ಮನರೇಗಾ ಯೋಜನೆ ಅಡಿಯಲ್ಲಿ ಗ್ರಾಮೀಣ ಕೂಲಿ ಕಾರ್ಮಿಕರಿಗೆ ಕೆಲಸ ಕೊಡದೆ ಇದ್ದಾಗ; ಕಳೆದ ಮೂರು ತಿಂಗಳಿನಿಂದ ಕೂಲಿ ಕಾರ್ಮಿಕರು ನಿರಂತರ ಪ್ರತಿಭಟಿಸಿ, ಅಧಿಕಾರಿಗಳನ್ನು ಒತ್ತಾಯಸುತ್ತಾ ಬಂದಿದ್ದು, ಇದೀಗ ಧಾರವಾಡ ಜಿಲ್ಲೆ ಕುಂದಗೋಳ ತಾಲೂಕಿನ ಮತ್ತಗಟ್ಟಿ ಗ್ರಾಮದ ಕಾರ್ಮಿಕರಿಗೆ ಕೆರೆ ಹೂಳೆತ್ತುವ ಕೆಲಸ ಕೊಟ್ಟಿದ್ದು, ಕಾರ್ಮಿಕರು ಸಂತಸಪಟ್ಟಿದ್ದಾರೆ.
ಈ ಕುರಿತು ಹಿರಿಯ ಕೂಲಿ ಕಾರ್ಮಿಕ ರುದ್ರಪ್ಪ ಸುತಗಟ್ಟಿ ಮಾತನಾಡಿ, ಕಳೆದ ಮೂರು ತಿಂಗಳಿಂದ ಕೆಲಸಕ್ಕಾಗಿ ನಾವು ಹೋರಾಟ ನಡೆಸಿದ್ದೇವೆ. ಆದರೆ; ನಮ್ಮ ಮನವಿಗೆ ಗ್ರಾಪಂ ಸ್ಪಂದಿಸದೇ ಸತಾಯಿಸಿದ್ದಾರೆ. ಮತ್ತು ನಮಗೆ ಕೆಲಸ ಕೊಡದೆ ಹೆಬ್ಬೆಟ್ಟು ತಗದುಕೊಂಡು, ಅವ್ಯವಹಾರ ಮಾಡಿದ್ದಾರೆ ಎಂದು ಆರೋಪಿಸಿದರು.
ಕಳೆದ ಒಂದು ವರ್ಷದಿಂದ ಹೆಬ್ಬೆಟ್ಟು ತೆಗೆದುಕೊಂಡು 200 ಕೊಟ್ಟು ಕಳಿಸುತ್ತಾ ಬಂದಿದ್ದಾರೆ. ಕೆಲಸದ ಬಗ್ಗೆ ನಮಗೆ ಗೊತ್ತಿಲ್ಲ. ಇದೀಗ ಗ್ರಾಮೀಣ ಕೂಲಿ ಕಾರ್ಮಿಕರ ಸಂಘಟನೆ ವತಿಯಿಂದ ನಮಗೆ ನ್ಯಾಯ ಸಿಕ್ಕಿದೆ ಎನ್ನುತ್ತಾರೆ ಎಲ್ಲವ್ವ ಹುಬ್ಬಳ್ಳಿ. ನಮ್ಮಲ್ಲಿ ಕೆಲಸ ಮಾಡಬೇಕು ಎಂಬ ಛಲವಿದೆ. ಆದರೆ ಗ್ರಾಮ ಪಂಚಾಯತಿಯವರು ನಮಗೆ ಕೆಲಸ ಕೊಟ್ಟಿಲ್ಲ. ಇವತ್ತು ಕೆಲಸ ಕೊಟ್ಟಿದ್ದಾರೆ. ಮತ್ತು ಮುಖ್ಯವಾಗಿ ಕಾರ್ಮಿಕರು ಕೂಲಿ ಮಾಡುವ ಸಂದರ್ಭದಲ್ಲಿ ಅನಾಹುತಗಳಾದರೆ; ನಮಗೆ ಆರೋಗ್ಯ ಕಿಟ್‌ಗಳನ್ನು ಕೊಡಬೇಕು ಎಂದು ಒತ್ತಾಯಿಸಿದರು.

ಈ ಕುರಿತು ಗ್ರಾಕೂಸ್ ಸಂಘಟನೆಯ ಸಂಚಾಲಕಿ ನಿಂಗಮ್ಮ ಸವಣೂರ ಮಾತನಾಡಿ, ಕಳೆದ ಮೂರು ತಿಂಗಳಿಂದ ಕೂಲಿ ಕಾರ್ಮಿಕರನ್ನು ಅಧಿಕಾರಿಗಳು ಸತಾಯಿಸಿದ್ದಾರೆ. ಇತ್ತೀಚಿಗೆ ಕೆಲಸ ಕೊಟ್ಟರೂ ಎರಡು ದಿನ ಗುಡ್ಡದಲ್ಲಿ ಕೆಲಸ ಕೊಟ್ಟಿದ್ದರು. ನಂತರ ಎನ್ಎಮ್ಆರ್ ಕೊಡದೆ ಕಾರ್ಮಿಕರನ್ನು ಮನೆಯಿಂದ-ಪಂಚಾಯತಿ ಹೀಗೆ ಅಲೆದಾಡಿಸಿದ್ದಾರೆ. ಕೊನೆಗೆ ಎಲ್ಲ ಕೂಲಿಕಾರ್ಮಿಕರು ಒಂದಾಗಿ ಸೆಲಕಿ, ಬುಟ್ಟಿ ತೆಗೆದುಕೊಂಡು ತಾಲೂಕು ಪಂಚಾಯತಿ ಮುತ್ತಿಗೆ ಹಾಕಲು ಮುಂದಾದಾಗ; ಗ್ರಾಮ ಪಂಚಾಯತಿಯವರು ಕೆಲಸ ಕೊಟ್ಟಿದ್ದಾರೆ. ಆದರೆ; ಎನ್ಎಮ್ಆರ್ ಕೊಡಬೇಕು ಎಂದು ಒತ್ತಾಯಿಸಿದರು. ಮತ್ತು ಗ್ರಾಮೀಣ ಕೂಲಿ ಕಾರ್ಮಿಕರಾದ ನಾವು 24 ಜಿಲ್ಲೆಗಳಲ್ಲಿ ಕೆಲಸ ಮಾಡುತ್ತಿದ್ದೇವೆ. ಆದ್ದರಿಂದ ದುಡಿಯು ಜನರಿಗೆ ಅನ್ಯಾಯ ಮಾಡದಿರಿ ಎಂದು ಅಧಿಕರಿಗಳಿಗೆ ಎಚ್ಚರಿಕೆ ನೀಡಿದರು.
ಇದನ್ನು ಓದಿದ್ದೀರಾ? ಧಾರವಾಡ | ಸಿಡಿಲು ಬಡಿದು ಯುವಕ ಸಾವು
ಗ್ರಾಪಂ ಅಭಿವೃದ್ಧಿ ಅಧಿಕಾರಿ ಮರಿಗೌಡ ಪಾಟೀಲ್ ಮಾತನಾಡಿ, ಪ್ರತಿ ವರ್ಷವೂ ಜಲ ಮೂಲಗಳಿಗೆ ಸಂಬಂಧಿಸಿದ ಕೆಲಸಗಳಿಗೆ ಮೊದಲ ಪ್ರಾಧ್ಯಾನ್ಯತೆ ಕೊಡಬೇಕು. ಅನಂತರ ರಸ್ತೆ ನಿರ್ಮಾಣದಂತ ಯೋಜನೆಗಳಿಗೆ ಮುಂದಾಗಬೇಕು. ಹೀಗಾಗಿ ಬದುವು, ಕೆರೆ ನಿರ್ಮಾಣದ ಕ್ರಿಯಾ ಯೋಜನೆಗಳನ್ನು ರೂಪಿಸಿ, ಕಾಮಗಾರಿಗಳನ್ನು ಶುರುಮಾಡಲಾಗಿದೆ. ಕೂಲಿ ಕಾರ್ಮಿಕರು ಹೆಚ್ಚಿನ ಸಂಖ್ಯೆಯಲ್ಲಿ ಕೆಲಸ ಕೇಳಿಕೊಂಡು ಬಂದಿರುವುದು ಖುಷಿ ತಂದಿದೆ ಎಂದರು.