾಗೃತಾ ಕ್ರಮದ ಅವಶ್ಯಕತೆಯಿದೆ. ಈ ಹಿನ್ನೆಲೆಯಲ್ಲಿ ಸುಮಾರು ಎರಡರಿಂದ ಮೂರು ತಿಂಗಳಿಂದ ಸ್ಥಳೀಯ ಅಧಿಕಾರಿಗಳೊಂದಿಗೆ ಆರೋಪಿಗಳ ವಿರುದ್ಧ ಇರುವ ಪ್ರಕರಣಗಳನ್ನು ವಿಮರ್ಶೆ ಮಾಡಿದ್ದು, ಆರೋಪಿತರನ್ನು ಗಡಿಪಾರು ಮಾಡುವ ಅವಶ್ಯಕತೆ ಎದುರಾಗಿದೆ” ಎಂದು ತಿಳಿಸಿದರು.
“ಕರ್ನಾಟಕ ಪೊಲೀಸ್ ಕಾಯ್ದೆ-1963 ಕಲಂ 55 ಮತ್ತು 56ರ ಅಡಿಯಲ್ಲಿ ಕ್ರಮ ಕೈಗೊಂಡಿದ್ದು, ಕಾನೂನು ಸುವ್ಯವಸ್ತೆ ಕಾಪಾಡಲು ಮಾದಕ ವಸ್ತುಗಳ ಮುಕ್ತ, ಮಹಿಳೆ ಮತ್ತು ಮಕ್ಕಳ ಸುರಕ್ಷತೆ ಬಗ್ಗೆ ಕ್ರಮ ಕೈಗೊಂಡಿದ್ದು, ಗಡಿಪಾರು ಮುಂದುವರೆಯುತ್ತದೆ” ಎಂದು ಹೇಳಿದ್ದಾರೆ.
“ಗಡಿಪಾರು ವ್ಯಕ್ತಿಗಳ ನಿರ್ದಿಷ್ಟ ಅವಧಿಗೆ ಇದ್ದು, ಗಡಿಪಾರು ವ್ಯಕ್ತಿಗಳ ಚಲನವಲನ ಮತ್ತು ಅವರ ಕಾರ್ಯಚಟುವಟಿಕೆಗಳ ಮೇಲೆ ಸೂಕ್ತ ನಿಗಾವಹಿಸಿ ಈ ಕಚೇರಿಗೆ ಮಾಹಿತಿ ತಿಳಿಸುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ತಿಳಿಸಲಾಗಿದೆ. ಗಡಿಪಾರಾದ ವ್ಯಕ್ತಿಗಳು ನಗರದಲ್ಲಿ ಕಂಡುಬಂದಲ್ಲಿ ಸಾರ್ವಜನಿಕರು ಹಾಗೂ ಮನೆಯ ಅಕ್ಕಪಕ್ಕದವರು, ಸ್ಥಳೀಯ ಪೊಲೀಸ್ ಠಾಣೆಗಳಿಗೆ ನಗರ ನಿಸ್ತಂತು ಕೊಠಡಿ(ಫೋನ್ ನಂಬರ್ 100, 2233555) ಹಾಗೂ 112 ವಾಹನಕ್ಕೆ ತಿಳಿಸುವ ಜವಾಬ್ದಾರಿಯಾಗಿರುತ್ತದೆ. ಈ ಪ್ರಕ್ರಿಯೆಗೆ ನಿಮ್ಮ ಸಹಕಾರವೂ ಕೂಡಾ ಅವಶ್ಯವಿರುತ್ತದೆ” ಎಂದು ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.
ಈ ಸುದ್ದಿ ಓದಿದ್ದೀರಾ? ಬೀದರ್ | ₹5.51 ಕೋಟಿ ಮೌಲ್ಯದ ಮಾದಕ ವಸ್ತು ನಾಶ : ಎಸ್ಪಿ ಪ್ರದೀಪ ಗುಂಟಿ
ಧಾರವಾಡದ ಚೇತನ ಮೇಟಿ, ಅಡ್ಡ ಸೊಹೈಲ್, ಹುಬ್ಬಳ್ಳಿ ಹೊಸೂರಿನ ರಾಹುಲ ಪ್ರಭು ಸೇರಿದಂತೆ 45 ಮಂದಿ ಆರೋಪಿಗಳ ಹಿನ್ನೆಲೆಯ ಮೇರೆಗೆ ಆದೇಶವನ್ನು ಪೋಟೊ ಸಹಿತ ಪೊಲೀಸರು ಬಿಡುಗಡೆ ಮಾಡಿದ್ದಾರೆ.
ಗಡಿಪಾರು ಮಾಡಿರುವವರು ಕಂಡುಬಂದರೆ, ಮಾಹಿತಿ ನೀಡುವಂತೆಯೂ ಕೋರಿರುವ ಪೊಲೀಸರು, ಸಾರ್ವಜನಿಕ ವಲಯದಲ್ಲಿ ಪದೇ ಪದೆ ತೊಂದರೆ ಸೃಷ್ಟಿಸುವವರ ವಿರುದ್ಧ ಕಠಿಣ ಕ್ರಮಕ್ಕೆ ಮುಂದಾಗಿದ್ದಾರೆ.