ಧಾರವಾಡ ಜಿಲ್ಲೆಯ ಅಣ್ಣಿಗೇರಿ ತಾಲೂಕು ಬಸಾಪುರ ಗ್ರಾಮದಲ್ಲಿ ಹಲವು ವರ್ಷಗಳಿಂದ ಹಳ್ಳದ ಪಕ್ಕದಲ್ಲಿ ವಾಸಿಸುತ್ತಿದ್ದ ಪರಿಶಿಷ್ಟ ಸಮುದಾಯಗಳು, ಕಳೆದ ಹದಿನೈದು ವರ್ಷಗಳ ಹಿಂದೆ ಹರಿದು ಬಂದಿದ್ದ ಹಳ್ಳಕ್ಕೆ ಮನೆಗಳೆಲ್ಲಾ ನಾಶವಾಗಿದ್ದವು. ಪ್ರಸ್ತುತ ಹೊಸ ಊರಿನಲ್ಲಿ ಆಶ್ರಯ ನಿವಾಸ ದೊರಕದ ಕಾರಣ ತಮಗೆ ಬರಬೇಕಿದ್ದ ಖುಲ್ಲಾ ಜಾಗಗಳಿಗಾಗಿ ಪರದಾಡುತ್ತಿದ್ದಾರೆ.
ಕಳೆದ 15ವರ್ಷಗಳ ಹಿಂದೆ ಹಳ್ಳ ತುಂಬಿ ನೆರೆ ಪ್ರವಾಹಕ್ಕೆ ಇಲ್ಲಿನ ನಿವಾಸಿಗಳೆಲ್ಲ ತತ್ತರಿಸಿದ್ದರು. ಇದರಲ್ಲಿ ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡ ಹಾಗೂ ಅಲ್ಪಸಂಖ್ಯಾತ, ಹಿಂದುಳಿದವರೂ ಒಳಗೊಂಡಿದ್ದಾರೆ. ಆ ಸಮಯದಲ್ಲಿ ದೇಸಾಯಿ ಮನೆತನದವರು ನಿರಾಶ್ರಿತರಿಗಾಗಿ ಉಚಿತ ಜಾಗವನ್ನು ಅನುಕೂಲ ಮಾಡಿಕೊಟ್ಟಿದ್ದಾರೆ. ಧರ್ಮಸ್ಥಳದ ವೀರೇಂದ್ರ ಹೆಗ್ಗಡೆಯವರು ನಿರಾಶ್ರಿತರಿಗೆ ಬೆಂಬಲವಾಗಿ ನಿಲ್ಲಾತ್ತಾರೆ. ದುರಂತವೇನೆಂದರೆ ಮೂಲದಲ್ಲಿ ವಾಸಿಸುತ್ತಿದ್ದವರಿಗೆ ನ್ಯಾಯವಾಗಿ ದೊರೆಯಬೇಕಿದ್ದ ಆಶ್ರಯ ಮನೆಗಳೇ ದೊರೆಯಲಿಲ್ಲ.
“ಗ್ರಾಮದ ದೊಡ್ಡ ದೊಡ್ಡ ಕೈಗಳು ಅಧಿಕಾರಿಗಳೊಂದಿಗೆ ಇದ್ದ ನೇರ ಸಂಪರ್ಕದ ಪರಿಣಾಮ ಮೂಲದಲ್ಲಿ ವಾಸವಿಲ್ಲದೆ, ಈ ಗ್ರಾಮದವರೂ ಅಲ್ಲದೆ, ನೆರೆ ಪ್ರವಾಹಕ್ಕೂ ಸಿಲುಕದೆ ಇರುವ ಕೆಲವರಿಗೆ ಆಶ್ರಯ ಮನೆಗಳು ದೊರೆತವು. ಆದರೆ ಮೂಲದಲ್ಲಿ ಪ್ರವಾಹಕ್ಕೆ ಒಳಗಾದ ಇನ್ನೂ ಕೆಲವರಿಗೆ ಜಾಗಗಳೇ ಸಿಕ್ಕಿಲ್ಲ” ಎಂದು ಆಶ್ರಯ ವಂಚಿತರು ಈ ದಿನ.ಕಾಮ್‌ನೊಂದಿಗೆ ತಮ್ಮ ಅಳಲನ್ನು ತೋಡಿಕೊಳ್ಳುತ್ತಾರೆ.
“ಜಾಗಕ್ಕಾಗಿ ಹಲವು ಬಾರಿ ಸಂಬಂಧಪಟ್ಟ ಅಣ್ಣಿಗೇರಿ ತಾಲೂಕು ದಂಡಾಧಿಕಾರಿಗಳಿಗೆ, ಹಿಂದಿನ ಜಿಲ್ಲಾಧಿಕಾರಿಗಳಿಗೆ ಕಳೆದ ನಾಲ್ಕೈದು ವರ್ಷಗಳಿಂದ ಮನವಿ ಸಲ್ಲಿಸುತ್ತ ಬಂದಿದ್ದರೂ ಯಾರೂ ತಲೆಕೆಡಿಸಿಕೊಳ್ಳುತ್ತಿಲ್ಲ. ತಾಲೂಕು ದಂಡಾಧಿಕಾರಿಗಳು ಊರಿನ ಕೆಲವು ದೊಡ್ಡ ದೊಡ್ಡವರ ಕಡೆಯಿಂದ ಹಣ ಪಡೆದು ದುಡ್ಡು ಕೊಟ್ಟವರಿಗೆ ಜಾಗಗಳನ್ನು ಮಂಜೂರು ಮಾಡಿದ್ದಾರೆ. ನಮ್ಮ ಜಾಗಕ್ಕಾಗಿ ನಾವು ನ್ಯಾಯವನ್ನು ಕೇಳಲು ಮುಂದಾದರೆ ಕೆಲವರ ಮೇಲೆ ದೈಹಿಕ ದೌರ್ಜನ್ಯ, ಹಲ್ಲೆಗಳೂ ನಡೆದಿವೆ. ಇದೇ ಚಿಂತೆಯಲ್ಲಿ ಒಬ್ಬರು ಜೀವವನ್ನೂ ಕಳೆದುಕೊಂಡಿದ್ದೂ ಉಂಟು” ಎಂದು ಸ್ಥಳೀಯ ಸಂತ್ರಸ್ತರೊಬ್ಬರು ಅವಲತ್ತುಕೊಂಡರು.
“15 ವರ್ಷದ ಹಿಂದೆ ಡೇಂಜರ್ ಜೋನ್‌ನಲ್ಲಿದ್ದ ನಾವು ಕಳೆದ ನಾಲ್ಕು ವರ್ಷಗಳಿಂದ ನಮ್ಮ ಮನೆಗಳಿಗಾಗಿ ಎಲ್ಲ ಸರ್ಕಾರಿ ಕಚೇರಿಗಳಿಗೆ ಅಲೆದಾಡುತ್ತಿದ್ದೇವೆ. ಆದರೂ ಯಾರೂ ಸಹಿತ ನಮ್ಮ ಕಡೆಗೆ ತಿರುಗಿಯೂ ನೋಡುತ್ತಿಲ್ಲ. ಹಣದ ಆಸೆಗಾಗಿ ದುಡ್ಡಿದ್ದವರಿಗೆ ಹೊಸ ಊರಿನಲ್ಲಿ ಜಾಗಗಳನ್ನು ಕೊಟ್ಟು ಗ್ರಾಮದ ಕೆಲವರೊಂದಿಗೆ ಅಧಿಕಾರಿಗಳು ಕೈಜೋಡಿಸಿದ್ದಾರೆ. ಆದ್ದರಿಂದ ನಮಗೆ ನ್ಯಾಯ ಸಿಗುತ್ತಿಲ್ಲ” ಎಂದು ಬೇಸರ ವ್ಯಕ್ತಪಡಿಸಿದರು.
“ಶತಮಾನಗಳಿಂದಲೂ ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡದ ಮೇಲೆ ದೌರ್ಜನ್ಯಗಳಾಗಿವೆ. ಈಗಲೂ ಅದೇ ನಡೆಯುತ್ತಿದೆ. ಮೂಲದಲ್ಲಿ ಹಳ್ಳದ ಪಕ್ಕ ವಾಸವಿದ್ದವರು ಬಹುತೇಕರು ಪರಿಶಿಷ್ಟ ಜನಾಂಗದವರೇ. 15 ಮನೆ ಪರಿಶಿಷ್ಟ ಜಾತಿ/ಪಂಗಡದಲ್ಲಿ ಕೇವಲ ಇಬ್ಬರಿಗೆ ಮಾತ್ರ ನೆರೆಹಾವಳಿಯ ಪರಿಹಾರವಾಗಿ ಮನೆಗಳು ದೊರೆತಿವೆ. ಈ ಸಮಸ್ಯೆಯ ಕುರಿತು ಜಿಲ್ಲಾಧಿಕಾರಿಗಳ ಗಮನಕ್ಕೂ ತರಲಾಗಿದೆ. ಅವರು ಬಂದು ನೋಡಿ, ಸಾರಾಸಗಟವಾಗಿ ಪರಿಶೀಲಿಸಿ, ನ್ಯಾಯ ಅನ್ಯಾಯಗಳ ತೀರ್ಮಾನಿಸಿ, ಕಾರ್ಯೊನ್ಮುಖಗೊಳಿಸಬಹುದು” ಎಂದು ಯುವ ಹೋರಾಟಗಾರ ಸಂಜು ಪೂಜಾರಿ ಹೇಳುತ್ತಾರೆ.
“ಇನ್ನು ಗ್ರಾಮವು ಅನೇಕ ಮೂಲಭೂತ ಸಮಸ್ಯೆಗಳ ತಾಣವಾಗಿದ್ದು, ಗ್ರಾಮದಲ್ಲಿ ಒಳಚರಂಡಿ, ರಸ್ತೆ, ಮುಖ್ಯವಾಗಿ ಕುಡಿಯುವ ನೀರಿನ ಸಮಸ್ಯೆ ಇದೆ. ಪರಿಶಿಷ್ಟರು ನೀರು ತುಂಬಿಕೊಳ್ಳಲು ಪಕ್ಕದ ಉತ್ತಮರೆನಿಸಿಕೊಂಡವರ ಓಣಿಗೆ ಹೋದರೆ ಜಾತಿ ನಿಂದನೆ ಮಾಡುತ್ತಾರೆ. ʼಹೊಲೆಯರು ಬಂದು ಬಿಡುತ್ತಾರೆ, ಇನ್ನು ನಮ್ಮ ಪೂಜೆ ಪುನಸ್ಕಾರಗಳು ಸುಸೂತ್ರವಾಗಿ ನೆರವೇರುವುದಿಲ್ಲʼವೆಂದು ನಿಂದಿಸಿದ ಅದೆಷ್ಟೊ ಉದಾಹರಣೆಗಳಿವೆ” ಎಂದರು.
“ನಮಗೆ ಪ್ರತ್ಯೇಕ ಕುಡಿಯುವ ನೀರಿನ ವ್ಯವಸ್ಥೆ ಮಾಡಲು ಮನವಿ ಮಾಡಿಕೊಂಡ ಮೇಲೆ, ಪರಿಶಿಷ್ಟ ಏರಿಯಾಗಳಿಗೆ ಕುಡಿಯುವ ನೀರಿನ ಜಲಜೀವನ ಯೋಜನೆಯನ್ನು ತಂದಿದ್ದು, ಖುಷಿಯ ವಿಚಾರ. ಆದರೆ ಒಂದು ಕೊಡ ನೀರು ತುಂಬಬೇಕಾದರೆ ಒಂದು ಗಂಟೆಯಾದರೂ ಕಾಯಬೇಕು. ಅಷ್ಟೊಂದು ನಿಧಾನವಾಗಿ ನೀರು ಬರುತ್ತದೆ. ಇನ್ನು ಗ್ರಾಮದ ಹೆಬ್ಬಾಗಿಲ ಬಳಿ ಬಸ್ ನಿಲ್ದಾಣವೇ ಇಲ್ಲ. ಪ್ರಯಾಣಿಕರು ರಸ್ತೆ ಮಗ್ಗುಲಲ್ಲೇ ಬಿಸಿಲು ಮಳೆಯೆನ್ನದೆ ಬಸ್‌ಗಳಿಗಾಗಿ ಕಾದು ಕುಳಿತುಕೊಳ್ಳುವ ಪರಿಸ್ಥಿತಿ ಇದೆ. ಅಲ್ಲೊಂದು ಬಸ್ ನಿಲ್ದಾಣ ಕಟ್ಟಿಸಬೇಕು” ಎಂದು ಗ್ರಾಮಸ್ಥರು ಒತ್ತಾಯಿಸಿದರು.
ಇದನ್ನು ಓದಿದ್ದೀರಾ? ಧಾರವಾಡ | ಧಾರಾಕಾರ ಸುರಿದ ಮಳೆ: ಜನಜೀವನ ಅಸ್ಥವ್ಯಸ್ತ
“ನೆರೆ ಹಾವಳಿಗೆ ಸಿಲುಕಿ ಮನೆಗಳನ್ನು ಕಳೆದುಕೊಂಡಿರುವ ಫಲಾನುಭವಿಗಳಿಗೆ ಇನ್ನಾದರೂ ನ್ಯಾಯ ಸಿಗುತ್ತದೆಯೇ? ಅಧಿಕಾರಿ ವರ್ಗ, ಶಾಸಕರು, ಜಿಲ್ಲಾಡಳಿತ ಗಮನ ಹರಿಸುವರೆ ಕಾದು ನೋಡಬೇಕಿದೆ” ಎಂದು ಸ್ಥಳೀಯರು ತವಕಿಸುತ್ತಿದ್ದಾರೆ.

ಧಾರವಾಡ ಜಿಲ್ಲೆಯ ಕಲಘಟಗಿ ತಾಲೂಕಿನ ಬಗಡಗೇರಿ ಗ್ರಾಮದಲ್ಲಿ ಮಳೆ ಹೆಚ್ಚಾಗಿ ಮನೆಗಳು ಗೋಡೆ ಕುಸಿತ 🙏