ಧಾರವಾಡ ನಗರದ 19ನೇ ವಾರ್ಡ್ನ ಹನುಮಂತ ನಗರ ಬಡಾವಣೆಯಲ್ಲಿ ದುಷ್ಕರ್ಮಿಯೊಬ್ಬ ರಾತ್ರೋರಾತ್ರಿ ಮನೆಯನ್ನು ಜೆಸಿಬಿಯಿಂದ ಧ್ವಂಸಗೊಳಿಸಿರುವ ಘಟನೆ ನಡೆದಿದೆ. ಆರೋಪಿ ವಿರುದ್ಧ ಎಫ್ಐಆರ್ ದಾಖಲಾಗಿದೆ.
2001ರಲ್ಲಿ ಹನುಮಂತ ನಗರ ಬಡಾವಣೆಯಲ್ಲಿ ಡಾ. ಸತೀಶ್ ಶೆಟ್ಟಿ ಎಂಬುವರ ತಂದೆ 6 ಗುಂಟೆ ಜಾಗವನ್ನು ಖರೀದಿಸಿದ್ದರು. ಅಲ್ಲಿಯೇ ಡಾ. ಸತೀಶ್ ಚಿಕ್ಕದೊಂದು ಮನೆಯನ್ನು ಕಟ್ಟಿದ್ದರು. ಆ ಮನೆಯಲ್ಲಿ ಸತೀಶ್ ಅವರಿಗೆ ಪರಿಚಯವಿದ್ದ ವ್ಯಕ್ತಿಯೊಬ್ಬ ವಾಸವಾಗಿದ್ದ.
ಇತ್ತೀಚಿಗೆ ಫಕ್ಕೀರಪ್ಪ ಮನಿಗೇನಿ ಎನ್ನುವ ವ್ಯಕ್ತಿ ಆಗಾಗ ಬಂದು ಸ್ಥಳೀಯ ಬಡಾವಣೆ ಜನರಿಗೆ, ಇದು ನನ್ನ ಜಮೀನು ಎಂದು ಕ್ಯಾತೆ ತೆಗೆಯಲು ಆರಂಭಿಸಿದ್ದ. ಇದೇ ಫಕ್ಕಿರಪ್ಪ ಮನಿಗೇನಿ ಬುಧವಾರ ರಾತ್ರಿ ಏಕಾಏಕಿ ಡಾ. ಸತೀಶ್ ಅವರ ಮನೆಯನ್ನು ಜೆಸಿಬಿಯಿಂದ ಕೆಡವಿ ಹಾಕಿದ್ದಾನೆ. ಅದೃಷ್ಟವಶಾತ್ ಘಟನೆ ನಡೆದಾಗ ಆ ಮನೆಯಲ್ಲಿ ಯಾರೂ ಇರಲಿಲ್ಲ.
ಇನ್ನು ಘಟನೆ ನಡೆದ ಕೂಡಲೇ ಸ್ಥಳೀಯರು ಜೆಸಿಬಿ ವಾಹನ ಚಾಲಕನನ್ನು ವಶಕ್ಕೆ ಪಡೆದು ಜೆಸಿಬಿಯ ಎಲ್ಲ ಟೈಯರ್ಗಳ ಗಾಳಿ ತೆಗೆದಿದ್ದಾರೆ. ಕಳೆದ ಕೆಲ ದಿನಗಳಿಂದ ಜೆಸಿಬಿ ಮೂಲಕ ಇಲ್ಲಿ ಕೆಲಸ ಮಾಡಿಸುತ್ತಿರುವ ಫಕ್ಕೀರಪ್ಪ, ಈ ಬಡಾವಣೆಯ ಜಾಗ ತನ್ನದು ಎಂದು ಇಲ್ಲಿನ ಕೆಲವು ಮನೆಗಳ ಕಂಪೌಂಡ್ ಕೂಡ ಒಡೆದು ಹಾಕಿದ್ದಾನೆ, ಎಂದು ಸ್ಥಳೀಯರು ಆರೋಪಿಸಿದ್ದಾರೆ. ಅಲ್ಲದೆ ಆರೋಪಿ, ಚರಂಡಿ ಹಾಗೂ ಕುಡಿಯುವ ನೀರಿನ ಪೈಪುಗಳನ್ನು ಕೂಡ ಕತ್ತರಿಸಿದ್ದಾನಂತೆ. ಇನ್ನು ವಿದ್ಯುತ್ ಕಂಬಗಳ ಸುತ್ತಲಿನ ಮಣ್ಣನ್ನು ತೆಗೆದ ಕಾರಣ, ಅವು ಬೀಳುವ ಸ್ಥಿತಿಗೆ ಬಂದಿವೆ.
ಇಂತಹ ವ್ಯಕ್ತಿಗಳ ವಿರುದ್ಧ ಕೂಡಲೇ ಕ್ರಮ ತೆಗೆದುಕೊಳ್ಳಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ. ಡಾ. ಸತೀಶ್ ಶೆಟ್ಟಿ ಮತ್ತು ಸ್ಥಳೀಯರು ನೀಡಿರುವ ದೂರಿನ ಹಿನ್ನೆಲೆಯಲ್ಲಿ ಫಕ್ಕೀರಪ್ಪನ ಮೇಲೆ ವಿದ್ಯಾಗಿರಿ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ ಹಾಗೂ ಉಸ್ತುವಾರಿ ಸಚಿವ ಸಂತೋಷ ಲಾಡ್ ಅವರಿಗೂ ಈ ಬಗ್ಗೆ ಸ್ಥಳೀಯರು ಮನವಿ ಸಲ್ಲಿಸಿದ್ದಾರೆ.
ಮನೆಯಲ್ಲಿ ಮಹಿಳೆಯರಷ್ಟೇ ಇರುವಾಗ, ಬಂದು ಬೆದರಿಕೆ ಹಾಕುತ್ತಾರೆ. ಇವರ ಕಿರುಕುಳದಿಂದ ನಮಗೆ ಆತಂಕವಾಗಿದೆ. ಇವರಿಗೆಲ್ಲ ಕಾನೂನು ಅನ್ನೋದೇ ಇಲ್ಲದಂತಾಗಿದೆ. ಇಪ್ಪತ್ತು-ಮೂವತ್ತು ವರ್ಷಗಳಿಂದ ಮನೆ ಕಟ್ಟಿಕೊಂಡು ಇರೋರಿಗೆಲ್ಲ ಇದೀಗ ಕಿರುಕುಳ, ಬೆದರಿಕೆ ಶುರುವಾಗಿವೆ. ಈ ರೀತಿ ರಾತ್ರೋರಾತ್ರಿ ಬಂದು ಜೆಸಿಬಿಯಿಂದ ಮನೆ ಬೀಳಿಸೋದು ಅಂದರೆ ನಮ್ಮಂಥವರು ಎಲ್ಲಿಗೆ ಹೋಗಬೇಕು. ಕೂಡಲೇ ಇಂಥವರ ಮೇಲೆ ಜಿಲ್ಲಾಡಳಿತ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.