ಜೀವನ ಆರಂಭದಲ್ಲಿ ಕಠಿಣವಾಗಿದ್ದರೂ, ಕಠಿಣ ಪರಿಶ್ರಮ, ಛಲ ಬಿಡದ ದೃಢವಾದ ಮನೋಭಾವನೆಯಿಂದ ಧೈರ್ಗಿಯವಾಗಿ ದೃಢಸಂಕಲ್ಪ ಮಾಡಿದರೆ ಉತ್ತಮ ಸಾಧನೆ ಮಾಡಬಹುದು, ಪ್ರಕಾಶಮಾನವಾದ ಬೆಳಕಿನಂತೆ ಯಶಸ್ವಿಯಾಗಬಹುದು ಎಂದು ಧಾರವಾಡ ಅಂಜುಮನ್ ಸಂಸ್ಥೆಯ ಅಧ್ಯಕ್ಷ ಇಸ್ಮಾಯಿಲ್ ತಮಟಗಾರ ಹೇಳಿದರು.
ಧಾರವಾಡ ನಗರದ ಅಂಜುಮನ್ ಮಹಾವಿದ್ಯಾಲಯದಲ್ಲಿ ಆಯೋಜಿಸಿದ್ದ ಒಂದು ತಿಂಗಳ ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿ ಶಿಬಿರದಲ್ಲಿ ಮಾತನಾಡಿದರು.
“ದಾರಿಯುದ್ದಕ್ಕೂ ಸವಾಲುಗಳನ್ನು ಸ್ವೀಕರಿಸುತ್ತಾ, ಲವಲವಿಕೆಯಿಂದ ಮುಂದಿನ ಪಯಣದತ್ತ ಹೆಜ್ಜೆ ಹಾಕುವುದೇ ಜೀವನ. ಜೀವನವು ಸಹಜವಾಗಿ ಕಷ್ಟ-ಕಾರ್ಪಣ್ಯಗಳಿಂದ ತುಂಬಿರುತ್ತದೆ. ಜೀವನ ಒಡ್ಡುವ ಸವಾಲುಗಳನ್ನು ಎದುರಿಸಲು ಸಿದ್ಧವಿಲ್ಲದಿದ್ದರೆ ಸೋಲು ಕಟ್ಟಿಟ್ಟ ಬುತ್ತಿ” ಎಂದರು.
ಅಂಜುಮನ್ ಸಂಸ್ಥೆಯ ಉಪಾಧ್ಯಕ್ಷ ಬಶೀರ್ ಅಹಮದ್ ಜಾಗಿರ್ದಾರ್ ಮಾತನಾಡಿ, “ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ದಿನಪತ್ರಿಕೆ ಓದುವುದು ಒಂದು ಕಲೆ. ಪ್ರತಿ ಸುದ್ದಿಗಳನ್ನು ಓದುವ ಮುಂಚೆಯೇ, ಅದು ಸ್ಪರ್ಧಾತ್ಮಕ ಪರೀಕ್ಷೆಗೆ ಅನುಕೂಲವೇ ಎಂಬುದನ್ನು ತಿಳಿದು ಓದಬೇಕು” ಎಂದು ಹೇಳಿದರು.
“ಅಂಜುಮನ್ ಮಹಾವಿದ್ಯಾಲಯದಲ್ಲಿ ನಡೆಯುತ್ತಿರುವ ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿಗೆ ಕೇವಲ ₹500 ಇರುವುದರಿಂದ ಬಡ ವಿದ್ಯಾರ್ಥಿಗಳಿಗೆ ತುಂಬಾ ಪ್ರಯೋಜನವಾಗಿದೆ” ಎಂದು ಬಿಎ ಸೆಕೆಂಡ್ ಸೆಮಿಸ್ಟರ್ ವಿದ್ಯಾರ್ಥಿನಿ ಅಲ್ಫಿಯಾ ಹಳ್ಳದಮನಿ ಸಂತಸ ವ್ಯಕ್ತಪಡಿಸಿದರು.
“ಒಂದು ತಿಂಗಳ ಕಾಲ ನುರಿತ ಶಿಕ್ಷಕರಿಂದ ಕೇವಲ 500 ರೂಪಾಯಿಗೆ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತರಬೇತಿಯನ್ನು ನೀಡುತ್ತಿದ್ದಾರೆ. ಈ ಸಂಸ್ಥೆಗೆ ನಾವು ಕೃತಜ್ಞತೆ ಸಲ್ಲಿಸುತ್ತೇವೆ” ಎಂದು ಎಲ್ಲ ವಿದ್ಯಾರ್ಥಿಗಳು ಹೇಳಿದರು.
ಈ ಸುದ್ದಿ ಓದಿದ್ದೀರಾ? ಗದಗ | ಅಕ್ರಮ ಗಣಿಗಾರಿಕೆಯಲ್ಲಿ ನಿರಂತರ ತೊಡಗಿದಲ್ಲಿ ಗಡಿಪಾರು ಶಿಕ್ಷೆ: ಜಿಲ್ಲಾಧಿಕಾರಿ ವೈಶಾಲಿ
ವೇದಿಕೆಯಲ್ಲಿ ಪ್ರಾಚಾರ್ಯ ಮಕಾನದಾರ, ಪ್ರಾಧ್ಯಾಪಕ ಡಾ ರಾಹುತ್ ಉನ್ನಿಸಾ, ಪ್ರೊಫೆಸರ್ ಕಂಕಣಿ, ಡಾ ಎನ್ ಬಿ ನಾಲತವಾಡ, ಪತ್ರಿಕೋದ್ಯಮ ಮುಖ್ಯಸ್ಥ ಡಾ. ಎಸ್ ಎಸ್ ಅದೋನಿ ಸೇರಿದಂತೆ ಬಹುತೇಕ ವಿದ್ಯಾರ್ಥಿಗಳು ಇದ್ದರು.
